ಮೈಸೂರು

ಮಿನಿ ವಿಧಾನಸೌಧ ಎದುರು ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ : ರಾಜ್ಯ ನಾಯಕರ ಯುವ ಸೇನೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಮೈಸೂರು, ಅ.14:- ನಗರದ ಮಿನಿ ವಿಧಾನಸೌಧ ಎದುರು ಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸುವ ಮೂಲಕ ನಾಯಕ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ  ನಿನ್ನೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತು.

ನಗರ ಪಾಲಿಕೆ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ‘ಮಹರ್ಷಿ ವಾಲ್ಮೀಕಿ’ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಾಲ್ಮೀಕಿ ಜಯಂತಿ ಆಚರಿಸಿದರು. ಜತೆಗೆ ಜಿಲ್ಲಾಡಳಿತದ ವಿರುದ್ಧ ನಾನಾ ಘೋಷಣೆ ಕೂಗಿದರು. ಪ್ರತಿಭಟನೆಗೆ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಶಾಸಕ ಜಿ.ಟಿ.ದೇವೇಗೌಡ, ಅನರ್ಹ ಶಾಸಕ ಎಚ್.ವಿಶ್ವನಾಥ್ ಸಾಥ್ ನೀಡಿದರು.

ಪ್ರತಿಭಟನಾಕಾರರು ಮಾತನಾಡಿ ವಾಲ್ಮೀಕಿ ಹಿಂದುಳಿದ ನಾಯಕ ಸಮುದಾಯಕ್ಕೆ ಸೇರಿದ ಆದಿಕವಿಯಾಗಿದ್ದು,    ಸರ್ಕಾರವೇ ವಾಲ್ಮೀಕಿ ಜಯಂತಿ ಆಚರಿಸುತ್ತ ಬಂದಿದೆ. ನಗರದ ಪ್ರಸಿದ್ಧ ಉದ್ಯಾನ ಹಾಗೂ ರಸ್ತೆಗಳಲ್ಲಿ ಸಾಹಿತಿ, ರಾಷ್ಟ್ರನಾಯಕರ ಪುತ್ಥಳಿ ಇರುವಂತೆ ರಾಮಾಯಣದಂತಹ ಮಹಾಕಾವ್ಯ ರಚಿಸಿದ ವಾಲ್ಮೀಕಿ ಪುತ್ಥಳಿಯನ್ನು ನಗರದ ಮಿನಿ ವಿಧಾನಸೌಧ ಬಳಿ ನಿರ್ಮಿಸುವಂತೆ ಹತ್ತು ವರ್ಷಗಳಿಂದ ಒತ್ತಾಯಿಸಲಾಗಿದೆ. ಹಲವಾರು ಪ್ರತಿಭಟನೆಗಳನ್ನು ನಡೆಸಲಾಗಿದೆ. ಈವರೆಗೂ ಬೇಡಿಕೆ ಈಡೇರಿಸದೆ ಜಿಲ್ಲಾಡಳಿತ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ದೂರಿದರು.

ಜನಪ್ರತಿನಿಧಿಗಳು ಪತ್ರದ ಮೂಲಕ ನೀಡಿರುವ ನಿರ್ದೇಶನವನ್ನು ಜಿಲ್ಲಾಡಳಿತ ಗಾಳಿಗೆ ತೂರಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಎಚ್ಚೆತ್ತುಕೊಂಡು ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಕಾಯಕಲ್ಪ ರೂಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ವಾಲ್ಮೀಕಿ ಅವರನ್ನು ಮಹಾಕವಿಯೆಂದು ಇಡೀ ಜಗತ್ತು ಒಪ್ಪಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮಹಾಕಾವ್ಯ ರಾಮಾಯಣ ಮತ್ತು ವಾಲ್ಮೀಕಿ ವಿರುದ್ಧ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ಬೆಳವಣಿಗೆಗಳನ್ನು ನಮ್ಮ ಸಮುದಾಯ ಒಕ್ಕೊರಲಿನಿಂದ ಖಂಡಿಸುತ್ತದೆ. ಅಂತಹ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ಮುಖಂಡರಾದ ದ್ಯಾವಪ್ಪ ನಾಯಕ, ಶಿವಕುಮಾರಸ್ವಾಮಿ, ಮಲ್ಲೇಶ್ ನಾಯಕ, ಮಂಜುನಾಥ್, ಚನ್ನ ನಾಯಕ ಸೇರಿದಂತೆ ನಾಯಕ ಸಮುದಾಯದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: