Uncategorized

 ‘ಮಹರ್ಷಿ ವಾಲ್ಮೀಕಿ ಜಯಂತಿ’ : ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಶಾಸಕ ಅಪ್ಪಚ್ಚುರಂಜನ್ ಸಲಹೆ

ರಾಜ್ಯ(ಮಡಿಕೇರಿ) ಅ.14 :- ಮಾನವೀಯತೆಯೇ ಧರ್ಮ ಎಂಬುವುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದುವುದರೊಂದಿಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ   ನಡೆದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾನ್ ಗ್ರಂಥ ಮಹಾಕಾವ್ಯ ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಆ ದಿಸೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಅಪ್ಪಚ್ಚುರಂಜನ್ ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಅವರು ಬೇಡ ಜನಾಂಗದಲ್ಲಿ ಹುಟ್ಟಿ ರಾಮಾಯಣ ಬರೆಯುವ ಮೂಲಕ ಇಡೀ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಪ್ರಪಂಚಕ್ಕೆ ರಾಮಾಯಣ ಮಹಾಕಾವ್ಯದ ಮೂಲಕ ಬೆಳಕು ನೀಡಿದ ಹಾಗೂ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಎಂಬುದನ್ನು ಸಾರಿದ್ದರು. ಅದರಂತೆ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆಸೆ ಇರಬೇಕು. ಆದರೆ ದುರಾಸೆ, ದುರಾಲೋಚನೆ ಇರಬಾರದು ಎಂದು ಅಪ್ಪಚ್ಚು ರಂಜನ್ ಅವರು ನುಡಿದರು.

ಒಳ್ಳೆಯ ವಿಚಾರಗಳ ಯೋಚಿಸಬೇಕು. ಕೆಟ್ಟ ಆಲೋಚನೆಗಳನ್ನು ಬಿಡಬೇಕು. ಸಮಾಜಕ್ಕೆ ಒಳ್ಳೆಯ ಕೊಡಗೆ ಕೊಡಲು ಪ್ರಯತ್ನಿಸಬೇಕು ಎಂದರು.

ಅರಕಲಗೂಡು ಬಿಜಿಎಸ್ ಕಾಲೇಜಿನ ಪ್ರಾಂಶುಪಾಲರಾದ ಎಚ್.ಬಿ.ಮಹೇಶ್ ಅವರು ಮಾತನಾಡಿ ಇಡೀ ವಿಶ್ವಕ್ಕೆ ರಾಮಾರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ. ರಾಮಾಯಣ ಮಹಾಕಾವ್ಯ ಬರೆಯುವ  ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ್ದಾರೆ ಎಂದರು.

ಶ್ರೀರಾಮನನ್ನು ಕುರಿತು ಇಡೀ ಬ್ರಹ್ಮಾಂಡವೇ ಮೆಚ್ಚಿಕೊಳ್ಳುವಂತಹ ರಾಮಾಯಣ ಒಂದು ಅದ್ಭುತ ಗ್ರಂಥವನ್ನು ವಾಲ್ಮೀಕಿ ರಚಿಸಿದರು. ಮಹರ್ಷಿ ವಾಲ್ಮೀಕಿ ರಾಮಾಯಣ ಪ್ರೇರಣೆಯಿಂದಾಗಿ ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯ ರಚನೆಯಾಯಿತು. ದೇಶ-ವಿದೇಶ ಭಾಷೆಗಳಲ್ಲಿಯೂ ರಚಿಸಲ್ಪಟ್ಟ ಮಹಾ ಗ್ರಂಥವಾಗಿದೆ ಎಂದು ಅವರು ತಿಳಿಸಿದರು.

ವಿಶ್ವಕ್ಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಮಹರ್ಷಿ ವಾಲ್ಮೀಕಿ ಅವರು ಮಾನವ ಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಾಗೆಯೇ ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ್ದಾರೆ ಎಂದರು.

ನಾಗರಿಕತೆಯ ಬದಲಾವಣೆಗೆ ವಾಲ್ಮೀಕಿಯವರ ಬದುಕು ಒಂದು ಉತ್ತಮ ನಿದರ್ಶನವಾಗಿದೆ, ವಾಲ್ಮೀಕಿ ಬರೆದ ರಾಮಾಯಣ ಕೃತಿ ಪ್ರಪಂಚದ ಮಹಾನ್ ಗ್ರಂಥವಾಗಿದೆ ಎಂದರು.

ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಮಲ್ಲಪ್ಪ ಅವರು ಮಾತನಾಡಿ ಮಾನವಕುಲಕ್ಕೆ ಮಹರ್ಷಿ ವಾಲ್ಮೀಕಿ ಅವರ  ರಾಮಾಯಣ ಕೃತಿ ಉತ್ತಮ ಕೊಡುಗೆ, ಹಿಂದಿನ ಕಾಲದ ಆದರ್ಶ ಮಹನೀಯರ ಉತ್ತಮ ವಿಚಾರಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ನುಡಿದಂತೆ ನಡೆದುಕೊಳ್ಳುವುದು ವಾಲ್ಮೀಕಿ ರಾಮಯಾಣದಿಂದ ತಿಳಿದುಬರುತ್ತದೆ ಎಂದರು.

ವಾಲ್ಮೀಕಿ ಅವರು ಶೋಷಿತರ ಮತ್ತು ತಳ ಸಮುದಾಯದ ಧ್ವನಿ ಎಂದರೆ ತಪ್ಪಾಗಲಾರದು, ಮಹರ್ಷಿ ವಾಲ್ಮೀಕಿ ಅವರು ಶಾಂತಿ, ಸಹನೆ, ಸಹಭಾಳ್ವೆ ಬಯಸಿದ್ದರು. ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು ಎಂದರು.

ವಿದ್ಯಾರ್ಥಿ ನಿಲಯ ಹಾಗೂ ಆಶ್ರಮ ಶಾಲೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ನಿಂಗರಾಜು (ತಿತಿಮತಿ ಬಾಲಕರ ವಿದ್ಯಾನಿಲಯ), ಎಚ್.ಎಲ್.ರವಿ (ಬಸವನಹಳ್ಳಿ ಆಶ್ರಮ ಶಾಲೆ), ಶಶಿ (ಸಹ ಶಿಕ್ಷಕರು, ಬಸವನಹಳ್ಳಿ ಆಶ್ರಮ ಶಾಲೆ) ವಿ.ಎಸ್.ಪ್ರಶಾಂತ್ (ಸಹ ಶಿಕ್ಷಕರು, ಬೊಮ್ಮಡು ಆಶ್ರಮ ಶಾಲೆ), ಪ್ರಿಯಾ (ಯಲಕವನಾಡು ಹೊರ ಸಂಪನ್ಮೂಲ ಶಿಕ್ಷಕರು), ಸೀತಾಲಕ್ಷ್ಮೀ (ಅಡುಗೆಯವರು, ಮಾಲಂಬಿ ಆಶ್ರಮ ಶಾಲೆ), ರಾಧಕೃಷ್ಣ (ಅಡುಗೆ ಸಹಾಯಕರು, ಪೆರಾಜೆ ಬಾಲಕರ ನಿಲಯ) ಸರಸ್ವತಿ (ಅಡುಗೆ ಸಹಾಯಕರು ಕಾರ್ಮಾಡು ಬಾಲಕಿಯರ ವಿದ್ಯಾರ್ಥಿ ನಿಲಯ), ಪಿ.ಪಿ.ಮಹಾಬಲ (ಡಿ ದರ್ಜೆ ನೌಕರರು ಐಟಿಡಿಪಿ ಕಚೇರಿ) ಇವರಿಗೆ ಶಾಲು, ಪ್ರಶಸ್ತಿ ಪತ್ರ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.  ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಮಿತಾ ಬಿ.ಎಸ್., ಅಶ್ವಿತಾ ಪಿ.ಎಎನ್, ಕೀರ್ತಾನ ಬಿ.ಡಿ, ರಜಿತಾ ಜಿ.ಎಲ್., ಮೋನಿಷ ಪಿ.ಆರ್, ಹಾಗೂ ಭಾಗ್ಯವತಿ ಅವರನ್ನು ಗೌರವಿಸಲಾಯಿತು.    ವಿಧ್ಯಾರ್ಥಿ ನಿಲಯಗಳು ಮತ್ತು ವಿವಿಧ ಆಶ್ರಮ ಶಾಲೆಗಳಲ್ಲಿ ಸಾಂಸ್ಕೃತಿಕ, ಪ್ರಬಂಧ, ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಹಶೀಲ್ದಾರ್ ಮಹೇಶ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾಧಿಕಾರಿ ಸಿ.ಶಿವಕುಮಾರ್ ಸ್ವಾಗತಿಸಿದರು, ಐಟಿಡಿಪಿ ಇಲಾಖೆಯ ರಂಗನಾಥ್ ನಿರೂಪಿಸಿದರು, ಹರ್ಷಿತಾ ಮತ್ತು ತಂಡದವರು ಪ್ರಾರ್ಥಿಸಿದರು, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಚಿಕ್ಕಬಸವಯ್ಯ ವಂದಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: