ಪ್ರಮುಖ ಸುದ್ದಿ

ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್‌ ಪ್ರಶಸ್ತಿ

ಸ್ಟಾಕ್‌ಹೋಮ್‌,ಅ.14-ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿದಂತೆ ಮೂವರು ಅರ್ಥಶಾಸ್ತ್ರಜ್ಞರಿಗೆ 2019ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿ ಸಂದಿದೆ.

ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಎಸ್ತೆರ್ ಡ್ಯುಫ್ಲೋ ಮತ್ತು ಮೈಖಲ್‌ ಕ್ರೆಮರ್‌ ಅವರಿಗೆ ನೊಬೆಲ್ ಪ್ರಶಸ್ತಿ ಸಂದಿದೆ. ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಇವರುಗಳಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಮೊತ್ತ 6.51 ಕೋಟಿ ರೂ. ಒಳಗೊಂಡಿದ್ದು, ಇದನ್ನು ಬ್ಯಾನರ್ಜಿ, ಡುಫ್ಲೋ ಮತ್ತು ಕ್ರಮರ್‌ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಡೆಯುತ್ತಿರುವ ಭಾರತೀಯರ ಪೈಕಿ ಅಭಿಜಿತ್ ಬ್ಯಾನರ್ಜಿ ಎರಡನೆಯವರಾಗಿದ್ದಾರೆ. ಈ ಹಿಂದೆ ಅಮರ್ತ್ಯ ಸೇನ್ ಅವರಿಗೆ 1998ರ ವರ್ಷದ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಅವರು ಮಾನವ ಕಲ್ಯಾಣ ಅರ್ಥಶಾಸ್ತ್ರ ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ಈ ಪುರಸ್ಕಾರ ಲಭಿಸಿತ್ತು.

ಇನ್ನು ಎಸ್ತರ್ ಡುಫ್ಲೋ ಅರ್ಥಶಾಸ್ತ್ರದಲ್ಲಿ ನೊಬೆಲ್ ಬಹುಮಾನ ಗಳಿಸಿದ ಎರಡನೇ ಮಹಿಳೆಯಾಗಿದ್ದಾರೆ. ಅಲ್ಲದೆ ಅತ್ಯಂತ ಕಿರಿಯರೆಂದೂ ದಾಖಲಾಗಿದ್ದಾರೆ.

ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ನೊಬೆಲ್‌ ಸಮಿತಿ, ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನೇ ಮಾರ್ಪಡಿಸಿದೆ. ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಬ್ಯಾನರ್ಜಿ ಕೋಲ್ಕತ್ತಾ ವಿವಿ, ಜವಹರ್‌ಲಾಲ್‌ ನೆಹರೂ ವಿವಿ (ಜೆನ್‌ಯು) ಯಲ್ಲಿ ಉನ್ನತ ವ್ಯಾಸಾಂಗ ಮಾಡಿದ್ದು, 1988ರಲ್ಲಿ ಹಾರ್ವರ್ಡ್‌ ವಿವಿಯಿಂದ ಪಿಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ. ಸದ್ಯ ಅವರು ಮಸಾಚುಸೆಟ್ಸ್ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾಗಿದ್ದಾರೆ. 2003ರಲ್ಲಿ ಬ್ಯಾನರ್ಜಿ ಅಬ್ದಲ್‌ ಲತೀಫ್‌ ಜಮೀಲ್‌ ಪಾವರ್ಟಿ ಆಕ್ಷನ್‌ ಲ್ಯಾಬ್‌ನ್ನು ಡುಫ್ಲೋ ಮತ್ತು ಸೆಂಧಿಲ್‌ ಮುಲ್ಲೈನಾಥನ್‌ ಜೊತೆ ಸ್ಥಾಪನೆ ಮಾಡಿರುವ ಇವರು ಇಂದಿಗೂ ಇದರ ನಿರ್ದೇಶಕರಾಗಿದ್ದಾರೆ. 2015ರ ನಂತರದ ಅಭಿವೃದ್ಧಿ ಅಜೆಂಡಾಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಗಣ್ಯ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: