ಕ್ರೀಡೆ

ದ.ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಇನ್ನಿಂಗ್ಸ್, 137 ರನ್‌ಗಳ ಭರ್ಜರಿ ಗೆಲುವು

ಪುಣೆ,ಅ.14-ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಮತ್ತು 137 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿದೆ. ಸರಣಿ ಜಯಿಸಿರುವ ಸಂತಸದಲ್ಲಿರುವ ಟೀಂ ಇಂಡಿಯಾ ಇದೀಗ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದೆ.

ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಲಭ್ಯವಾದ ಬಹುದೊಡ್ಡ ಗೆಲುವು ಇದಾಗಿದೆ. ಈ ಜಯದೊಂದಿಗೆ ತಾಯ್ನಾಡಿನಲ್ಲಿ ಭಾರತ ತಂಡ ಸತತ 11 ಟೆಸ್ಟ್‌ ಸರಣಿಗಳನ್ನು ಗೆದ್ದ ನೂತನ ವಿಶ್ವ ದಾಖಲೆಯನ್ನು ಬರೆದಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ತವರಿನಲ್ಲಿ ಸತತ 10 ಸರಣಿಗಳನ್ನು ಎರಡು ಬಾರಿ ಗೆದ್ದ ವಿಶ್ವ ದಾಖಲೆ ಹೊಂದಿತ್ತು. ಇದೀಗ ಟೀಂ ಇಂಡಿಯಾ ಸತತ 11 ಸರಣಿಗಳನ್ನು ಗೆದ್ದು ಬೀಗಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ವಿಶ್ವದ ನಂ.1 ತಂಡವಾಗಿ ಉಳಿದಿರುವುದಕ್ಕೆ ಕಾರಣ ಏನೆಂಬುದನ್ನು ತೋರಿಸಿಕೊಟ್ಟಿದೆ.

ಆಸ್ಟ್ರೇಲಿಯಾ ತಂಡ ಮೊದಲಿಗೆ 1994-2000 ಅವಧಿಯಲ್ಲಿ ತವರಿನಲ್ಲಿ ಆಡಿದ ಸತತ 10 ಟೆಸ್ಟ್‌ ಸರಣಿಗಳನ್ನು ಗೆದ್ದಿತ್ತು. ಬಳಿಕ ರಿಕಿ ಪಾಂಟಿಂಗ್‌ ನಾಯಕತ್ವದಲ್ಲಿ 2004ರಿಂದ 2008ರವರೆಗೆ ಮತ್ತೊಮ್ಮೆ ತಾಯ್ನಾಡಿನಲ್ಲಿ 10 ಸರಣಿಗಳನ್ನು ಗೆದ್ದು ತನ್ನದೇ ವಿಶ್ವ ದಾಖಲೆಯನ್ನು ಸರಿಗಟ್ಟಿತ್ತು. ಇದೀಗ ಟೀಮ್‌ ಇಂಡಿಯಾ ಈ ದಾಖಲೆಯನ್ನು ಪುಡಿಪುಡಿ ಮಾಡಿದ್ದು, 2013-2019ರ ಅವಧಿಯಲ್ಲಿ ತವರಿನಲ್ಲಿ ಆಡಿದ 11 ಸರಣಿಗಳನ್ನು ಗೆದ್ದು ಇತಿಹಾಸ ರಚಿಸಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು 50 ಪಂದ್ಯಗಳಲ್ಲಿ ಮುನ್ನಡೆಸಿದ ಸಾಧನೆ ಮಾಡಿದ ವಿರಾಟ್‌ ಕೊಹ್ಲಿ, ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದೆನಿಸಿಕೊಂಡಾಗಿದೆ. ಇದೀಗ 50 ಟೆಸ್ಟ್‌ ಪಂದ್ಯಗಳ ನಾಯಕನಾಗಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದವರ ಪೈಕಿ ಅಗ್ರ 3ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ನಾಯಕತ್ವದಲ್ಲಿ ಈವರೆಗೆ ಒಟ್ಟು 14 ಬಾರಿ ಎದುರಾಳಿ ತಂಡಕ್ಕೆ ಫಾಲೋ ಆನ್‌ ಹೇರಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಫಾಲೋಆನ್ ಹೇರಿದ್ದು ಇದೇ ಮೊದಲು.  7 ಬಾರಿ ಎದುರಾಳಿ ಮೇಲೆ ಫಾಲೋ ಆನ್‌ ಹೇರಿ (ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಟೆಸ್ಟ್‌ ಒಳಗೊಂಡಂತೆ) 5 ಗೆಲುವು ಕಂಡಿದ್ದಾರೆ. 2 ಬಾರಿ ಮಳೆ ಕಾರಣ ಪಂದ್ಯ ಡ್ರಾ ಫಲಿತಾಂಶ ಕಂಡಿದೆ. ಇನ್ನು 7 ಬಾರಿ ಫಲೋ ಆನ್‌ ಹೇರದೆ 2ನೇ ಇನಿಂಗ್ಸ್‌ ಬ್ಯಾಟಿಂಗ್‌ ನಡೆಸಿ ಏಳೂ ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಎಂಟನೇ ಬಾರಿಗೆ ಇನ್ನಿಂಗ್ಸ್ ಜಯ ದಾಖಲಾಗಿದೆ. ಈ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ಹಿಂದಿಕ್ಕಿರುವ ವಿರಾಟ್ ಕೊಹ್ಲಿ, ಮಗದೊಬ್ಬ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ದಾಖಲೆ ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಎಂಎಸ್ ಧೋನಿ ನಾಯಕತ್ವದಲ್ಲಿ ಒಂಬತ್ತು ಇನ್ನಿಂಗ್ಸ್ ಗೆಲುವು ದಾಖಲಾಗಿದ್ದವು.

50 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದವರ ಪಟ್ಟಿ ಇಂತಿದೆ: ಸ್ಟೀವ್‌ ವಾ, ಆಸ್ಟ್ರೇಲಿಯಾ 37, ರಿಕಿ ಪಾಂಟಿಂಗ್‌, ಆಸ್ಟ್ರೇಲಿಯಾ 35, ವಿರಾಟ್‌ ಕೊಹ್ಲಿ, ಭಾರತ 30, ವಿವಿಯನ್‌ ರಿಚರ್ಡ್ಸ್‌, ವೆಸ್ಟ್‌ ಇಂಡೀಸ್‌ 27, ಮಾರ್ಕ್‌ ಟೇಲರ್‌, ಆಸ್ಟ್ರೇಲಿಯಾ 26, ಮೈಕಲ್‌ ವಾನ್‌, ಇಂಗ್ಲೆಂಡ್‌ 26, ಎಂ.ಎಸ್‌.ಧೋನಿ, ಭಾರತ 26.

ತವರಿನಲ್ಲಿ ಭಾರತ ಗೆದ್ದ ಸತತ 11 ಟೆಸ್ಟ್ ಸರಣಿಗಳು:
2013: ಎದುರಾಳಿ: ಆಸ್ಟ್ರೇಲಿಯಾ, ಗೆಲುವಿನ ಅಂತರ: 4-0, ನಾಯಕ: ಮಹೇಂದ್ರ ಸಿಂಗ್ ಧೋನಿ
2013/14: ಎದುರಾಳಿ: ವೆಸ್ಟ್‌ಇಂಡೀಸ್, ಗೆಲುವಿನ ಅಂತರ: 2-0, ನಾಯಕ: ಮಹೇಂದ್ರ ಸಿಂಗ್ ಧೋನಿ
2015/16: ಎದುರಾಳಿ: ದಕ್ಷಿಣ ಆಫ್ರಿಕಾ, ಗೆಲುವಿನ ಅಂತರ: 3-0, ನಾಯಕ: ವಿರಾಟ್ ಕೊಹ್ಲಿ
2016: ಎದುರಾಳಿ: ನ್ಯೂಜಿಲೆಂಡ್, ಗೆಲುವಿನ ಅಂತರ: 3-0, ನಾಯಕ: ವಿರಾಟ್ ಕೊಹ್ಲಿ
2016/17: ಎದುರಾಳಿ: ಇಂಗ್ಲೆಂಡ್, ಗೆಲುವಿನ ಅಂತರ: 4-0, ನಾಯಕ: ವಿರಾಟ್ ಕೊಹ್ಲಿ
2017: ಎದುರಾಳಿ: ಬಾಂಗ್ಲಾದೇಶ, ಗೆಲುವಿನ ಅಂತರ: 1-0, ನಾಯಕ: ವಿರಾಟ್ ಕೊಹ್ಲಿ
2017: ಎದುರಾಳಿ: ಆಸ್ಟ್ರೇಲಿಯಾ, ಗೆಲುವಿನ ಅಂತರ: 2-1, ನಾಯಕ: ವಿರಾಟ್ ಕೊಹ್ಲಿ/ಅಜಿಂಕ್ಯ ರಹಾನೆ
2017/18: ಎದುರಾಳಿ: ಶ್ರೀಲಂಕಾ, ಗೆಲುವಿನ ಅಂತರ: 1-0, ನಾಯಕ: ವಿರಾಟ್ ಕೊಹ್ಲಿ
2018: ಎದುರಾಳಿ: ಅಫಘಾನಿಸ್ತಾನ, ಗೆಲುವಿನ ಅಂತರ: 1-0, ನಾಯಕ: ಅಜಿಂಕ್ಯ ರಹಾನೆ
2018/19: ಎದುರಾಳಿ: ವೆಸ್ಟ್‌ಇಂಡೀಸ್, ಗೆಲುವಿನ ಅಂತರ: 2-0, ನಾಯಕ: ವಿರಾಟ್ ಕೊಹ್ಲಿ
2019: ಎದುರಾಳಿ: ದಕ್ಷಿಣ ಆಫ್ರಿಕಾ, ಗೆಲುವಿನ ಅಂತರ: 2-0*, ನಾಯಕ: ವಿರಾಟ್ ಕೊಹ್ಲಿ. (ಎಂ.ಎನ್)

Leave a Reply

comments

Related Articles

error: