
ಪ್ರಮುಖ ಸುದ್ದಿ
ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವಂತೆ ಸಂಸದೆ ಸುಮಲತಾ ಅಂಬರೀಷ್ ಸೂಚನೆ
ರಾಜ್ಯ(ಮಂಡ್ಯ)ಅ.12:- ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುವಂತೆ ಸಂಸದೆ ಸುಮಲತಾ ಅಂಬರೀಷ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್.ಪೇಟೆ ಪಟ್ಟಣದ ತಾಲೂಕು ಪಂಚಾಯತ್ ನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ನೀವು ನೀಡುವ ಅಂಕಿ-ಅಂಶ ವಾಸ್ತವದಿಂದ ಕೂಡಿರಬೇಕು. ಹೇಳುವುದೊಂದು ಮಾಡುವುದು ಮತ್ತೊಂದು ಎಂಬಂತೆ ಆಗಬಾರದು. ನಾನು ಗ್ರಾಮಗಳಿಗೆ ಹೋದಾಗ ಜನಸಾಮಾನ್ಯರು ನಿಮ್ಮ ಮೇಲೆ ಕೈತೋರಿಸಿದಾಗ ನಿಮ್ಮನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳು ಶೇ.100ರಷ್ಟು ಯಶಸ್ವಿಯಾಗಿ ಅನುಷ್ಠಾನವಾಗಬೇಕು. ಶುದ್ಧವಾದ ಕುಡಿಯುವ ನೀರಿಗೆ ಎಲ್ಲಿಯೂ ಸಮಸ್ಯೆಯಾಗಬಾರದು. ಜನಸಾಮಾನ್ಯರಿಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವುದು ಸರ್ಕಾರದ ಕರ್ತವ್ಯ. ಈ ದಿಕ್ಕಿನಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಲೆ, ಆಸ್ಪತ್ರೆ ಕಟ್ಟಡಗಳ ದುರಸ್ತಿಗೆ ಅನುದಾನ ನೀಡಲಾಗುವುದು. ಹೀಗಾಗಿ ತಾಲೂಕಿನ ತುರ್ತಾಗಿ ದುರಸ್ತಿ ಆಗಬೇಕಿರುವ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಇಲಾಖೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಶಾಸಕ ನಾರಾಯಣ ಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮೀ ಸ್ವಾಮಿನಾಯಕ, ಜಿಲ್ಲಾ ಪಂಚಾಯಿತಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಎಂ.ಶಿವಮೂರ್ತಿ, ತಾಪಂ ಇಒ ಚಂದ್ರಮೌಳಿ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)