ಮೈಸೂರು

ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್‍ : ಅಭಿವೃದ್ಧಿಯಲ್ಲಿ ಕುಂಠಿತ

ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು ಕೇವಲ ಸಿಡಿ, ಡೈರಿ ಹಗರಣಗಳಲ್ಲಿ ಸಿಲುಕಿದೆ, ಇದರಿಂದಾಗಿ ರಾಜ್ಯದ ಪ್ರಗತಿ ಕುಂಠಿತವಾಗಿದೆ ಎಂದು  ಬಿಜೆಪಿ ಮುಖಂಡ ಎಸ್.ಸಿ.ರಾಜೇಶ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಭಾರತ ಸ್ವಾತಂತ್ರ್ಯ ಚಳುವಳಿ ಸಂಗ್ರಾಮದಲ್ಲಿ ದೇಶದ ಏಕತಾಮಂತ್ರವಾಗಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್ ಅನ್ನು ವಿಸರ್ಜಿಸದೆ ಕೇವಲ ಅಧಿಕಾರ ದಾಹಕ್ಕಾಗಿ ಕಳೆದ 70 ವರ್ಷಗಳಿಂದಲೂ ಅದರ ಹೆಸರನ್ನುರಾಜಕೀಯ ಪಕ್ಷವೂ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಕಾಂಗ್ರೆಸ್ ಪಕ್ಷವನ್ನು  ಕೂಡಲೇ ವಿಸರ್ಜಿಸಿ ‘ಡಿಂಗ್ ಡಾಂಗ್ ಪಕ್ಷ’ವೆಂದು ನಾಮಕರಣಗೊಳಿಸಿ ಎಂದು ಲೇವಡಿ ಮಾಡಿದರು.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್‍ ಅನ್ನು ವಿಸರ್ಜಿಸಿ ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಕರೆ ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದೆ ರಾಜಕೀಯ ದುರುಪಯೋಗ ಪಡಿಸಿಕೊಳ್ಳುತ್ತಿದೆ.  ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಸ್ವದೇಶಿ ನಾಯಕರಿಲ್ಲದೇ ವಿದೇಶಿ ಮಹಿಳೆಯ ಕೈಕೆಳಗೆ ನಲುಗುತ್ತಿದೆ. ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರ ಪ್ರಕರಣಗಳಲ್ಲಿ ಸಿಲುಕಿ ದುರಾಡಳಿತವನ್ನು ನೀಡುತ್ತಿದ್ದು  ರಾಜ್ಯದ ಪ್ರಗತಿಯನ್ನು ಕಡೆಗಣಿಸಿದೆ. ರೈತರ ಸಾಲಮನ್ನಾ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿದ್ದು ಕೇಂದ್ರದ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಿರುವುದು ತರವಲ್ಲ. ನಿಮ್ಮ ಸರ್ಕಾರದಿಂದ ಸಹಕಾರ ಸಂಘಗಳಲ್ಲಿರುವ 23 ಲಕ್ಷ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ನಂತರ ಉಳಿದ ಸಾಲ ಮನ್ನಾಕ್ಕೆ ಬಿಜೆಪಿಯಿಂದ ಕೇಂದ್ರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ರಾಜಕೀಯ ಪಕ್ಷ  ತನ್ನ ಹೆಸರನ್ನು ಮರುನಾಮಕರಣಗೊಳಿಸಿಕೊಳ್ಳಬೇಕು ಎಂದು ಬಿಜೆಪಿಯಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು ಬೆಂಬಲ ನೀಡಬೇಕೆಂದು ಕೋರಿದರು.

ರೈತರಿಗೆ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಆತ್ಮಹತ್ಯೆಯಿಂದ ರಕ್ಷಿಸಿ ಎಂದ ಅವರು, ರೈತರ ಪ್ರಗತಿಗೆ ರೂಪುಗೊಂಡಿರುವ ಕ್ಯಾಷ್ ಲೆಸ್ ಲೇಬರ್ ಫ್ರೀ ಬಂಪರ್ ಕ್ಯ್ರಾಷ್ ಫಾಲ್ ನೇಷನ್ ಅಂಡ್ ಫಾರ್ಮರ್ಸ್‍ ಅನ್ನುವ ಪರಿಣಾಮಕಾರಿ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಎಸಿಪಿ ದೂರುದಾರ ಬಸವೇಗೌಡ, ಹಾಲನ್ನಳ್ಳಿ ಪುಟ್ಟಸ್ವಾಮಿ, ಬಿದರಗೂಡು ಕುಮಾರ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: