ದೇಶ

ನೇಪಾಳದಲ್ಲಿ ಪ್ರಪಾತಕ್ಕೆ ಉರುಳಿದ ಬಸ್: 11 ಮಂದಿ ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

ಕಠ್ಮಂಡು,ಅ.12-ಕಿಕ್ಕಿರಿದು ಜನ ತುಂಬಿದ್ದ ಬಸ್ ವೊಂದು 50 ಅಡಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ಸಾವನ್ನಪ್ಪಿ ಸುಮಾರು 108 ಜನರು ಗಾಯಗೊಂಡ ಭೀಕರ ಘಟನೆ ಕೇಂದ್ರ ನೇಪಾಳದಲ್ಲಿ ಶನಿವಾರ ನಡೆದಿದೆ.

ಹಿಂದೂ ಹಬ್ಬ ದಶೈನ್ ಆಚರಿಸಿಕೊಂಡು ಸಿಂಧುಪಾಲ್ ಚೌಕದಿಂದ ನೆರೆಯ ಕಠ್ಮಂಡು ಕಡೆ ಸಾಗುತ್ತಿದ್ದ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೆ 5 ಜನ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದರು ಎಂದು ಸರ್ಕಾರಿ ಅಧಿಕಾರಿ ಗೋಮಾ ದೇವಿ ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತಕ್ಕೆ ಕಾರಣವೇನೆಂದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೇಪಾಳದಲ್ಲಿ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಹೀಗಾಗಿ ಅಪಘಾತಗಳು ಸಾಮಾನ್ಯವಾಗಿದ್ದು, ಹಬ್ಬದ ಸಮಯದಲ್ಲಿ ರಸ್ತೆಗಳು ಹೆಚ್ಚು ಜನನಿಬಿಡವಾಗಿರುತ್ತವೆ ಮತ್ತು ಸಾರ್ವಜನಿಕ ಸಾರಿಗೆ ದಟ್ಟಣೆಯಿಂದ ಕೂಡಿರುತ್ತದೆ. (ಎಂ.ಎನ್)

 

Leave a Reply

comments

Related Articles

error: