ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಲೆಹರ್ ಸಿಂಗ್

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಡೈರಿ ಸಮರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ.

ಸಿಎಂ ಸಿದ್ದರಾಮಯ್ಯ ಕಪ್ಪ ಕಾಣಿಕೆ ಪಡೆಡ ಡೈರಿ ದಿಲ್ಲಿಯಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪ್ತ ಎಂದೇ ಗುರುತಿಸಿಕೊಂಡಿರುವ ಬಿಜೆಪಿ ಶಾಸಕ ಲೆಹರ್ ಸಿಂಗ್ ಅವರದ್ದು ಎನ್ನಲಾದ ಡೈರಿಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ನಿನ್ನೆ ಬಿಡುಗಡೆ ಮಾಡಿದ್ದಾರೆ.

ನಿತ್ಯ ಹೊಸದೊಂದು ತಿರುವು ಪಡೆಯುತ್ತಿರುವ ರಾಜಕೀಯ ನಾಯಕರ ಆಟ ಇಂದು ಇನ್ನೊಂದು ಹೆಜ್ಜೆ ಮುಂದುವರಿದಿದ್ದು, ಕೆಪಿಸಿಸಿ ಬಿಡುಗಡೆ ಮಾಡಿರುವ ಮಾಹಿತಿ ಸುಳ್ಳು ಎಂದು ಲೆಹರ್ ಸಿಂಗ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಇದು ನಕಲಿ ಡೈರಿ ಎಂದು ಆರೋಪಿಸಿ ದೂರು ಸಲ್ಲಿಸಿರುವ ಲೆಹರ್ ಸಿಂಗ್ ನಂತರ ನಗರ ಪೊಲೀಸ್ ಆಯುಕ್ತರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಚೇರಿ ಹೊರಗೆ ಬಂದು ದೂರು ಸ್ವೀಕರಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಆಯುಕ್ತರ ಮೇಲೆ ಕಾಂಗ್ರೆಸ್ ಸರ್ಕಾರದ ಒತ್ತಡ ಇದೆ. ಇದರಿಂದ ನಿನ್ನೆ ಬಿಡುಗಡೆಯಾದ ಡೈರಿಯ ಕುರಿತು ಸತ್ಯಾಸತ್ಯತೆ ಪರಿಶೋಧಿಸಲು ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

ಇದಾದ ನಂತರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ ಡೈರಿ ನನ್ನದಲ್ಲ. ನನ್ನ ಸಹಿ, ಹೆಸರು ಎಲ್ಲವೂ ಅದರಲ್ಲಿ ತಪ್ಪಿದೆ. ಬೇಕಿದ್ದರೆ ನಾನು ಬಿಲ್ಗಳಿಗೆ ಮಾಡಿದ ಸಹಿ ಹಾಗೂ ವಿಧಾನಪರಿಷತ್‍ನಲ್ಲಿ ಹಾಕಿದ ಸಹಿ ಗಮನಿಸಬಹುದು ಎಂದು ಹೇಳಿದ್ದಾರೆ.

ನಾನು ಸೈಬರ್ ಕ್ರೈಂ ಪೊಲೀಸರಿಗೆ ಈಗಾಗಲೇ ದೂರು ನೀಡಲು ನಿರ್ಧರಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸತ್ಯಾಸತ್ಯತೆ ಅರಿಯದೇ ಡೈರಿಯನ್ನು ನನ್ನ ಹೆಸರಿನಲ್ಲಿ ಪ್ರಕಟಿಸಲಾಗಿದೆ. ನನ್ನ ಹೆಸರಿನ ದುರ್ಬಳಕೆಯನ್ನು ಕಾಂಗ್ರೆಸ್ ಮಾಡಿದೆ ಎಂದು ಆರೋಪಿಸಿದರು.

ಮೂರು ದಿನದ ಹಿಂದೆಯೇ ನನಗೆ ಈ ಡೈರಿಯ ಪ್ರತಿ ಸಿಕ್ಕಿತ್ತು. ನಾನು ಅದನ್ನು ಹಾಸ್ಯಾಸ್ಪದವಾಗಿ ಸ್ವೀಕರಿಸಿದ್ದೆ. ಇದನ್ನು ಚಿಕ್ಕ ಮಕ್ಕಳು ನೋಡಿದರೂ ನಕಲಿ ಎಂದು ಸಾಬೀತುಪಡಿಸುತ್ತಾರೆ. ನಾನು ಸುಮ್ಮನಾಗಿದ್ದೆ. ಆದರೆ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇದನ್ನೇ ಆಧಾರವಾಗಿಸಿಕೊಂಡು ಸುದ್ದಿಗೋಷ್ಠಿ ನಡೆಸಿದಾಗ ಡೈರಿ ಹಿಂದಿರುವ ಕೈಗಳ ಅರಿವಾಯಿತು. ಡೈರಿ ಬಹಿರಂಗಪಡಿಸಿದ ಕಾಂಗ್ರೆಸ್ ನಾಯಕರ ವಿರುದ್ಧ ಈಗಾಗಲೇ ದೂರು ನೀಡಿದ್ದೇನೆ. ಕಾನೂನು ಹೋರಾಟ ನಡೆಸುತ್ತೇನೆ ಎಂದಿದ್ದಾರೆ.

ಡೈರಿಯನ್ನು ನಾಲ್ಕು ವರ್ಷದ ಬಳಿಕ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಇಷ್ಟು ಸಮಯ ದಿನೇಶ್ ಗುಂಡೂರಾವ್ ನಿದ್ರಿಸುತ್ತಿದ್ದರಾ? ಇದೇ ಡೈರಿಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹೆಸರು ಕೂಡ ಇದೆ. ಅವರನ್ನೂ ದಿನೇಶ್ ಗುಂಡೂರಾವ್ ಪ್ರಶ್ನಿಸುತ್ತಾರಾ? ಎಂದು ಕೇಳಿದ್ದಾರೆ.

Leave a Reply

comments

Related Articles

error: