ದೇಶ

ಅಂತಿಮ ಘಟ್ಟ ತಲುಪಿದ ಅಯೋಧ್ಯೆ ತೀರ್ಪು: ಡಿ.10 ವರೆಗೆ 144 ಜಾರಿ

ನವದೆಹಲಿ,ಅ.14-ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ಅಂತಿಮ ಘಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಡಿ.10 ವರೆಗೆ ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದೆ.

ಅಂತಿಮ ವಿಚಾರಣೆ ಮುಗಿಸಲು ಸುಪ್ರೀಂ ಕೋರ್ಟ್‌ ವಿಧಿಸಿದ್ದ ಅ.17ರ ಗಡುವು ಸನ್ನಿಹಿತವಾಗುತ್ತಿದೆ. ಅಯೋಧ್ಯೆ ಸಂಧಾನ ವಿಫಲವಾದ ಬಳಿಕ ಆಗಸ್ಟ್‌ 6ರಿಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ, ಪ್ರಕರಣವನ್ನು ನಿತ್ಯ ವಿಚಾರಣೆ ನಡೆಸುತ್ತಿದೆ. ಸೋಮವಾರ 38ನೇ ದಿನದ ವಿಚಾರಣೆ ನಡೆದಿದ್ದು, ಅ.17 ರಂದು ವಿಚಾರಣೆ ಅಂತ್ಯಗೊಳ್ಳುವ ನಿರೀಕ್ಷೆಯಿದೆ.

ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಂಜು ಕುಮಾರ್ ಝಾ, ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡ್ರೋಣ್ ಬಳಕೆ, ಚಿತ್ರೀಕರಣ ಮಾಡುವುದು, ಪಟಾಕಿ ಮಾರಾಟ, ಖರೀದಿ, ಮಾನವ ರಹಿತ ವೈಮಾನಿಕ ವಾಹನಗಳನ್ನು ದಂಡಾಧಿಕಾರಿ ಅನುಮತಿ ಇಲ್ಲದೇ ಬಳಸುವುದಕ್ಕೆ ಕೂಡ ನಿಷೇಧ ಹೇರಲಾಗಿದೆ. ಜೊತೆಗೆ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಲು ಕೂಡ ನಿರ್ಬಂಧಿಸಲಾಗಿದೆ.

ವಿವಾದಿತ 2.77 ಎಕರೆ ಜಾಗವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಮತ್ತು ರಾಮ್‌ ಲಲ್ಲಾ ನಡುವೆ ಸಮಾನವಾಗಿ ಹಂಚಬೇಕೆಂದು 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ 14 ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.

ಈ ಮಧ್ಯೆ, ಕಕ್ಷಿದಾರರಲ್ಲಿ ಒಂದಾಗಿರುವ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿಯು ಸಂಧಾನ ಪ್ರಸ್ತಾಪವನ್ನು ತಿರಸ್ಕರಿಸಿ, ಕೋರ್ಟ್‌ ತೀರ್ಪಿಗೆ ಬದ್ಧವಾಗಿರಲು ನಿರ್ಣಯ ಕೈಗೊಂಡಿದೆ. ವಿವಾದಿತ ಜಾಗವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಮುಸ್ಲಿಂ ಸಮುದಾಯದ ಹಲವು ಬುದ್ಧಿಜೀವಿಗಳು ಮಾಡಿದ ಮನವಿಯನ್ನು ಮಂಡಳಿ ಶನಿವಾರ ನಡೆದ ಸಭೆಯಲ್ಲಿ ತಿರಸ್ಕರಿಸಿದೆ. (ಎಂ.ಎನ್)

 

Leave a Reply

comments

Related Articles

error: