ಪ್ರಮುಖ ಸುದ್ದಿ

ನಿವೃತ್ತ ಪೊಲೀಸ್ ಅಧಿಕಾರಿಗಳ ಸಭೆ : ‘ದಂತ ಚೋರ ವೀರಪ್ಪನ್’ ಪುಸ್ತಕ ಬಿಡುಗಡೆ : ಕೊಡಗಿನ ಪೊಲೀಸರ ಸಾಧನೆ ಬಗ್ಗೆ ಡಾ.ಗುರುಪ್ರಸಾದ್ ಶ್ಲಾಘನೆ

ರಾಜ್ಯ( ಮಡಿಕೇರಿ) ಅ.13 :- ಕೆಲವು ದಶಕಗಳ ಹಿಂದೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳಿಗೆ ತಲೆನೋವಾಗಿ ಪರಿಣಮಿಸಿದ್ದ ದಂತ ಚೋರ ವೀರಪ್ಪನ್ ಕಾರ್ಯಾಚರಣೆಯಲ್ಲಿ ಕೊಡಗಿನ ನೂರಕ್ಕೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದಾರಾದರು, ಅವರ ಧೈರ್ಯ, ಸ್ಥೈರ್ಯ ಬಲಿದಾನಗಳು ಸಮರ್ಪಕವಾಗಿ ದಾಖಲಾಗಿಲ್ಲ ಎಂದು ನಿವೃತ್ತ ಡಿಜಿಪಿ ಡಾ.ಡಿ.ವಿ.ಗುರುಪ್ರಸಾದ್ ವಿಷಾದಿಸಿದ್ದಾರೆ.
ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ತಾವು ಅನುವಾದಿಸಿರುವ, ಕಾಶ್ಮೀರದ ರಾಜ್ಯಪಾಲರಿಗೆ ಹಾಲಿ ಭದ್ರತಾ ಸಲಹೆಗಾರರಾಗಿರುವ ಕೆ. ವಿಜಯಕುಮಾರ್ ಅವರ ಪುಸ್ತಕ ‘ದಂತ ಚೋರ ವೀರಪ್ಪನ್’ ಹಾಗೂ ತಮ್ಮ ಅನುಭವದ ‘ಗೂಢ ಚರ್ಯೆಯ ದಿನಗಳು’ ಪುಸ್ತಕದ ಬಗ್ಗೆ ಮಾಹಿತಿ ನೀಡುತ್ತಾ ಅವರು ಮಾತನಾಡಿ, ಸಮಾಜಕ್ಕೆ ಕಂಟಕ ಪ್ರಾಯನಾಗಿದ್ದ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸಾಹಸ ಮೆರೆದ ಕೊಡಗಿನ ಪೊಲೀಸರ ಬಗ್ಗೆ ಅಧ್ಯಯನ ನಡೆಸಿ ಪುಸ್ತಕವೊಂದನ್ನು ರಚಿಸಲು ಮುಂದಾಗಿರುವುದಾಗಿ ಮಾಹಿತಿ ನೀಡಿದರು.
ವೀರಪ್ಪನ್ ಮೊದಲ ಬಂಧನ
ದಂತ ಚೋರ ವೀರಪ್ಪನ್‍ನನ್ನು ಮೊಟ್ಟ ಮೊದಲ ಬಾರಿಗೆ ಬಂಧಿಸಿದ್ದು ಕೊಡಗಿನ ಸೋಮವಾರಪೇಟೆಯವರಾದ ಕೆ.ಎ. ಸೋಮಣ್ಣ. ಕೊಳ್ಳೆಗಾಲದಲ್ಲಿ ಪೊಲೀಸ್ ಕರ್ತವ್ಯದಲ್ಲಿದ್ದ ಸೋಮಣ್ಣ ಅವರು, ವೀರಪ್ಪನ್ ಮತ್ತು ಆತನ ತಂದೆ ಕೂಸು ಮಾದಯ್ಯರನ್ನು ಬಂಧಿಸಿದ್ದರು. ಆ ಸಂದರ್ಭ ವೀರಪ್ಪನ್ ಸೋಮಣ್ಣ ಅವರನ್ನು ಕಂಡರೆ ನಡುಗುತ್ತಿದ್ದ. ಆದರೆ, ಈ ವಿಚಾರ ಹೆಚ್ಚಿನ ಮಂದಿಗೆ ತಿಳಿದಿಲ್ಲವೆಂದು ಹೇಳಿದರು.
ದಂತ ಚೋರನ ಕಾರ್ಯಾಚರಣೆಯ ಕುರಿತ ತಮ್ಮ ನೆನಪುಗಳನ್ನು ತೆರೆದಿಟ್ಟ ಗುರುಪ್ರಸಾದ್ ಅವರು, ಕೊಡಗಿನವರೇ ಆದ, ಅಂದು ಕೆಎಸ್‍ಆರ್‍ಪಿಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಈರಪ್ಪ ಅವರು ಕಾರ್ಯಾಚರಣೆಯ ಸಂದರ್ಭ ಸಿಡಿಸಿದ ಗುಂಡಿಗೆ ವೀರಪ್ಪನ್ ಬಲಿಯಾಗಿದ್ದರೆ ಆ ನಂತರದ ದಿನಗಳಲ್ಲಿ ಡಿಸಿಪಿ ಶ್ರೀನಿವಾಸ್ ಸೇರಿದಂತೆ ನೂರಾರು ಮಂದಿ ದಂತ ಚೋರ ವೀರಪ್ಪನ್‍ಗೆ ಬಲಿಯಾಗುತ್ತಿರಲಿಲ್ಲವೆಂದು ತಿಳಿಸಿದ್ದಲ್ಲದೆ, ಕೊಡಗಿನ ಮಂದಪ್ಪ ಅವರ ಸಾಹಸದಿಂದ ವೀರಪ್ಪನ್‍ನಿಂದ ಹತ್ಯೆಗೊಳಗಾದ ಹರಿಕೃಷ್ಣ ಮತ್ತು ಶಕೀಲ್ ಅಹಮ್ಮದ್ ಅವರ ದೇಹಗಳನ್ನು ಮರಳಿ ಪಡೆಯಲು ಸಾಧ್ಯವಾದ ಘಟನೆಗಳನ್ನು ನೆನಪಿಸಿಕೊಂಡು, ಕೊಡಗಿನವರ ಈ ಎಲ್ಲಾ ವಿಚಾರಗಳು ಸಮರ್ಪಕವಾಗಿ ದಾಖಲಾಗುವ ಅಗತ್ಯವಿದೆಯೆಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್, ಎಸ್.ಎಂ. ಕೃಷ್ಣ, ಧರಮ್‍ಸಿಂಗ್ ಅವರ ಅವಧಿಯಲ್ಲಿ ತಾವು ಇಂಟಲಿಜೆನ್ಸ್‍ನಲ್ಲಿದ್ದು ನಡೆಸಿದ ಕೆಲಸ ಕಾರ್ಯಗಳ ಕುರಿತಾದ ಮಾಹಿತಿಯನ್ನು ಗೂಢ ಚರ್ಯೆಯ ದಿನಗಳು ಪುಸ್ತಕದಲ್ಲಿ ದಾಖಲಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ್ ಡಿ. ಪನ್ನೇಕರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವವರಲ್ಲಿ ಬಹುತೇಕ ಮಂದಿ ಆರೋಗ್ಯ ಸಮಸ್ಯೆಗೆ ಒಳಗಾಗುವುದನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ನಿವೃತ್ತರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದರೊಂದಿಗೆ, ಅವರಿಗಾಗಿಯೇ ಇರುವ ಆರೋಗ್ಯ ಯೋಜನೆಗಳನ್ನು ನೋಂದಾಯಿಸಿಕೊಂಡು ಸೌಲಭ್ಯವನ್ನು ಹೊಂದಿಕೊಳ್ಳಬೇಕು. ಪ್ರಸ್ತುತ ಸಂಘದಲ್ಲಿ 800 ಸದಸ್ಯರುಗಳಿದ್ದಾರಾದರು, ಆರೋಗ್ಯ ಯೋಜನೆಗಳಲ್ಲಿ ನೋಂದಾಯಿಸಲ್ಪಟ್ಟವರು 200 ಮಂದಿ. ಈ ಹಿನ್ನೆಲೆ ಪ್ರತಿಯೊಬ್ಬ ನಿವೃತ್ತರು ಆರೋಗ್ಯ ಯೋಜನೆಯ ಸದುಪಯೋಗ ಪಡೆಯಲು ಮುಂದಾಗುವಂತೆ ಕರೆ ನೀಡಿದರು.
ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ಉಡುಪಿಯಯ ಪಿ.ಕೆ. ಆಚಾರ್ಯ ಅವರು ತಮ್ಮ ತಾಯಿಯ ಸ್ಮರಣಾರ್ಥ ನೀಡಿರುವ ಒಂದು ಲಕ್ಷ ರೂ.ಗಳ ದತ್ತಿನಿಧಿಯಡಿ ಸಿವಿಲ್ ಪೊಲೀಸ್ ಸಿಬ್ಬಂದಿಗಳ ಪ್ರತಿಭಾವಂತ ವಿದ್ಯಾರ್ಥಿಗಳಾದ ಸೌಜನ್ಯ ಮತ್ತು ಕೃಪಾ ಅವರಿಗೆ ತಲಾ 5 ಸಾವಿರ ರೂ.ಗಳನ್ನು ನೀಡಿ ಪುರಸ್ಕರಿಸಲಾಯಿತು.
ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾದ ಎಂ.ಎ. ಅಪ್ಪಯ್ಯ ಅವರು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಸಂಘದ ನೂತ ಅಧ್ಯಕ್ಷ ಎ.ಕೆ. ಸುರೇಶ್, ರಾಷ್ಟ್ರಪತಿ ಪದಕ ಪುರಸ್ಕೃತ ಕೆ.ಪಿ.ಪರಶಿವ, ಸಂಘದ ಕಾರ್ಯದರ್ಶಿ ಅಚ್ಚುತನ್, ನೂತನ ಪದಾಧಿಕಾರಿ ಬಿ.ಆರ್. ಲಿಂಗಪ್ಪ, ಕುಮಾರಸ್ವಾಮಿ ಉಪಸ್ಥಿತರಿದ್ದರು. ಪೊನ್ನಮ್ಮ ಅವರು ಪ್ರಾರ್ಥಿಸಿ, ನಿವೃತ್ತ ಡಿಸಿಪಿ ಪೂಣಚ್ಚ ಸ್ವಾಗತಿಸಿ, ನಿವೃತ್ತ ಡಿವೈಎಸ್‍ಪಿ ಯಾಲದಾಳು ಕೇಶವಾನಂದ ಅವರು ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: