ಮೈಸೂರು

ಶಿಸ್ತುಬದ್ಧ ಜೀವನಕ್ಕೆ ‘ರಾಷ್ಟ್ರೀಯ ಸೇವಾ ಯೋಜನೆ’ ಪ್ರೇರಕಶಕ್ತಿ : ಪಿ.ಎಸ್.ರಘು

ಬೈಲಕುಪ್ಪೆ : ವೈಯಕ್ತಿಕವಾಗಿ ಶಿಸ್ತುಬದ್ಧ ಜೀವನ ನಡೆಸಲು ಹಾಗೂ ಮೌಲ್ಯಾಧಾರಿತ ಸಮಾಜ ಕಟ್ಟಲು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರೇರಣೆಯ ವೇದಿಕೆಯಾಗಿದೆ ಎಂದು ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ರಘು ಅಭಿಪ್ರಾಯಪಟ್ಟರು.

ಪಿರಿಯಾಪಟ್ಟಣ ತಾಲೂಕಿನ ಭಾರತ್ ಮಾತಾ ಕೊಪ್ಪ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮಂಚದೇವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಳಿಕ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಳ್ಳುವ ಶಿಬಿರದಲ್ಲಿ ಪಾಲ್ಗೊಂಡರೆ ವೈಯಕ್ತಿಕವಾಗಿ ಹಲವಾರು ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ವ್ಯಕ್ತಿಗತವಾಗಿಯೂ ಬದಲಾವಣೆ ಆಗಬಹುದು. ಶಿಬಿರದಲ್ಲಿ ತಾನು ಕಲಿತುಕೊಂಡ ಹಲವಾರು ವಿಷಯಗಳು ಹಾಗೂ ಕಲಿಸಿದ ಅನುಭವಗಳನ್ನು ತನ್ನ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದೂ ಅಷ್ಟೆ ಮುಖ್ಯವಾಗಿರುತ್ತದೆ ಎಂದರು.

ಭಾರತ್ ಮಾತಾ ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲರು ಸಿಬೀ ಸಬಾಸ್ಟಿನ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಗೆ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರೇರಣೆಯ ಶಕ್ತಿಯಾಗಿದೆ. ಇಂದು ದೇಶ ವ್ಯಾಪ್ತಿಯಾಗಿ ಹರಡಿರುವ ಭ್ರಷ್ಟಾಚಾರ, ಸಮಾಜದಲ್ಲಿ ಶಾಂತಿ-ನೆಮ್ಮದಿ ಇಲ್ಲದಿರುವುದು, ಅತ್ಯಾಚಾರ-ಅನಾಚಾರ ಮುಂತಾದ ಸಾಮಾಜಿಕ ಪಿಡುಗು ಮತ್ತು ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡಬೇಕಾಗುತ್ತದೆ. ಶಿಬಿರಾರ್ಥಿಗಳು ಇಂಥ ಸೂಕ್ಷ್ಮ ಮತ್ತು ಗಂಭೀರ ವಿಚಾರಗಳ ಬಗ್ಗೆ ಜನರನ್ನು ಜಾಗೃತಗೊಳಿಸಬೇಕು, ಈ ನಿಟ್ಟನಲ್ಲಿ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿ-ವಿದ್ಯಾರ್ಥಿನಿಯೂ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಪಾಲ್ಗೊಳ್ಳುವುದರ ಮೂಲಕವಾಗಿ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು ಎಂದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎಚ್.ಆರ್. ದಿನೇಶ್ ಅವರು ಮಾತನಾಡಿ, ಶಿಬಿರಾರ್ಥಿಗಳು ಪರಿಸರ ಸ್ವಚ್ಛತೆಯ ಕುರಿತು ಜನರನ್ನು ಜಾಗೃತಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು ಗ್ರಾಮದ ಜನರು ಎಂದೆಂದೂ ನೆನಪಿನಲಿಟ್ಟುಕೊಳ್ಳುವಂಥ ಕಾರ್ಯವನ್ನು ಮಾಡಬೇಕು. ಸ್ವಚ್ಛತೆ, ಆರೋಗ್ಯ, ಶಿಕ್ಷಣ, ಮೂಢನಂಬಿಕೆ ಮುಂತಾದ ವಿಚಾರಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ಅರಿವು ಮೂಡಿಸಬೇಕು. ಅಲ್ಲದೆ ಎನ್‌.ಎಸ್‌.ಎಸ್. ಘಟಕದಲ್ಲಿ ನಗರ-ಪಟ್ಟಣ ಪ್ರದೇಶಗಳ ವಿದ್ಯಾರ್ಥಿಗಳಿರುತ್ತಾರೆ. ಇಂಥ ಸಂದರ್ಭ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳುವ ಶಿಬಿರದಲ್ಲಿ ಪಾಲ್ಗೊಳ್ಳುವ ಅಂಥ ಶಿಬಿರಾರ್ಥಿಗಳಿಗೆ ಗ್ರಾಮಿಣ ಪ್ರದೇಶದ ಬದುಕು-ಬವಣೆಗಳ ಬಗ್ಗೆಯೂ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೈಲಕುಪ್ಪೆ ಗ್ರಾ.ಪಂ. ಸದಸ್ಯೆ ರೇಣುಕಮ್ಮ, ಸದಸ್ಯೆ ಶೈಲಜ, ಬೈಲಕುಪ್ಪೆ ಆರಕ್ಷಕ ಠಾಣೆಯ ಎಎಸ್‌ಐ ಶ್ರೀನಿವಾಸಲು, ಕೊಪ್ಪ ಶಾಲೆ ಶಿಕ್ಷಕ ವೆಂಕಟೇಶ್, ಗ್ರಾಮದ ಮುಖಂಡರಾದ ಹನುಮನಾಯಕ, ಆನಂದ್, ಭಾರತ್ ಮಾತಾ ಶಾಲೆಯ ಅಧ್ಯಾಪಕ ವೃಂದದವರು, ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

  • ರಾಜೇಶ್

Leave a Reply

comments

Related Articles

error: