Uncategorized

ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಅ.18 ರಂದು ಚಾಲನೆ

ರಾಜ್ಯ( ಮಡಿಕೇರಿ) ಅ.11 :- ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಮತ್ತು ಮಡಿಕೇರಿ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ಅ.18 ರಿಂದ 20ರ ವರೆಗೆ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಗರದ ರೋಟರಿ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್‍ನ ಕಾರ್ಯದರ್ಶಿ ರಚನ್ ಪೊನ್ನಪ್ಪ, ಜಿಲ್ಲೆಯ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಅಂದಾಜು 100 ರಿಂದ 200 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅ.18 ರಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಪಂದ್ಯಾವಳಿಯ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಗಳಿಗೆ 50ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. 21 ವರ್ಷ ವಯೋಮಿತಿಯೊಳಗಿನ ಬಾಲಕರ ಹಾಗೂ ಬಾಲಕಿಯರ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳ ವಿಭಾಗದಲ್ಲಿ ಸಿಂಗಲ್ಸ್‍ಗೆ 100 ರೂ. ಮತ್ತು ಡಬಲ್ಸ್‍ಗೆ 200 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆಯೆಂದು ಮಾಹಿತಿ ನೀಡಿದರು.
ಪುರುಷರು ಹಾಗೂ ಮಹಿಳೆಯರ ವಿಭಾಗದ ಸಿಂಗಲ್ಸ್‍ಗೆ ರೂ. 200 ಹಾಗೂ ಡಬಲ್ಸ್‍ಗೆ 400 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಮಿಶ್ರ ಡಬಲ್ಸ್ ಪಂದ್ಯಾವಳಿಯೂ ಈ ವಿಭಾಗದಲ್ಲಿ ನಡೆಯಲಿದೆ.50 ವರ್ಷ ಮೇಲ್ಪಟ್ಟ ವಯಸ್ಕರಿಗೆ 200 ರೂ. ಪ್ರವೇಶ ಶುಲ್ಕ ನಿಗದಿಪಡಿಸಿರುವುದಾಗಿ ತಿಳಿಸಿದರು.
ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಆದಂ ಅಂಡ್ ಸನ್ಸ್ ಕುಟುಂಬದ ಪ್ರಾಯೋಜಕತ್ವದಲ್ಲಿ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆಂದರು.
ಕಳೆದ ವರ್ಷದ ಸುರಿದ ಮಹಾ ಮಳೆಗೆ ಪಂದ್ಯಾವಳಿಯನ್ನು ಸ್ಥಗಿತ ಗೊಳಿಸಲಾಗಿತ್ತು.ಈ ಬಾರಿ ಮತ್ತೆ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಇದರಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಟೇಬಲ್ ಟೆನ್ನಿಸ್ ಆಟವಾಡುವ ಪತ್ರಕರ್ತರು, ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳು, ವಕೀಲರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಆಸಕ್ತ ಸ್ಪರ್ಧಿಗಳು ಅಕ್ಟೋಬರ್ 17 ರ ಒಳಗಾಗಿ ರಚನ್ ಪೊನ್ನಪ್ಪ ಅವರ ಬಳಿ (ಮೊ.9980000438, 9483598761), ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಆಸಿಫ್ (ಮೊ.9845606784) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದೆಂದು ತಿಳಿಸಿದರು.
ಮಡಿಕೇರಿ ರೋಟರಿ ಅಧ್ಯಕ್ಷ ರತನ್ ತಮ್ಮಯ್ಯ ಮಾತನಾಡಿ, ಅಂತರಾಷ್ಟ್ರೀಯ ಕ್ರೀಡೆಯಾಗಿರುವ ಟೇಬಲ್ ಟೆನ್ನಿಸ್‍ನಲ್ಲಿ ಆಸಕ್ತರಾಗಿರುವ ಜಿಲ್ಲೆಯ ಕ್ರೀಡಾಪಟುಗಳ ಉತ್ತೇಜನಕ್ಕಾಗಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ಮೊಹಮ್ಮದ್ ಅಸಿಫ್, ಸದಸ್ಯರಾದ ಬಿ.ಟಿ. ಅಸ್ಲಾಂ, ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ ಹಾಗೂ ರೋಟರಿ ಯೂತ್ ಸರ್ವಿಸ್‍ನ ನಿರ್ದೇಶಕ ಅನಿಲ್ ಕೃಷ್ಣಾನಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: