ಪ್ರಮುಖ ಸುದ್ದಿ

ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಹಕರಿಸಲು ಮನವಿ

ರಾಜ್ಯ(ಮಡಿಕೇರಿ), ಅ.14 :- ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವ ಮೂಲಕ ಪ್ರತಿಯೊಬ್ಬರೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಸಂರಕ್ಷಣಾಧಿಕಾರಿ ಎಸ್.ಆರ್.ನಟೇಶ್, ಎಂದು ಮನವಿ ಮಾಡಿದರು.

ಅರಣ್ಯ ಇಲಾಖೆಯ ಕೊಡಗು ವೃತ್ತದ ವತಿಯಿಂದ ‘ನಮ್ಮ ನಡಿಗೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’  ಎಂಬ ಕೇಂದ್ರ ವಿಷಯದಡಿ 65 ನೇ ವನ್ಯಜೀವಿ ಸಪ್ತಾಹ -2019 ಪುಷ್ಪಗಿರಿ ಅಭಯಾರಣ್ಯದ ಮಾಂದಲ್‍ಪಟ್ಟಿ ಗಿರಿಧಾಮದಲ್ಲಿ  ಏರ್ಪಡಿಸಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂದಿನ ಪೀಳಿಗೆಗಾಗಿ ನಾವು ಉತ್ತಮ ಪರಿಸರವನ್ನು ಉಳಿಸುವ ದಿಸೆಯಲ್ಲಿ ಇಂತಹ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಮಾಂದಲ್‍ಪಟ್ಟಿಯಂತಹ ಸುಂದರ ನೈಸರ್ಗಿಕ ಗಿರಿಧಾಮ ಸೇರಿದಂತೆ ವಿವಿಧ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರು ಎಲ್ಲಿಬೇಕೆಂದರಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯವನ್ನು ಬಿಸಾಕುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಪ್ರಾಣಿ – ಪಕ್ಷಿ ಸೇರಿದಂತೆ ಇಡೀ ಜೀವಿ ಸಂಕುಲಕ್ಕೆ ತೀವ್ರ ತೊಂದರೆಯಾಗುತ್ತದೆ. ಈ ದಿಸೆಯಲ್ಲಿ ಇಂತಹ ಪ್ರದೇಶಕ್ಕೆ ಯಾರೂ ಕೂಡ ಪ್ಲಾಸ್ಟಿಕ್ ವಸ್ತುಗಳನ್ನು ತರಬಾರದು ಎಂದು ಮನವಿ ಮಾಡಿದರು.

ದೇಶದಲ್ಲೇ ವನ್ಯಜೀವಿಗಳ ತಾಣಕ್ಕೆ ಹೆಸರಾದ ಕರ್ನಾಟಕದಲ್ಲಿ ದೇಶದಲ್ಲಿನ ವನ್ಯಪ್ರಾಣಿಗಳಲ್ಲಿ ಶೇ.20 ರಷ್ಟು ವನ್ಯಜೀವಿಗಳು ಕರ್ನಾಟಕದಲ್ಲಿವೆ. ಹುಲಿ, ಆನೆ, ಚಿರತೆ, ಜಿಂಕೆ ಇನ್ನಿತರ ವನ್ಯಜೀವಿಗಳ ತಾಣವಾದ ನಮ್ಮ ರಾಜ್ಯದಲ್ಲಿ ದೇಶದಲ್ಲಿನ 6 ಸಾವಿರ ಆನೆಗಳ ಪೈಕಿ 1600 ಆನೆಗಳು ಕರ್ನಾಟಕದಲ್ಲಿವೆ ಎಂದು ನಟೇಶ್ ಮಾಹಿತಿ ನೀಡಿದರು.

ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅರಣ್ಯ ಇಲಾಖೆಯೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಪರಿಸರ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಮ್ಮ ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಸ್ವಚ್ಛ, ಸುಂದರ , ಹಸಿರು ಪರಿಸರ ನಿರ್ಮಿಸಲು ಸಂಕಲ್ಪ ತೊಡಬೇಕಿದೆ ಎಂದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್, ಎಸಿಫ್‍ಗಳಾದ ನೀಲೇಶ್ ಸಿಂಧೆ, ಡಿ.ಎಸ್.ದಯಾನಂದ, ನ್ಯಾಚುರಲಿಸ್ಟ್ ಎಸ್.ಕಾರ್ತಿಕೇಯನ್, ಪುಷ್ಪಗಿರಿ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಶ್ರೀನಿವಾಸ್ ನಾಯಕ್, ಆರ್‍ಎಫ್‍ಓಗಳಾದ ಜಗದೀಶ್, ಮರಿಸ್ವಾಮಿ, ಎಂ.ಕೇಶವ, ನಮನ್ ನಾಯಕ್ ಇತರರು ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: