ಪ್ರಮುಖ ಸುದ್ದಿ

ಸೇನೆಗೆ ಸೇರಲು ಮುಗಿಬಿದ್ದ ಯುವಕರ ದಂಡು : 9500 ಕ್ಕೂ ಅಧಿಕ ಮಂದಿಯಲ್ಲಿ ದೇಶದ ಗಡಿ ಕಾಯುವ ಉತ್ಸಾಹ

ರಾಜ್ಯ( ಮಡಿಕೇರಿ) ಅ.15 :- ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಂತಹ ವೀರಸೇನಾನಿಗಳನ್ನು ದೇಶಕ್ಕೆ ನೀಡಿದ ಯೋಧರ ನಾಡು ಕೊಡಗಿನಲ್ಲಿ ಸೇನಾ ಭರ್ತಿ ರ್ಯಾಲಿ ನಡೆಯುತ್ತಿದೆ. ದೇಶ ಸೇವೆ ಮಾಡಬೇಕು ಮತ್ತು ಗಡಿಯಲ್ಲಿ ದೇಶವನ್ನು ಕಾಯಬೇಕೆನ್ನುವ ಉತ್ಸಾಹದಿಂದ ಸಾವಿರಾರು ಯುವಕರು ಸೇನಾ ಭರ್ತಿಗಾಗಿ ಮುಗಿ ಬೀಳುತ್ತಿದ್ದಾರೆ.
ಜಮ್ಮು, ಕಾಶ್ಮೀರ ಮತ್ತು ಪುಲ್ವಾಮದಲ್ಲಿ ಉಗ್ರರ ದಾಳಿ ನಡೆದು ಸೈನಿಕರು ಹುತಾತ್ಮರಾದ ಬಳಿಕ ಯುವ ಸಮೂಹದಲ್ಲಿ ಸೇನೆಗೆ ಸೇರುವ ಕಿಚ್ಚು ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆರು ದಿನಗಳ ಕಾಲ ನಡೆಯುತ್ತಿರುವ ಸೇನಾ ಭರ್ತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾವಿರಾರು ಯುವಕರು ಆಗಮಿಸಿದ್ದಾರೆ.
ಕೊಡಗು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲೆಗಳಿಂದ ಆಗಮಿಸಿರುವ ಯುವ ಸಮೂಹ ದೇಶಭಕ್ತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದೆ. ದೇಶಕ್ಕಾಗಿ ಪ್ರಾಣ ನೀಡಲೂ ಸಿದ್ಧ ಎನ್ನುವ ಹುಮ್ಮಸ್ಸಿನಲ್ಲಿ ಸೇನೆಗೆ ಭರ್ತಿಯಾಗಲು ಬಂದಿರುವುದಾಗಿ ಹೇಳಿಕೊಂಡಿರುವ ಯುವಕರು ಎಲ್ಲಾ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ. ಮಡಿಕೇರಿಯ ಮಳೆ, ಚಳಿಗೆ ಅಂಜದೆ ಧೈರ್ಯವಾಗಿ ಮೈಯೊಡ್ಡಿ ಮುಂಜಾನೆ 5 ಗಂಟೆಯಿಂದಲೇ ಓಟ, ಹಾರಾಟ ಸೇರಿದಂತೆ ವಿವಿಧ ಕಸರತ್ತುಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಸೇನಾ ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸುಮಾರು 9,572 ಮಂದಿ ಹೆಸರು ನೋಂದಾಯಿಸಿದ್ದಾರೆ. ಮೊದಲ ದಿನ 2,445 ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿತ್ತು, ಇವರಲ್ಲಿ 1,948 ಮಂದಿ ಹಾಜರಾಗಿದ್ದರು. ಎರಡನೇ ದಿನವಾದ ಸೋಮವಾರ 2,481 ಮಂದಿಯನ್ನು ಆಹ್ವಾನಿಸಲಾಗಿತ್ತು, ಇವರಲ್ಲಿ 1,825 ಮಂದಿ ಅಭ್ಯರ್ಥಿಗಳು ಹಾಜರಾಗಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ ಹೀಗೆ ವಿವಿಧ ದೈಹಿಕ ಸಾಮಥ್ರ್ಯ ಪರೀಕ್ಷೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಲೆ.ಕ.ಗೀತಾ ಅವರು ಮಾಹಿತಿ ನೀಡಿದರು.
ಸೇನಾ ನೇಮಕಾತಿ ರ್ಯಾಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಮೂಲಭೂತ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸೇನಾ ಅಧಿಕಾರಿ ಅವರು ಸೇನಾ ನೇಮಕಾತಿ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: