
ಮೈಸೂರು
ಹೆಣ್ಣು ಮಗಳಿಲ್ಲದೇ ಸುಸಂಸ್ಕೃತ ಸಮಾಜವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ : ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ
'ಅಂತರರಾಷ್ಟ್ರೀಯ ಹೆಣ್ಣು ಮಕ್ಕಳನ್ನು ರಕ್ಷಿಸುವ ದಿನಾಚರಣೆ'
ಮೈಸೂರು,ಅ.11:- ಹೆಣ್ಣು ಮಗಳಿಲ್ಲದೇ ಸುಸಂಸ್ಕೃತ ಸಮಾಜವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ತಿಳಿಸಿದರು.
ಅವರಿಂದು ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಾಹಣ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ‘ಅಂತರರಾಷ್ಟ್ರೀಯ ಹೆಣ್ಣು ಮಕ್ಕಳನ್ನು ರಕ್ಷಿಸುವ ದಿನಾಚರಣೆ’ಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೆಣ್ಣು ಮಗಳನ್ನು ರಕ್ಷಿಸಿ ಎನ್ನುವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ತಿದ್ದೇವೆ. ಯಾಕೆ ಈ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರೆ ಇಂತಹ ಕಾರ್ಯಕ್ರಮವನ್ನು ಮಾಡುವ ಪರಿಸ್ಥಿತಿ ನಮಗಿಂದು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಗಾದರೆ ನಮ್ಮ ಸಮಾಜಕ್ಕೆ ಇದರ ಬಗ್ಗೆ ತಿಳುವಳಿಕೆ ಇಲ್ಲವಾ? ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತೊಂದರೆ ಬಂದಾಗ ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತದೆ. ಉದಾಹರಣೆಗೆ ಹುಲಿಗಂ ಸಂಕ್ಯೆ ಕಡಿಮೆ ಆದಾಗ ಅರಣ್ಯ ಇಲಾಖೆ, ವನ್ಯ ಜೀವಿ ವಿಭಾಗ ಹುಲಿ ರಕ್ಷಿಸಿ ಅಭಿಯಾನ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಿದೆ. ಹಾಗಾದರೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬುದು ಯಾಕೆ ಬಂತು? ಸ್ವಾತಂತ್ರಪೂರ್ವದಲ್ಲಿ ಈಗಿರುವ ತರ ಸುಭದ್ರ ಆಡಳಿತ ಮತ್ತು ಜನರಿಗೆ, ಸಮಾಜಕ್ಕೆ ರಕ್ಷಣೆ ನೀಡುವ ಸರ್ಕಾರವಿರಲಿಲ್ಲ. ಓರ್ವ ರಾಜನಿರುತ್ತಿದ್ದ. ಆತ ಪ್ರಜೆಗಳನ್ನು ರಕ್ಷಿಸುತ್ತಿದ್ದ. ಆದರೆ ಬಲಿಷ್ಠ ರಾಜ ಬಂದು ಆಕ್ರಮಣ ಮಾಡಿದರೆ ಇಲ್ಲಿರುವ ಎಲ್ಲವೂ ಅವನ ಪಾಲಾಗುತ್ತಿತ್ತು. ಆತ ಹೇಗೆ ಬೇಕೋ ಹಾಗೆ ನಡೆದುಕೊಳ್ಳುತ್ತಿದ್ದ ಎಂದು ವಿವರಿಸಿದರು.
ಬಾಲ್ಯವಿವಾಹ ಜಾರಿಯಲ್ಲಿತ್ತು. ಈಗಲೂ ಕೆಲವೆಡೆ ಇದೆ. ಅದನ್ನು ತಡೆಗಟ್ಟುವ ಕೆಲಸ ನಡೆಯುತ್ತಿದೆ. ಸತಿಸಹಗಮನ ಪದ್ಧತಿಯಿತ್ತು. ಮರು ವಿವಾಹಕ್ಕೆ ಅವಕಾಶವಿರಲಿಲ್ಲ. ಸ್ತ್ರೀಯರಿಗೆ ಶಿಕ್ಷಣದ ಸೌಲಭ್ಯವಿರಲಿಲ್ಲ. ಎಲ್ಲ ದೃಷ್ಟಿಯಿಂದ ನೋಡಿದಾಗಲೂ ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಕಡಿಮೆಯಾಗಿತ್ತು. ವರದಕ್ಷಿಣೆ ಪಿಡುಗಿತ್ತು. ಈಗಲೂ ಇದೆ. ತಂದೆ-ತಾಯಿಗಳಿಗೆ ಹೆಣ್ಣು ಹುಟ್ಟಿದರೆ ಮಗಳ ಮದುವೆ ಮಾಡಬೇಕು ಎಂಬ ಚಿಂತೆ. ಹೆಣ್ಣು ಮಕ್ಕಳಿದ್ದರೆ ಸಮಸ್ಯೆ. ಗಂಡು ಮಕ್ಕಳಿದ್ದರೆ ಯಾವ ತಾಪತ್ರಯವಿಲ್ಲ ಎಂಬ ವಾತಾವರಣ ಮತ್ತೊಂದು ಕಡೆ ನಿರ್ಮಾಣವಾಗುತ್ತಿದೆ. ಅದಕ್ಕಾಗಿ ಈ ಸಮಾಜಕ್ಕೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಹೆಣ್ಣಿಲ್ಲದೇ ಸಮಾಜವಿಲ್ಲ. ಯಾವುದೇ ಕುಟುಂಬವಿಲ್ಲ. ಸ್ವಾಮಿ ವಿವೇಕಾನಂದರೂ ಕೂಡ ‘ಹೆಣ್ಣನ್ನು ಹೊರತುಪಡಿಸಿ ಸುಸಂಸ್ಕೃತ ಸಮಾಜ ನಿರ್ಮಿಸುತ್ತೇವೆ ಎಂದರೆ ಸಾಧ್ಯವಿಲ್ಲ’ ಎಂದಿದ್ದರು. ಹೆಣ್ಣನ್ನು ಹೊರತುಪಡಿಸಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಏನನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜಕ್ಕೆ ತಿಳಿ ಹೇಳುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಂ.ಎಸ್.ಸಾವಿತ್ರಿ, ಪ್ರಾಂಶುಪಾಲರಾದ ಮಹದೇವಸ್ವಾಮಿ ಜಿ.ಹೆಚ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮ.ಕೆ.ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)