ಮೈಸೂರು

ಸಂಚಾರ ನಿಯಮ ಪಾಲನೆಗೆ ಪೊಲೀಸರಿಂದ ಹೊಸ ವಿಧಾನ : ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ

ರಾಜ್ಯ ಸರ್ಕಾರ ದ್ವಿ-ಚಕ್ರ ವಾಹನ ಚಾಲನೆ ಮಾಡುವಾಗ ಚಾಲನೆ ಮಾಡುವವರು ಹಾಗೂ ಹಿಂಬದಿ ಕುಳಿತಿರುವವರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಕಾನೂನುಗೊಳಿಸಿದ್ದರೂ ಸಹ ಮೈಸೂರು ನಗರದಲ್ಲಿ ಅನೇಕ  ದ್ವಿ-ಚಕ್ರ ವಾಹನ ಸವಾರರು ಹಾಗು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುತ್ತಿರುವುದು ಪ್ರತಿನಿತ್ಯ ಕಂಡುಬರುತ್ತಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನಿನನ್ವಯ ಪೊಲೀಸರು ದಂಡ ವಿಧಿಸುವುದರ ಜೊತೆಗೆ ಹೆಲ್ಮೆಟ್ ಅನ್ನು ತಂದು ಧರಿಸುವವರೆವಿಗೂ ಸ್ಥಳದಲ್ಲಿಯೇ ವಾಹನವನ್ನು ತಡೆಹಿಡಿಯುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು,ಇಂದಿನಿಂದಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದ್ದಾರೆ.

ಮೋಟಾರು ವಾಹನ ಕಾಯಿದೆ 1988 ರ ರೀತ್ಯಾ ವಾಹನಕ್ಕೆ ವಿಮೆ ಮಾಡಿಸುವುದು ಕಡ್ಡಾಯವಾಗಿದ್ದು, ಪೊಲೀಸರ ತಪಾಸಣೆ ಕಾಲದಲ್ಲಿ ವಾಹನಗಳಿಗೆ ವಿಮೆ ಮಾಡಿಸದೇ ಇರುವುದು ಕಂಡುಬಂದಲ್ಲಿ ಪೊಲೀಸರು ದಂಡ ವಿಧಿಸುವುದರ ಜೊತೆಗೆ ವಾಹನಕ್ಕೆ ವಿಮೆಯನ್ನು ಮಾಡಿಸಿ ಹಾಜರುಪಡಿಸುವವರೆಗೂ ಸ್ಥಳದಲ್ಲಿಯೇ ವಾಹನವನ್ನು ತಡೆಹಿಡಿಯುವ ವ್ಯವಸ್ಥೆಯನ್ನು ಇಂದಿನಿಂದಲೇ ಅನುಷ್ಠಾನಕ್ಕೆ ತರಲಿದ್ದೇವೆ ಎಂದಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗಳಾದ  ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ , ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಗೂಡ್ಸ್ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಭಾರ ಮತ್ತು ಜನರನ್ನು ಸಾಗಿಸುವುದು ಕಂಡು ಬಂದಲ್ಲಿ ಅಂಥಹ ವಾಹನ ಚಾಲಕರ ಚಾಲನಾ ಪತ್ರವನ್ನು ಅಮಾನತು ಪಡಿಸಲು ಭಾರತದ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನಗಳನ್ನು ನೀಡಿದ್ದು, ಈ ಕ್ರಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.

ಸಾರ್ವಜನಿಕರು ವಾಹನಗಳನ್ನು ಚಾಲನೆ ಮಾಡುವಾಗ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ  ಮಾಡದೇ ಸುಗಮ ಸಂಚಾರ ಮತ್ತು ಸುರಕ್ಷತಾ ವಾಹನ ಚಾಲನೆಗೆ ಮೈಸೂರುನಗರ ಪೊಲೀಸರೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

comments

Related Articles

error: