ಪ್ರಮುಖ ಸುದ್ದಿ

ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್ ಇನ್ನಿಲ್ಲ

ರಾಜ್ಯ(ಮಂಗಳೂರು)ಅ.11:-  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್  ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಅವರಿಗೆ 69ವರ್ಷ ವಯಸ್ಸಾಗಿತ್ತು.  ಅವರು ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಪುತ್ರರಾದ  ಸಂಗೀತ ನಿರ್ದೇಶಕರಾಗಿರುವ ಮಣಿಕಾಂತ್​ ಕದ್ರಿ ಮತ್ತು ದುಬೈನಲ್ಲಿ ಉದ್ಯೋಗಿಯಾಗಿರುವ ಗುರುಪ್ರಸಾದ್​ ಕದ್ರಿ ಹಾಗೂ ಅಪಾರ ಅಭಿಮಾನಿಗಳನ್ನು, ಬಂಧುಬಳಗವನ್ನು ಅಗಲಿದ್ದಾರೆ. ಮಂಗಳೂರು ಸಮೀಪದ ಪದವಿನಂಗಡಿಯಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ಕರತರಲಾಗುತ್ತಿದ್ದು,  ದುಬೈನಲ್ಲಿರುವ ಮಗ ಗುರುಪ್ರಸಾದ್​ ಕದ್ರಿ ಬಂದ ಬಳಿಕ ಅಂತಿಮ ಕಾರ್ಯ ಇಂದು ನೆರವೇರಲಿದೆ ಎಂದು ಹೇಳಲಾಗಿದೆ.

1949, ಡಿಸೆಂಬರ್​ 11 ರಂದು ತನಿಯಪ್ಪ ಹಾಗೂ ಗಂಗಮ್ಮ ದಂಪತಿಯ ಮಗನಾಗಿ ಕದ್ರಿ ಗೋಪಾಲನಾಥ್​ ಅವರು ಜನಿಸಿದರು. ತಮ್ಮ ತಂದೆ ಸಂಗೀತ ಪ್ರಿಯರಾಗಿದ್ದರಿಂದ ಹುಟ್ಟಿನಿಂದಲೇ ಕದ್ರಿ ಅವರಿಗೆ ಸಂಗೀತದ ಮೇಲೆ ಆಸಕ್ತಿ ಬೆಳೆದು, ಚಿಕ್ಕವಯಸ್ಸಿನಲ್ಲೇ ಮೈಸೂರು ಅರಮನೆಯ ಬ್ಯಾಂಡ್​ ಸೆಟ್​ನಲ್ಲಿ ಸ್ಯಾಕ್ಸೋಫೋನ್ ನುಡಿಸಿ ಎಲ್ಲರ ಹುಬ್ಬೇರಿಸಿದ್ದರು. ಸ್ಯಾಕ್ಸೋಫೋನ್ ಧ್ವನಿಗೆ ಹೆಚ್ಚು ಆಕರ್ಷಿತರಾದ ಕದ್ರಿ ಅವರು ಅದರಲ್ಲೇ ಪದವಿ ಪಡೆಯಲು ನಿರ್ಧರಿಸಿದರು. ಪಾಶ್ಚಿಮಾತ್ಯ ಸಂಗೀತ ಸಾಧನಗಳ ಮೇಲೂ ಹಿಡಿತ ಸಾಧಿಸಲು ಕದ್ರಿ ಅವರು ಸುಮಾರು 20 ವರ್ಷ ಶ್ರಮಪಟ್ಟು  ಕೊನೆಗೆ “ಸ್ಯಾಕ್ಸೋಫೋನ್​ ಚಕ್ರವರ್ತಿ” ಎಂಬ ಕೀರ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು  ಕದ್ರಿ ಗೋಪಾಲನಾಥರ ಮುಡಿಗೇರಿವೆ.

ಅವರ ನಿಧನಕ್ಕೆ ಕಲಾರಾಧಕರು ಕಂಬನಿ ಮಿಡಿದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: