ಮೈಸೂರು

ಅಂಬೇಡ್ಕರ್ ನ್ನು ರಾಜಕಾರಣಿಗಳು ಖಾಲಿ ಚೆಕ್ ನಂತೆ ಬಳಸಿಕೊಳ್ಳುತ್ತಿದ್ದಾರೆ : ಪ್ರೊ.ದಯಾನಂದ ಮಾನೆ ಬೇಸರ

ಅಂಬೇಡ್ಕರ್ ಅವರನ್ನು ರಾಜಕಾರಣಿಗಳು ಹಾಗೂ ದಲಿತರು ಖಾಲಿ ಚೆಕ್‍ನಂತೆ ತಮ್ಮ ವೈಯಕ್ತಿಕ ವಿಚಾರಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಬೇಸರ ವ್ಯಕ್ತಪಡಿಸಿದರು.
ಭಾನುವಾರ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಹಾಗೂ ದಲಿತ ವಿಮೋಚನೆಯ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ 2015ರ ಕುರಿತು ವಕೀಲರುಗಳಿಗೆ ಒಂದು ದಿನದ ಕಾರ್ಯಾಗಾರ ಮತ್ತು ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬೇಡ್ಕರ್ ದಲಿತರ ಬದುಕನ್ನು ಕಂಡು ಮಮ್ಮಲ ಮರುಗುತ್ತಿದ್ದರು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಅಗಲಿರುಳೆನ್ನದೆ ಶ್ರಮಿಸಿದರು. ಅದರ ಪ್ರತಿಫಲವಾಗಿ ವಿಶ್ವದಲ್ಲೇ ಮಾದರಿಯಾದ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಹಿಂದುಳಿದವರ ಪಾಲಿನ ದೇವರಾಗಿರುವ ಅಂಬೇಡ್ಕರ್ ಅವರನ್ನು ತಂದೆ ತಾಯಿಗಳಿಗಿಂತಲೂ ಹೆಚ್ಚಿನ ಗೌರವ ಭಾವನೆಯಿಂದ ಕಾಣುತ್ತೇವೆ. ಆದರೆ, ದಲಿತರ, ಶೋಷಣೆಗೆ ಒಳಗಾದವರ ಜೀವನವನ್ನು ಸುಂದರವಾಗಿಸಿದವರನ್ನು ಇಂದು ಒಂದು ವರ್ಗಕ್ಕೆ, ಜಾತಿಗೆ ಸೀಮಿತಗೊಳಿಸಿ ಸಂಕುಚಿತ ಭಾವನೆಯಿಂದ ಕಾಣಲಾಗುತ್ತಿದೆ. ಎಲ್ಲರೂ ಅವರನ್ನು ವೈಯಕ್ತಿಕ ವಿಚಾರಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಸಮಾಜದಲ್ಲಿರುವ ಅಸಮಾನತೆ ಇನ್ನೂ ಜೀವಂತವಾಗಿದ್ದು ಹಿಂದುಳಿದ ವರ್ಗದವರನ್ನು ಅತ್ಯಂತ ತುಚ್ಛವಾಗಿ ಕಾಣುತ್ತಿದ್ದಾರೆ. ಧರ್ಮ ಹಾಗೂ ಕಾನೂನಿನ ಮಧ್ಯೆ ದಲಿತರು ಸಿಲುಕಿ ಕೊಂಡಿದ್ದಾರೆ. ಇದೆಲ್ಲವನ್ನೂ ಮೆಟ್ಟಿ ನಿಲ್ಲಬೇಕಾದರೆ, ಅಂಬೇಡ್ಕರ್ ಅವರ ಸಮಸಮಾಜದ ಕನಸನ್ನು ನನಸು ಮಾಡಬೇಕಾದರೆ ದಂಗೆ ಏಳಬೇಕು. ಅನ್ಯಾಯದ ವಿರುದ್ಧ ಹೋರಾಡಬೇಕು. ಅಧಿಕಾರವಿದ್ದರೆ ಸಮಾಜ ಸುಧಾರಣೆ ಕಾರ್ಯ ಸುಲಭವಾಗುವುದರಿಂದ ದಲಿತರು ಉನ್ನತ ಸ್ಥಾನಕ್ಕೇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಜಿ.ಕೆ.ಘೋಖಲೆ, ನ್ಯಾಷನಲ್ ಯೂತ್ ಮೂವ್‍ಮೆಂಟ್ ಫಾರ್ ಜಸ್ಟೀಸ್‍ನ ಕಾರ್ಯಕ್ರಮ ಸಮನ್ವಯಾಧಿಕಾರಿ ಅಭಿರಾಮಿ, ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್, ದಲಿತ ವಿಮೋಚನೆಯ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ ಕೌತಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

comments

Related Articles

error: