ಪ್ರಮುಖ ಸುದ್ದಿಮೈಸೂರು

ರೈತರ ಕಷ್ಟಗಳು ಸರ್ಕಾರಕ್ಕೆ ಕಾಣುತ್ತಿಲ್ಲ : ರಾಜ್ಯ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಬೇಸರ

ಬೈಲಕುಪ್ಪೆ: ರಾಜ್ಯದಲ್ಲಿ ಬರ ಕಾಡುತ್ತಿದ್ದು ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ತಾಲೂಕು ಕಾರ್ಯಕಾರಿ ಸಮಿತಿ ಜಾತ್ಯತೀತ ಜನತಾದಳ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬೃಹತ್ ಜೆಡಿಎಸ್ ಕಾರ್ಯಕರ್ತರ ಬಹಿರಂಗ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ರೈತರ ಸಾಲ ಮನ್ನಾ ಮಾಡುತ್ತೇನೆ ಎಂದರೆ ಅದಕ್ಕೆ ವಿರೋಧ ಪಕ್ಷಗಳು ಅನೇಕ ಟೀಕೆಗಳನ್ನು ಮಾಡಿದವು. ಒಂದು ಗೊತ್ತಿರಲಿ – ನನ್ನ ಮುಂದೆ ಯಾವುದೇ ರೈತರು ಸಾಲ ಮನ್ನಾ ಮಾಡಿ ಎಂದು ಹೇಳಿಲ್ಲ. ಆದರೆ ಬೀದರ್ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಗ್ರಾಮದಲ್ಲಿ ವಾಸ್ತವ್ಯ ಮಾಡಿದೆ. ಆ ಸಂದರ್ಭ ನಾನು ರೈತರು ಎದುರಿಸಿದ ವಾಸ್ತವಗಳನ್ನು ಕಣ್ಣಾರೆ ಕಂಡು ಪರಿಹಾರದ ಚಿಂತನೆ ನಡೆಸಿದೆ. ಮರುದಿನ ಬೆಳಿಗ್ಗೆ ಬೀದರ್ ಜಿಲ್ಲೆಯಲ್ಲಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಸಾಲ ಮನ್ನಾ ಮಾಡುತ್ತೇನೆ ಘೋಷಣೆ ಮಾಡಿದೆ ಎಂದರು.

2004ರಲ್ಲಿ ನಮ್ಮ ಹಳೆಯ ಗೆಳೆಯ ಹಾಲಿ ಶಾಸಕರನ್ನು ನಾವು ಮಂತ್ರಿ ಮಾಡಲಿಲ್ಲ ಎಂದು ಪಕ್ಷ ತೊರೆದು ಪಕ್ಷ ಕಟ್ಟಿಕೊಂಡರು. ಈ ಭಾಗದ ಹಾಲಿ ಶಾಸಕರ ದುರಾಡಳಿತವನ್ನು ಗಮನಿಸಿ. ಜಿ.ಪಂ.ಗೆ ಬೆಟ್ಟದಪುರ ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಕೆ.ಎಸ್. ಮಂಜುನಾಥ್‌ ಅವರನ್ನು ಶಾಸಕರ ಪುತ್ರನ ಎದುರು ಗೆಲ್ಲಿಸುವ ಮೂಲಕ ನನಗೆ ಹೆಚ್ಚು ಬಲ ನೀಡಿದ್ದೀರಿ. ಗುಜರಾತ್ ರಾಜಕೀಯ ಸ್ಥಿತಿ ನೋಡಿದರೆ ಈ ವರ್ಷದ ಅಂತ್ಯದಲ್ಲೆ ಚುನಾವಣೆ ಬರಲಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಮುಂದಿನ ಚುನಾವಣೆಯ ವಿಧಾನಸಭಾ ಟಿಕೆಟ್ ಪಟ್ಟಿಯನ್ನು ಇನ್ನು ನಾವೂ ಮಾಡಿಲ್ಲ. ಆದರೆ ಯಾವುದೇ ಗೊಂದಲ, ಆತಂಕ ಮಾಡಿಕೊಳ್ಳಬೇಡಿ. ನಾಮ್ಮ ಪಕ್ಷದ ಟೀಕೆಟ್‌ ಅನ್ನು ಕೆ.ಮಹದೇವ್‌ಗೆ ಅವರಿಗೆ ಕೋಡಲಾಗುವುದು. ಇವರು ಪಕ್ಷವನ್ನು ಸಂಘಟಿಸಿದರೆ ಇಂಥವರನ್ನು ಅಧಿಕಾರಕ್ಕೆ ಬಂದ ಸಮಯದಲ್ಲಿ ದೂರ ತಳ್ಳಲ್ಲ ಎಂದರು.

ಪಕ್ಕದ ಗ್ರಾಮದ ಚಿಕ್ಕನೇರಳೆಯಲ್ಲಿ ಗ್ರಾಮಸ್ಥರಿಗೆ ವಿರುದ್ಧವಾಗಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ನಾನೂ ಬರುವ ಹಾದಿಯಲ್ಲಿ ಗಮನಿಸಿದೆ. ಇದರ ಬಗ್ಗೆಯೂ ಆದಷ್ಟು ಬೇಗೆನೆ ಕ್ರಮಕೈಗೊಳ್ಳುವೆ ಎಂದು ಭರವಸೆ ನೀಡಿದರು.

ಗ್ರಾಮಸ್ಥರು ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಜನಪ್ರತಿನಿಧಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು. ಜನ ಜನಪ್ರತಿನಿಧಿಗಳ ಮೇಲೆ ನಂಬಿಕೆ ಇಟ್ಟಿರುತ್ತಾರೆ ಅದನ್ನ ಉಳಿಸಿಬೇಕು ಎಂದರು. ಅಲ್ಲದೇ ಈ ತಾಲೂಕಿನ ಶಾಸಕರು ಸಭೆ ಒಂದರಲ್ಲಿ ಮಾಡಿದ್ದ ಭಾಷಣವನ್ನು ಮಾಧ್ಯಮದಲ್ಲಿ ನೋಡಿದೆ. ‘ವೋಟ್ ಕೇಳೋಕೆ ಬಂದ್ರೆ ದುಡ್ ಕೇಳ್ತಿರಿ, ಅದಕ್ಕೇ ಭ್ರಷ್ಟಚಾರ ಮಾಡುವುದಾಗಿ’ ಆ ಸಭೆಯಲ್ಲಿ ಒಪ್ಪಿಕೊಂಡಿದಾರೆ. ಇಂತಹ ಶಾಸಕರು ನಿಮ್ಮ ತಾಲೂಕಿಗೆ ಬೇಕೆ ಎಂಬುದನ್ನು ನೀವೆ ಪ್ರಶ್ನೆ ಮಾಡಿಕೊಳ್ಳಿ ಎಂದರು.

ಯಾವುದೇ ಪಕ್ಷಗಳ ಜತೆ ನಾನು ಸಮಿಶ್ರ ಸರ್ಕಾರ ಮಾಡಲ್ಲ. ನಿತ್ಯ ಮಾಧ್ಯಮಗಳಲ್ಲಿ ಒಂದಲ್ಲ ಒಂದು ಹಗರಣಗಳು ಹೊರಬರುತ್ತಿವೆ. ಅಲ್ಲದೇ ದಿನೇದಿನೆ ರೈತರು ಸಾಯುತ್ತಿದ್ದಾರೆ. ಇದರ ಬಗ್ಗೆ ಈ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮನಷ್ಯತ್ವ ಇದೆಯಾ. ಬಿಜೆಪಿ ಆಡಳಿತವಿದ್ದಾಗ ತೆರಿಗೆಯನ್ನು ಹೆಚ್ಚು ಮಾಡಿ ಸಾರ್ವಜನಿಕರ ತಲೆ ಮೇಲೆ ಹೊಡೆದಿದ್ದಾರೆ. ಈಗ ರಾಜ್ಯ ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಅನ್ನುತ್ತಾರೆ.  ನಾನೂ 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ಮಂಡನೆ ಮಾಡುವಾಗ ರೈತರ ಸಾಲ ಮನ್ನಾ ಮಾಡಿದ್ದೇನೆ. ಒಂದು ರೂಪಾಯಿ ಸಾಲ ಮಾಡಲಿಲ್ಲ ಎಂದರು.

ಶಾಸಕ ಚಿಕ್ಕಮಾದು ಮಾತನಾಡಿ, ಈಗಾಗಲೆ ಮಾಧ್ಯಮಗಳಲ್ಲಿ 2018ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಣೆಬರಹ ಬರುತ್ತಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸಮನಾದ ಸ್ಥಾನಗಳಲ್ಲಿ ಜಯಗಳಿಸಲಿವೆ ಎಂಬ ಸಮೀಕ್ಷೆ ಬರುತ್ತಿದೆ. ರಾಜ್ಯದ ಜನರು ಕುಮಾರಣ್ಣನವರ ಆಡಳಿತ ಏನು ಎಂಬುದನ್ನು ನೋಡಿದ್ದಾರೆ. 2013ರಲ್ಲಿ ನಾವು ಏನೂ ತಪ್ಪು ಮಾಡಿರಲಿಲ್ಲ. ಆದರೆ ಮಧ್ಯದಲ್ಲಿ ಏನೋ ಒಂದು ಅಲೆ ಎದ್ದುಬಿಡ್ತು. ಆ ಸಮಯದಲ್ಲಿ ನಾವು ನಮ್ಮ ಅನೇಕ ಪಕ್ಷದ ನಾಯಕರನ್ನು ಕಳೆದುಕೊಂಡೆವು ಎಂದು ವಿಷಾದ ವ್ಯಕ್ತಪಡಿಸಿದರು.

ಮಹದೇವ್‌ ಅವರು ಎರಡು ಬಾರಿ ಸೋತಿದ್ದಾರೆ ಮೂರನೆ ಬಾರಿ ನಾವು ಗೆಲ್ಲಿಸಲಿಲ್ಲವೆಂದರೆ ಅವರ ಪರಿಸ್ಥಿತಿ ಏನಾಗಬೇಕು ಹೇಳಿ. ಅಧಿಕಾರ ಇಲ್ಲದಿದ್ದರೂ ನಿಮ್ಮ ತಾಲೂಕಿಗೆ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಶ್ರಮಿಸಿದ್ದಾರೆ. ಅಂತಹವರಿಗೆ ನೀವು ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು.

ಶಾಸಕ ಜಿ.ಟಿ.ದೇವೆಗೌಡರವರು ಮಾತನಾಡಿ, ವಿರೋಧ ಪಕ್ಷದ ಶಾಸಕರು ಮಾಧ್ಯಮದವರನ್ನು ಪೊಲೀಸ್ ಕಳುಹಿಸಿ ಕರೆಸಿಕೊಳ್ಳತ್ತಾರೆ. ಒಂದು ವೇಳೆ ಬರಲಿಲ್ಲವೆಂದರೆ ಅವರ ಮೇಲೆ ಹಲ್ಲೆ ಮಾಡುತ್ತಾರೆ. ಇಂತಹ ಗೂಂಡಾ ಸಂಸ್ಕೃತಿಯನ್ನು ನೀವು ಬೆಂಬಲಿಸುವಿರಾ ಎಂದು ಪ್ರಶ್ನಿಸಿದರು.

ರೈತರ ಸಾವಿಗೆ ಸರ್ಕಾರ ನೇರ ಕಾರಣ. ಇಂತಹ ಸರ್ಕಾರದ ಆಡಳಿತ ನಮಗೆ ಬೇಕೇ? ಈ ಭಾಗದಲ್ಲಿ ನೀರಾವರಿ ವ್ಯವಸ್ಥೆಯನ್ನು ತಂದವರು ಹಾಗೂ ರೈತರ ಕಷ್ಟಗಳನ್ನು ಗಮನಿಸಿ ಆಲಿಸಿ ಸಹಾಯ ಹಸ್ತ ಚಾಚಿದವರು, ರಾಷ್ಟ್ರಕ್ಕೆ ಅಕ್ಕಿ ನೀಡಿದವರು ಹೆಚ್.ಡಿ ದೇವೆಗೌಡರು. 20 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದು ನಮ್ಮ ಜೆಡಿಎಸ್ ಸರ್ಕಾರ. ಮತ್ತೆ ಈಗ ಅಧಿಕಾರ ಬಂದ ತಕ್ಷಣ ಯಾವುದೇ ಬ್ಯಾಂಕುಗಳಲ್ಲಿ ಸಾಲ ಪಡೆದ ರೈತರ ಸಾಲವನ್ನು ಮನ್ನಾ ಮಾಡುತ್ತೇವೆ ಎಂದು ಚಿಂತನೆ ಮಾಡುತ್ತಿರುವ ಏಕೈಕ ನಾಯಕ ಕುಮಾರಣ್ಣ. ಇಂತಹ ಕುಮಾರಣ್ಣನವರ ಮತ್ತು ಮಹದೇವಣ್ಣನವರ ಕಣ್ಣೀರು ಒರೆಸಿ ಧೈರ್ಯ ತುಂಬಬೇಕು. ರೈತರ ಸರ್ಕಾರವನ್ನು ಆಡಳಿತಕ್ಕೆ ತರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕೆ.ಮಹದೇವ್ ಮಾತನಾಡಿ, ಕಾರ್ಯಕರ್ತರು ಶ್ರಮವಹಿಸಿ ಈ ತಾಲೂಕಿನಲ್ಲಿ ಹೆಚ್.ಡಿ. ದೇವೆಗೌಡರ ಪಕ್ಷವಾದ ಜೆಡಿಎಸ್ ಪಕ್ಷದ ಬೇರನ್ನು ಗಟ್ಟಿಗೊಳಿಸಿದ್ದೀರಿ. ಈ ಪಕ್ಷ ಉಳಿದಿದೆ ಎಂದರೆ ಅದು ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಿಂದ ಮಾತ್ರ. ರಾಜಕೀಯ ಯಾರಿಗೂ ಶಾಶ್ವತ ಅಲ್ಲ ಎಂದರು.

ಹಾಲಿ ಶಾಸಕರು ನಮ್ಮ ಪಕ್ಷದ ಜನಪ್ರತಿನಿಧಿಗಳನ್ನು ಹಿಂದೆತಳ್ಳಲು ನೀಚ ಕೆಲಸವನ್ನು ಮಾಡಿದಾರೆ. ಆದರೆ ತಾಲೂಕಿನ ಜನರ ಕಷ್ಟಗಳನ್ನು ನಿಭಾಯಿಸುವಲ್ಲಿ ಅವರೇ ಹಿಂದುಳಿದಿದ್ದಾರೆ. ನಾನು ಎರಡು ಬಾರಿ ಸೋಲು ಅನುಭವಿಸಿದ್ದೇನೆ. ಪಕ್ಷದಿಂದ ಬಿಡುಗಡೆ ಮಾಡಿಕೊಡಿ ಎಂದು ಹೇಳಿಕೊಂಡಾಗ ಪಕ್ಷದ ಕಾರ್ಯಕರ್ತರು ಮನವಿ ಸ್ವೀಕರಿಸಲಿಲ್ಲ. ನನಗೆ ಧೈರ್ಯ ತುಂಬಿ ಮತ್ತೆ ಪಕ್ಷದ ಪರವಾಗಿ ದುಡಿಯಲು ಅವಕಾಶ ಕೊಟ್ಟಿದಿರಿ. ಉಳ್ಳವರಿಗೆ ಮಾತ್ರ ಈ ರಾಜಕಾರಣ ಎಂದು ಎಲ್ಲರೂ ಹೆಳುತ್ತಾರೆ. ಆದರೆ ನಿಮ್ಮ ಧೈರ್ಯ ಬೆಂಬಲ ನನಗೆ ಸಿಗುವಾಗ ನನ್ನ ಸಂಪತ್ತು ಎಲ್ಲ ಕಳೆದುಕೊಂಡರೂ ನಾನು ಜೀವ ಇರುವ ತನಕ ತಾಲೂಕಿನ ಅಭಿವೃದ್ಧಿಗೆ ಶ್ರಮಿಸುವೆ ಎಂದರು.

ಜೆಡಿಎಸ್ ಸೇರ್ಪಡೆ: ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗನ್ನು ತೆರೆದು ಹಲವು ಮಂದಿ ಮುಖಂಡರು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.

ಜನಸಾಗರ: 2018ರ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರ ಭಾಷಣ ಕೇಳಲು ಸುಮಾರು 20 ಸಾವಿರಕ್ಕೂ ಹೆಚ್ಚಿನ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಅಕ್ಕಪಕ್ಕದ ಮನೆಗಳ, ಅಂಗಡಿ ಮುಂಗಟ್ಟುಗಳು ಮೇಲೆ ಕುಳಿತು ಜನತೆ ಕಾರ್ಯಕ್ರಮ ವಿಕ್ಷೀಸಿದರು.

ಈ ಸಂದರ್ಭ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫರೂಕ್, ಉಪ ಸಭಾಪತಿಗಳಾದ ಮರಿತಿಬ್ಬೇಗೌಡ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಶ್ರೀಕಂಠೆಗೌಡ, ಶಾಸಕರಾದ ಚಿಕ್ಕಮಾದು, ಜಿ.ಟಿ. ದೇವೆಗೌಡ, ಮೈಸೂರು ಜೆಡಿಎಸ್ ಅಧ್ಯಕ್ಷರಾದ ನರಸಿಂಹಸ್ವಾಮಿ, ಯುವ ಜೆಡಿಎಸ್ ಕಾರ್ಯದರ್ಶಿ ಹೆಚ್.ಆರ್. ಅರುಣ್ ಕುಮಾರ್, ಮೇಯರ್ ರವಿಕುಮಾರ್, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಭೋಜೇಗೌಡ, ಮೈಮುಲ್ ನಿರ್ದೇಶಕ ಪ್ರಸನ್ನ ಪಿ.ಎಂ, ಜಿ.ಪಂ.ಸದಸ್ಯರಾದ ಕೆ.ಎಸ್. ಮಂಜುನಾಥ್, ರುದ್ರಮ್ಮ ನಾಗಯ್ಯ, ರಾಜೇಂದ್ರ, ಜಯಕುಮಾರ್, ತಾ.ಪಂ. ಸದಸ್ಯರಾದ ಮೋಹನ್‌ರಾಜು, ಸುಮಿತ್ರಾ ನಾಗರಾಜು, ಆರ್.ಎಸ್. ಮಹದೇವ್, ಐಲಾಪುರ ರಾಮು, ಮುತ್ತುರಾಜು, ಮಲ್ಲಿಕಾರ್ಜುನ್, ರಂಗಸ್ವಾಮಿ, ಕೀರ್ತಿ, ಪುಷ್ಪಪುಟ್ಟಸ್ವಾಮಿ, ಜಯಂತಿ ಸೋಮಶಂಕರ್, ಶೋಭಚಂದ್ರು, ಈರಯ್ಯ, ಕಾರ್ಯಕರ್ತರಾದ ವಿದ್ಯಾಶಂಕರ್, ಕುಶಾಲ್‌ಗೌಡ, ಶ್ರೀನಿವಾಸ, ಹನುಮಂತ, ಕೆ.ಮಹದೇವ್, ರಾಜಶೇಖರ್, ಲಕ್ಷ್ಮೇಗೌಡ, ಉದಯ, ನಾಗರಾಜಶೆಟ್ಟಿ, ಗೀರಿಶ್, ಲೋಕೇಶ್, ಐ.ಆರ್.ಗಿರಿ, ಮಲ್ಲೇಶ್, ಮತ್ತಿತರರು ಹಾಜರಿದ್ದರು.

Leave a Reply

comments

Related Articles

error: