ಕ್ರೀಡೆ

ಕೊಹ್ಲಿ ಶತಕ, ರಹಾನೆ ಅರ್ಧಶತಕ: 300ರ ಗಡಿದ ಟೀಂ ಇಂಡಿಯಾ ಸ್ಕೋರ್

ಪುಣೆ,ಅ.11- ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾದ ಮೊತ್ತ 300ರ ಗಡಿ ದಾಟಿದೆ. ಅಲ್ಲದೆ, ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ, ಅಜಿಂಕ್ಯ ರಹಾನೆ ಅರ್ಧ ಶತಕ ಸಿಡಿಸಿದ್ದಾರೆ.

ನಾಯಕನಾಗಿ 50ನೇ ಪಂದ್ಯದಲ್ಲಿ ವಿರಾಟ್ ಈ ಸ್ಮರಣೀಯ ದಾಖಲೆ ಬರೆದಿದ್ದಾರೆ. ಇದು ವಿರಾಟ್‌ ಬ್ಯಾಟ್‌ನಿಂದ ಸಿಡಿದ 26ನೇ ಟೆಸ್ಟ್ ಶತಕವಾಗಿದೆ. ಹಾಗೆಯೇ ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 69 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ ಏಕದಿನದಲ್ಲಿ 43 ಶತಕಗಳು ಸೇರಿವೆ. ವಿರಾಟ್ ಕೊಹ್ಲಿ ತಮ್ಮ 81 ಟೆಸ್ಟ್ ಪಂದ್ಯದ 138ನೇ ಇನ್ನಿಂಗ್ಸ್‌ನಲ್ಲಿ ಈ ಸ್ಮರಣೀಯ ಮೈಲುಗಲ್ಲನ್ನು ತಲುಪಿರುವುದು ಗಮನಾರ್ಹವೆನಿಸುತ್ತದೆ. ಕೊಹ್ಲಿ ಶತಕವು 174 ಎಸೆತಗಳಲ್ಲಿ ದಾಖಲಾಗಿದ್ದವು.

26 ಶತಕಗಳ ಮೂಲಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಗ್ಯಾರಿ ಸೋಬರ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶೇಷವೆಂದರೆ ಕಳೆದ ಆ್ಯಶಸ್ ಸರಣಿಯಲ್ಲಿ ವಿರಾಟ್‌ರನ್ನು ಹಿಂದಿಕ್ಕಿರುವ ಸ್ಮಿತ್ 26ನೇ ಶತಕ ಬಾರಿಸಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯನ್ನು 51 ಶತಕಗಳೊಂದಿಗೆ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದಾರೆ.

ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತೀಯ ಬ್ಯಾಟ್ಸ್ಮನ್ಗಳು: ಸಚಿನ್ ತೆಂಡೂಲ್ಕರ್: 51, ರಾಹುಲ್ ದ್ರಾವಿಡ್: 36, ಸುನಿಲ್ ಗವಾಸ್ಕರ್: 34, ವಿರಾಟ್ ಕೊಹ್ಲಿ: 26*.

ಎಚ್ಚರಿಕೆಯ ಇನ್ನಿಂಗ್ಸ್ ಕಟ್ಟಿದ ಉಪನಾಯಕ ಅಜಿಂಕ್ಯ ರಹಾನೆ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಗಮನ ಸೆಳೆದರು. ರಹಾನೆ ಅರ್ಧಶತಕವು 141 ಎಸೆತಗಳಲ್ಲಿ ದಾಖಲಾಗಿದ್ದವು.

273/3 ಎಂಬಲ್ಲಿದ್ದ ದಿನದಾಟ ಆರಂಭಿಸಿದ ಟೀಮ್ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಎಚ್ಚರಿಕೆಯ ಆರಂಭವೊದಗಿಸಿದರು. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಶತಕದ ಜೊತೆಯಾಟ ನೀಡಿದರು.

ದಿನದ ಮೊದಲ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ ನಿಧಾನವಾಗಿ ರನ್ ಪೇರಿಸಿದರು. ವಿರಾಟ್ ಕೊಹ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಅಜಿಂಕ್ಯ ರಹಾನೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅಲ್ಲದೆ ನಾಲ್ಕನೇ ವಿಕೆಟ್‌ಗೆ ಶತಕದ ಜತೆಯಾಟದಲ್ಲಿ ಭಾಗಿಯಾದರು.

ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ ವೈಫಲ್ಯ ಅನುಭವಿಸಿದರೂ ಮಯಾಂಕ್ ಅಗರ್ವಾಲ್ ಶತಕದ ನೆರವಿನಿಂದ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 273 ರನ್ ಪೇರಿಸಿತ್ತು. (ಎಂ.ಎನ್)

 

Leave a Reply

comments

Related Articles

error: