ಪ್ರಮುಖ ಸುದ್ದಿಮೈಸೂರು

ಸಾ.ರಾ ಮಹೇಶ್ ನಿಮ್ಮ ಆರೋಪ ಹಿಟ್ ಅಂಡ್ ರನ್ ಆಗಬಾರದು, ಗುರುವಾರ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಬನ್ನಿ : ಮಾಜಿ ಸಚಿವ ಸಾ.ರಾ.ಮಹೇಶ್ ಗೆ ಹಳ್ಳಿಹಕ್ಕಿ ಬಹಿರಂಗ ಸವಾಲು

ಮೈಸೂರು,ಅ.15:- ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಡುವಿನ ವಾಕ್ಸಮರ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.  ವಿಶ್ವನಾಥ್ 25 ಕೋಟಿಗೆ ಬಿಜೆಪಿಗೆ ಮಾರಾಟವಾದ್ರು ಎಂದು ಆರೋಪ ಮಾಡಿದ್ದ ಮಾಜಿ ಸಚಿವ ಸಾ.ರಾ ಮಹೇಶ್ ಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಹಿರಂಗ ಸವಾಲು ಹಾಕಿದ್ದಾರೆ.

ಸಾ.ರಾ ಮಹೇಶ್ ನಿಮ್ಮ ಆರೋಪ ಹಿಟ್ ಅಂಡ್ ರನ್ ಆಗಬಾರದು. ನನ್ನನ್ನು ಕೊಂಡುಕೊಂಡವನ ಬಗ್ಗೆ ನಿಮಗೆ ಗೊತ್ತಿದೆ ಅಂದುಕೊಂಡಿದ್ದೇನೆ. ಗುರುವಾರ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ‌ ಇರುತ್ತೇನೆ. ಕೊಂಡುಕೊಂಡವನನ್ನು ನೀವು ಕರೆದುಕೊಂಡು ಬನ್ನಿ ನೋಡೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಹಿರಂಗ ಸವಾಲು ಹಾಕಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿಗೆ ಮಾರಾಟವಾಗಿದ್ದಾರೆಂಬ ಸಾ.ರಾ ಮಹೇಶ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಇಂತಹ ಎಲ್ಲಾ ಹೇಳಿಕೆ ಕೇಳುತ್ತಿದ್ದರೇ ಮನಸ್ಸಿಗೆ ವ್ಯಥೆ ಆಗುತ್ತೆ. ನಾನೊಬ್ಬ ರೈತನ ಮಗ, ನನ್ನ ಬಳಿ ಏನೂ ಇಲ್ಲ. ಇದು ಹಿಟ್ ಅಂಡ್ ರನ್ ಆಗಬಾರದು ಸಾ.ರಾ.ಮಹೇಶ್. ಗುರುವಾರ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ‌ ಇರುತ್ತೇನೆ.  ನನ್ನನ್ನ ಕೊಂಡುಕೊಂಡಿರುವವರನ್ನು ಕರೆದುಕೊಂಡು ಬರಬೇಕು. ನಾನು ಪೊಲೀಸರಿಗೆ, ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಬರುತ್ತೇನೆ. ಗುರುವಾರ ನೀವು ಅವನ ಜೊತೆ ಬರಲಿಲ್ಲ ಅಂದರೆ ನೀವು ಸುಳ್ಳ ಆಗುತ್ತೀರಿ ಎಂದು ಮತ್ತೊಮ್ಮೆ ಸವಾಲು ಹಾಕಿದರು.

ಈ ವ್ಯವಸ್ಥೆಯಲ್ಲಿ ಪ್ರಮಾಣಿಕವಾಗಿ ಬದುಕಬೇಕು ಎಂದುಕೊಳ್ಳುವವರಲ್ಲಿ ನಾನೂ ಒಬ್ಬ. ನನ್ನ ಮನೆಯಲ್ಲಿ ನಾಲ್ಕು ಜನ ಹೆಚ್ಚು ಬಂದರೆ ಕೂರಲು ಸ್ಥಳವಿಲ್ಲ.  ಜಿಲ್ಲೆಯ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗುತ್ತಿದೆ.   ಜಿಲ್ಲೆಯಲ್ಲಿ ಕೃಷಿ, ಹೈನುಗಾರಿಕೆ, ರೈತರು, ಉದ್ಯೋಗ ಸೇರಿದಂತೆ ಎಲ್ಲ ವಲಯವನ್ನು ಸಿದ್ದಗೊಳಿಸುತ್ತಿದ್ದೇವೆ. ಇದೆಲ್ಲ ರಿಯಲ್ ಎಸ್ಟೇಟ್ ಮಾಡುವವರಿಗೆ ಗೊತ್ತಾಗುವುದಿಲ್ಲ ಎಂದು ಸಾರಾ.ಮಹೇಶ್ ಗೆ ಹೆಚ್. ವಿಶ್ವನಾಥ್ ಟಾಂಗ್ ಕೊಟ್ಟರು.

ಹೆಚ್.ವಿಶ್ವನಾಥ್ ಬಿಜೆಪಿಗೆ ಮಾರಾಟವಾಗಿಲ್ಲ ಎನ್ನುವುದಾದರೇ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಈ ಹಿಂದೆ ಸವಾಲು ಹಾಕಿದ್ದರು.

ಉಪ ಚುನಾವಣೆಯಲ್ಲಿ 15 ರಲ್ಲಿ  ಅನರ್ಹರು ಕೇವಲ 3 ಗೆಲ್ಲುತ್ತಾರೆ ಎನ್ನೋ ಗುಪ್ತಚರ ಇಲಾಖೆ ಮಾಹಿತಿ ವಿಚಾರಕ್ಕೆ ಪ್ರತಿಕ್ರಿಯಿಸಿ  ಈ ತರಹದ ವರದಿಗಳು ಸಾಕಷ್ಟು ಸುಳ್ಳಾಗಿದೆ. 10 ಸ್ಥಾನ ಗೆಲ್ಲಲ್ಲ ಎಂದ ಕಡೆ  150 ಸೀಟು ಗೆದ್ದಿಲ್ಲವೆ? 150 ಸ್ಥಾನ ಗೆಲ್ಲುತ್ತೆ ಎನ್ನುವ ಕಡೆ  10 ಸೀಟುಗಳನ್ನೂ ಗೆದ್ದಿಲ್ಲ. ಜನ ಓಟು ಹಾಕಿದವರು ಗೆಲ್ಲುತ್ತಾರೆ ಬಿಡಿ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಸದ್ಯ ಪ್ರಕರಣ ಸುಪ್ರೀಂ ಅಂಗಳದಲ್ಲಿ ಇದೆ. ಸುಪ್ರಿಂ ತೀರ್ಪು ಬಂದ ಮೇಲೆ ನೋಡೋಣ ಎಂದರು.

ಇಡಿ ಐಟಿ ದಾಳಿ ರಾಜಕೀಯ ಪ್ರೇರಿತ ಎಂಬು ಕಾಂಗ್ರೆಸ್-ಜೆಡಿಎಸ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಇಡಿ ಮತ್ತೆ ಐಟಿ ಸಂವಿಧಾನ ಬದ್ದವಾಗಿ ಕಾರ್ಯ ‌ನಿರ್ವಹಿಸುತ್ತಿವೆ. ಇದರ ಬಗ್ಗೆ ಪರಮೇಶ್ವರ್ ಅವರೇ ಸೂಕ್ತವಾದ ಉತ್ತರ ಕೊಟ್ಟಿದ್ದಾರೆ. ದಾಳಿ ತನ್ನ ಪರ್ಸನಲ್ ಆಗಿದೆ. ಇದಕ್ಕೆ ರಾಜಕೀಯ ಲೇಪನ ಹಚ್ಚಬೇಡಿ ಎಂದಿದ್ದಾರೆ. ಇನ್ನಾದರೂ ಇದನ್ನು ತಿಳಿದುಕೊಂಡರೆ ಸಾಕು ಎಂದರು.

ಸಿಎಂ ಯಡಿಯೂರಪ್ಪ ಬಳಿ ನನ್ನ ಕ್ಷೇತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ. ನಾನು ಜನಾಭಿಪ್ರಾಯದ ಜೊತೆ ನಿಮ್ಮ ಬಳಿ ಬರುತ್ತೇನೆ ಎಂದಿದ್ದೇನೆ. ಇದು ಎಲೆಕ್ಷನ್ ಗಿಮಿಕ್ ಅಲ್ಲ, ಒಂದು ವರ್ಷದಿಂದ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಇದಕ್ಕಾಗಿ ಮೈತ್ರಿ ಸರ್ಕಾರದಲ್ಲಿ ಕೆಎಸ್‌ಆರ್‌ಟಿಸಿ ಡಿವಿಷನ್ ಆಫೀಸ್ ಮಾಡಿಸಿದ್ದೇನೆ. ಡಿಡಿಪಿಐ ಕಚೇರಿಗೆ ಸ್ಥಳ ಹುಡುಕಲಾಗುತ್ತಿದೆ. ನಂತರ ಜನರ ಸಂಘಟನೆ ಮಾಡುವುದು ನಮ್ಮ‌ ಉದ್ದೇಶ. ಹಿಂದೆ ಸಮಿತಿಗಳ ಅಗತ್ಯ ಇತ್ತು, ಆದರೆ ಆಯೋಗಗಳೇ ಇಲ್ಲದೆ‌ ತುಮಕೂರು ರಾಮನಗರ ಜಿಲ್ಲೆ ಆಗಿದೆ. ದೇಶವೇ ಭಾರತ ಪಾಕಿಸ್ತಾನ ಎಂದು ವಿಭಜನೆ ಆಗಿದೆ. ಹೀಗಾಗಿ ಹುಣಸೂರು ಜಿಲ್ಲೆ ಮಾಡಬೇಕೆಂಬ ಪ್ರಸ್ತಾಪ ಜನರ ಮುಂದೆ ಇಟ್ಟಿದ್ದೇನೆ. ಚುನಾವಣೆಗಾಗಿಯಂತು ಈ ಕೆಲಸ ಮಾಡುತ್ತಿಲ್ಲ. ಇದು ಭೌಗೋಳಿಕ ವ್ಯಾಪ್ತಿಯಲ್ಲ, ಜನರ ಭಾವನೆ ಮುಖ್ಯ, ಕಿಲೋಮೀಟರ್ ಅಲ್ಲ ಎಂದರು.

30 ಕಿ.ಮೀ ಗೊಂದು ಜಿಲ್ಲೆ ರಚನೆ ಮಾಡಲಾಗುತ್ತಾ ಎಂಬ ಮಾಜಿ ಸಿ.ಎಂ.ಸಿದ್ದರಾಮಯ್ಯ ಹೇಳಿಕೆಗೆ ಎಚ್.ವಿಶ್ವನಾಥ್ ತಿರುಗೇಟು ನೀಡಿದ ಅವರು ಇದು ಕಿ.ಮೀ ಲೆಕ್ಕವಲ್ಲ, ಭೌಗೋಳಿಕ ಅಂಶವೂ ಅಲ್ಲ. ಸಿದ್ದರಾಮಯ್ಯ ಹೊಸ ಜಿಲ್ಲೆ ಬೇಡ ಎಂದು ಕಿ.ಮೀ ಬಗ್ಗೆ ಹೇಳ್ತಾರೆ. ಯಾವುದೇ ಸಮಿತಿ ಅಧ್ಯಯನ ಮಾಡದೇ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರಚನೆಯಾದವು. ಈ ಬಗ್ಗೆಯೂ ನನ್ನ ಸ್ನೇಹಿತರು ಅಧ್ಯಯನ ಮಾಡಬೇಕಿದೆ. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದಾಗಲೇ ಚಾಮರಾಜನಗರ ಜಿಲ್ಲೆಯಾಗಿಲ್ವೇ? ಧಾರವಾಡ ಮೂರು ಜಿಲ್ಲೆ ಆಗಿಲ್ವೇ..? ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಜಿಲ್ಲೆ ಆಗಬೇಕಿದೆ. ನಮ್ಮ ರಾಜ್ಯದಲ್ಲಿ ರಾಜ ಮಹಾರಾಜರ ಹೆಸರಲ್ಲಿ ಯಾವುದೇ ಜಿಲ್ಲೆಯಿಲ್ಲ. ಆದರೆ ತಮಿಳುನಾಡಿನಲ್ಲಿ ಪೆರಿಯಾರ್, ಎಂಜಿಆರ್ ಹೆಸರಲ್ಲಿ ಜಿಲ್ಲೆಯಿವೆ ಎಂದರು.

ನನ್ನದು ಗಿಮಿಕ್ ಅಲ್ಲ, ಸಾ.ರಾ.ಮಹೇಶ್ ಮಾಡುತ್ತಿರುವುದು ಗಿಮಿಕ್. ನೀವೇ ಕೆ.ಆರ್.ನಗರವನ್ನು ಸಾಲಿಗ್ರಾಮ ಅಂತ ಒಡೆದಿದ್ದೀರಿ. ಈ ವಿಚಾರದಲ್ಲಿ ಕುಮಾರಸ್ವಾಮಿ ಅವರದ್ದು ಉತ್ತಮ ಪ್ರತಿಕ್ರಿಯೆ. ನಮಗೆ ಮೈಸೂರು ಎಂದರೆ ಇಷ್ಟ ಎಂಬ ಮಾಜಿ ಶಾಸಕ ಮಂಜುನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಿಮಗೆ ಹುಣಸೂರಿನ‌ ಕಲ್ಲಹಳ್ಳಿಯ ದೇವರಾಜ ಅರಸು ಇಷ್ಟ ಆಗಲಿಲ್ವ? ಕೆಲವರು ವಿಶ್ವನಾಥ್ ಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದಾರೆ. ನಾನು ದೇವರಾಜ ಅರಸು ಸಲುವಾಗಿ ಚಪ್ಪಲಿ ಏಟು ತಿನ್ನಲು ರೆಡಿ. ನನಗೆ ಬುದ್ದಿ ಭ್ರಮಣೆಯಾಗಿಲ್ಲ, ಅಧಿಕಾರ ಹೋಗಿ ನಿಮಗೆ ಬುದ್ದಿ ಭ್ರಮಣೆ ಆಗಿದೆ ಎಂದಿದ್ದ ಹಾಸನ ಜಿಲ್ಲಾ ಜೆಡಿಎಸ್ ಮಾಧ್ಯಮ ವಕ್ತಾರನಿಗೆ ಟಾಂಗ್ ನೀಡಿದರು.

ಕೆಆರ್ ನಗರಕ್ಕೆ ಸಾರಾ ಮಹೇಶ್ ಮಾಲೀಕರಲ್ಲ. ಅದಕ್ಕೆ ಜನರು ಮಾಲೀಕರು. ಅದನ್ನ ನಾವು  ಜನರೊಟ್ಟಿಗೆ ಮಾತ್ನಡುತ್ತೇವೆ. ಕೆ.ಆರ್. ನಗರಕ್ಕೆ ಸಾರಾ ಮಹೇಶ್ ಯಾವುದೇ ಕಾರಣಕ್ಕೂ ಮಾಲೀಕರಲ್ಲ ಸಾರಾ ಮಹೇಶ್ ಗೆ  ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ವಿಶ್ವನಾಥ್ ಬೆಂಬಲಿಗರು ಉಪಸ್ಥಿತರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: