ಮೈಸೂರು

ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸಿದವರು : ಭಾಷ್ಯಂ ಅಯ್ಯಂಗಾರ್ ಬಣ್ಣನೆ

‘ತತ್ವಶಾಸ್ತ್ರ, ಧರ್ಮ ಮತ್ತು ಸಮಾಜದಲ್ಲಿ ಶ್ರೀ ರಾಮಾನುಜರ ಸ್ಥಾನ’ ಮೂರು ದಿನಗಳ ಕಾಲ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಮೈಸೂರು,ಅ.15:- ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿ, ಅಲ್ಲಿ ಜಾತಿಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರಲ್ಲದೇ  ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು ಎಂದು ಮಹಾರಾಜ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಭಾಷ್ಯಂ ಅಯ್ಯಂಗಾರ್ ಬಣ್ಣಿಸಿದರು.

ಅವರಿಂದು ಮಾನಸಗಂಗೋತ್ರಿಯ ಇಎಂಎಂ ಆರ್ ಸಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗ ‘ತತ್ವಶಾಸ್ತ್ರ, ಧರ್ಮ ಮತ್ತು ಸಮಾಜದಲ್ಲಿ ಶ್ರೀ ರಾಮಾನುಜರ ಸ್ಥಾನ’ ಮೂರು ದಿನಗಳ ಕಾಲ ಹಮ್ಮಿಕೊಂಡ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  ಈಶ್ವರನದು ಶುದ್ಧ ಸತ್ವ ಗುಣ. ಪ್ರಳಯದಲ್ಲಿ ಜೀವ, ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಅವನದು ಶುದ್ಧ ಸತ್ವಗುಣ . ಪ್ರಳಯ ಕಾಲದಲ್ಲಿ ಜೀವ -ಪ್ರಕೃತಿಗಳು ಅವನಲ್ಲಿ ಅಡಗುತ್ತವೆ. ಜಗತ್ತು ವ್ಯಕ್ತವಾದಾಗ ಕರ್ಮಾನುಸಾರವಾಗಿ ದೇಹಗಳು ಒದಗುತ್ತವೆ. ಶ್ರೀಮನ್ನಾರಾಯಣನೇ ಪರಬ್ರಹ್ಮ . ಅವನ ಶಕ್ತಿಯೇ ಲಕ್ಷ್ಮಿ. ವೈಕುಂಠವು ಸತ್ವದಿಂದಾಗಿದೆ. ಸರ್ವಕಲ್ಯಾಣ ಗುಣಗಳಿಂದ ಕೂಡಿದ ಶ್ರೀಮನ್ನಾರಾಯಣನು ತನ್ನ ಲೀಲೆಗಾಗಿ ಪ್ರಪಂಚವನ್ನು ಸೃಷ್ಟಿಸುತ್ತಾನೆ” ಎನ್ನುವುದು ವಿಶಿಷ್ಟಾದ್ವೈತದ ಪ್ರತಿಪಾದನೆ.  ‘ಶ್ರೀ ಲಕ್ಷ್ಮೀನಾರಾಯಣನೇ ಪರತತ್ತ್ವ, ಚೇತನ, ಅಚೇತನಗಳೆಲ್ಲವೂ ಅವನಿಗೆ ಅಧೀನವಾದುವು ಮಾನವನು ತನ್ನ ಆತ್ಮೋನ್ನತಿ ಮತ್ತು ಶಾಶ್ವತ ಸುಖವಾದ ಮೋಕ್ಷ ಇವೆರಡನ್ನೂ ಪಡೆಯಲು ನಾರಾಯಣನಲ್ಲಿ ದೃಢವಾದ ವಿಶ್ವಾಸಪೂರ್ವಕ ಶರಣಾಗತಿಯಲ್ಲಿದೆ ಬೇರೆ ಗತಿ ಇಲ್ಲ  ಎಂದು ರಾಮಾನುಜಾಚಾರ್ಯರು ಉಪದೇಶಿಸಿದ್ದರು. ಶರಣಾಗತಿ ಗದ್ಯ, ಶ್ರೀರಂಗ ಗದ್ಯ ಮತ್ತು ವೈಕುಂಠ ಗದ್ಯಗಳನ್ನೊಳಗೊಂಡ ‘ಗದ್ಯ ತ್ರಯ’, ವೇದಾಂತ ದೀಪ, ವೇದಾಂತ ಸಾರ ಮತ್ತು ನಿತ್ಯಗ್ರಂಥಮ್ ಎಂಬ ಕೃತಿಗಳನ್ನು ರಚಿಸಿದ್ದರು.  ರಾಮಾನುಜಾಚಾರ್ಯರು ಸಂಸ್ಕೃತದಲ್ಲಿ ‘ಒಂಭತ್ತು’ ಗ್ರಂಥಗಳನ್ನು ರಚಿಸಿದ್ದು, ವೇದಗಳ ಅರ್ಥ ಮತ್ತು ಸಾರವನ್ನೊಳಗೊಂಡ ‘ವೇದಾರ್ಥ ಸಂಗ್ರಹ’,  ಭಗವದ್ಗೀತೆಯ ಟೀಕೆ ಮತ್ತು ವ್ಯಾಖ್ಯಾನವನ್ನೊಳಗೊಂಡ ‘ಭಗವದ್ಗೀತಾ ಭಾಷ್ಯ’ ಹಾಗೂ ಬ್ರಹ್ಮ ಸೂತ್ರಗಳಿಗೆ ವ್ಯಾಖ್ಯಾನವಾಗಿರುವ ‘ಶ್ರೀ ಭಾಷ್ಯ’ಇವು ಹೆಚ್ಚು ಜನಪ್ರಿಯವಾಗಿವೆ ಎಂದರು.

ಭಕ್ತಿಯ ಪರಾಕಾಷ್ಠೆಯಲ್ಲಿ ಎಲ್ಲವೂ ಸಮಾನವಾಗಿಯೇ ಕಾಣುತ್ತದೆ. ಅಥವಾ ಎಲ್ಲವೂ ಸಮನಾಗಿ ಕಾಣುವ ಹಂತವೇ ಭಕ್ತಿಯ ಪರಾಕಾಷ್ಠೆ. ರಾಮಾನುಜರು ಆ ಔನ್ನತ್ಯವನ್ನು ತಲುಪಿದ್ದರು. ಆದರೆ ಸುತ್ತಲಿನ ಸಮಾಜ ಅದನ್ನು ಅರ್ಥ ಮಾಡಿಕೊಳ್ಳುವಷ್ಟು ಕೂಡಾ ಪ್ರಬುದ್ಧವಾಗಿರಲಿಲ್ಲ. ಹೀಗಾಗಿ ರಾಮಾನುಜರು ತಮ್ಮ ಜೀವಿತಾವಧಿಯಲ್ಲಿ ಎಷ್ಟು ಗೌರವಾದರಗಳನ್ನು ಪಡೆದರೋ ಅಷ್ಟೇ ವಿರೋಧವನ್ನೂ ಎದುರಿಸಿದರು. ಬಂದ ಸವಾಲುಗಳನ್ನು ಸ್ವೀಕರಿಸಿದರು.   ಹೀಗಾಗಿಯೇ ಸದಾ ಒಂದು ಊರು ಬಿಟ್ಟು ಮತ್ತೊಂದಕ್ಕೆ, ಅಲ್ಲಿಂದ ಇನ್ನೊಂದಕ್ಕೆ  ಹೀಗೆ ಸಂಚರಿಸುತ್ತಲೇ ಇರುತ್ತಿದ್ದರು. ಶಿಸ್ತಿಗೆ ಹೆಸರಾಗಿದ್ದರು. ಮಾನವೀಯತೆಗೆ ಮಹತ್ವ ನೀಡಿ,ಬಡವಬಲ್ಲಿದ, ಮೇಲು ಕೀಳೆಂಬ ಭೇದ ತೊಡೆಯಲು ಶ್ರಮಿಸಿದರು. ಹೇಗೆ ಇತರರಿಗೆ ಸಹಾಯ ಮಾಡಬೇಕು? ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ತೋರಿಸಿದ್ದರು. ಮರಗಿಡ, ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವಂತೆ ತಿಳಿಸಿದ್ದರು.

ಹನ್ನೊಂದನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ವೇದಾಂತಿ ರಾಮಾನುಜಾಚಾರ್ಯರು ಭಾರತೀಯ  ತತ್ತ್ವಜ್ಞಾನಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು. ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಪ್ರವರ್ತಕರಾಗಿ ಗುರುತಿಸಲ್ಪಡುವ ರಾಮಾನುಜಾಚಾರ್ಯರು, ಭಕ್ತಿ ಚಳವಳಿಗೆ ಪ್ರೇರೇಪಣೆ ನೀಡಿದ ‘ವಿಶಿಷ್ಟಾದ್ವೈತ’ವನ್ನು ಪ್ರಚುರಪಡಿಸಿದರು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ ರಾಮಾನುಜಾಚಾರ್ಯರು ಅಸಾಮಾನ್ಯ ವೇದಾಂತಿ. ಭಕ್ತಿಯೇ ಅವರ ಧರ್ಮ.  ಅವರು ಬಹುದೊಡ್ಡ ಸಂತರು. ಕ್ರಾಮತಿಕಾರಿ ಸಮಾಜ ಸುಧಾರಕರು. ತುಳಿತಕ್ಕೊಳಗಾದವರಿಗೆ ಅವರ ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ನಡೆಸಿದರು. ಅವರ ಜೀವನ ಚರಿತ್ರೆಯನ್ನು ಯುವಕರಿಗೆ ಮುಟ್ಟಿಸಬೇಕು ಎಂದರು.

ಇದೇ ವೇಳೆ ವಿವಿಯ ತತ್ವಶಾಸ್ತ್ರ ವಿಭಾಗ ಹಳೆಯ ವಿಭಾಗವಾಗಿದ್ದು, ತನ್ನದೇ ಆದ ಶೈಲಿಯಲ್ಲಿ ಕೆಲಸ ಮಾಡಿಕೊಂಡು ಬಂದು ತನ್ನದೇ ಛಾಪು ಮೂಡಿಸಿದೆ. ಇತ್ತೀಚೆಗೆ ಅಧ್ಯಾಪಕರನ್ನೇ ನೇಮಿಸದೇ ಒಬ್ಬರೋ, ಇಬ್ಬರೋ ಇದ್ದಾರೆ.  ತತ್ವಶಾಸ್ತ್ರ ವಿಭಾಗ ಹೆಚ್ಚಿನ ವಿದ್ವಾಂಸರಿಂದ ತುಂಬಬೇಕೆಂಬ ಆಸೆಯಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಡೀನ್ ಪ್ರೊ.ಮಹಾದೇವ್, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಡನೈಲ್, ವಿಸಿಟಿಂಗ್ ಪ್ರೊ.ವಿ.ಎನ್.ಶೇಷಗಿರಿರಾವ್, ಛೇರಮನ್ ಡಾ.ಎಸ್.ವೆಂಕಟೇಶ್, ಪ್ರೊ.ಎ.ವಿ.ನರಸಿಂಹಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: