ಪ್ರಮುಖ ಸುದ್ದಿ

ಪತ್ರಿಕಾ ಭವನದ 18ನೇ ವಾರ್ಷಿಕೋತ್ಸವ : ಗಾಂಧಿ ಚಿಂತನೆಗಳು ಎಂದೆಂದಿಗೂ ಪ್ರಸ್ತುತ : ಚಿಂತಕ ಡಾ.ಎಸ್.ಶಿವರಾಜಪ್ಪ ಅಭಿಪ್ರಾಯ

ರಾಜ್ಯ( ಮಡಿಕೇರಿ) ಅ.16 :- ‘ನನ್ನ ಬದುಕೆ ಸಮಾಜಕ್ಕೊಂದು ಸಂದೇಶ’ವೆಂದು ಸಾರಿದ ಮಹಾತ್ಮಾ ಗಾಂಧೀಜಿಯವರ ಬದುಕು ಮತ್ತು ಚಿಂತನೆಗಳು ಆರದ ಜ್ಯೋತಿಯಾಗಿದ್ದು, ಅದು ಎಂದೆಂದಿಗೂ ಪ್ರಸ್ತುತವೇ ಆಗಿರುತ್ತದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರು ಹಾಗೂ ಗಾಂಧೀಪರ ಚಿಂತಕರಾದ ಡಾ. ಎಸ್.ಶಿವರಾಜಪ್ಪ ಅನಿಸಿಕೆ ವ್ಯಕ್ತಪಡಿಸಿದರು.
ಕೊಡಗು ಪತ್ರಿಕಾಭವನ ಟ್ರಸ್ಟ್‍ನ ‘ಪತ್ರಿಕಾ ಭವನದ 18ನೇ ವಾರ್ಷಿಕೋತ್ಸವ’ದಲ್ಲಿ ಮುಖ್ಯ ಭಾಷಣಕಾರರಾಗಿ ಉಪಸ್ಥಿತರಿದ್ದು, ಗಿಡಕ್ಕೆ ನೀರೆರೆಯುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿ ಆಗಿಹೋದ ಬುದ್ಧ, ಬಸವ, ಸ್ವಾಮಿ ವಿವೇಕಾನಂದ, ಕುವೆಂಪು ಸೇರಿದಂತೆ ಹಲ ಮಹಾನುಭಾವರ ಚಿಂತನೆಗಳನ್ನು ನಾವೆಷ್ಟು ಅಳವಡಿಸಿಕೊಂಡಿದ್ದೇವೆ ಎನ್ನುವುದು ಯಕ್ಷಪ್ರಶ್ನೆ. ಹೀಗಿದ್ದೂ, ಈ ಎಲ್ಲಾ ಮಹಾನುಭಾವರ ಚಿಂತನೆಗಳನ್ನು ಅರಿಯಬೇಕಾದಲ್ಲಿ ಮಹಾತ್ಮಾ ಗಾಂಧೀಜಿಯವರ ಸಮಗ್ರ ಬದುಕನ್ನು ಅರ್ಥೈಸಿಕೊಳ್ಳಬೇಕೆಂದು ತಿಳಿಸಿದರು.
ಸತ್ಯ, ಶೀಲ ಮತ್ತು ಕರುಣೆ ಎಂಬುದು ಮಹಾತ್ಮಾ ಗಾಂಧೀಜಿಯವರ ಬದುಕಿನ ಮೌಲ್ಯಗಳಾಗಿದ್ದವಲ್ಲದೆ, ಅವುಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದರಲ್ಲದೆ, ಅವರು ತಮ್ಮ ಬದುಕಿನುದ್ದಕ್ಕೂ ಪಾರದರ್ಶಕತೆಯನ್ನು ಕಾಯ್ದುಕೊಂಡ ಮಹಾನ್ ವ್ಯಕ್ತಿಯಾಗಿದ್ದರು. ಇಂದು ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ನಡೆಯುತ್ತಿರುವ ಬಹುತೇಕ ಕಾರ್ಯಕ್ರಮಗಳು ಕೇವಲ ತೋರಿಕೆಗಷ್ಟೆ ಆಗಿದ್ದು, ರಾಜಕಾರಣಿಗಳಿಗೆ ಗಾಂಧೀಜಿ ಒಂದು ತೋರಿಕೆಯ ಅಸ್ತ್ರವಷ್ಟೆ ಎಂದು ತೀಕ್ಷ್ಣವಾಗಿ ನುಡಿದು, ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳಾದ ಸರ್ವೋದಯ, ಗುಡಿ ಕೈಗಾರಿಕೆ, ಗ್ರಾಮ ಸ್ವರಾಜ್ಯ, ಸ್ತ್ರೀ ಸಬಲೀಕರಣ , ಅಹಿಂಸೆ ಈ ಎಲ್ಲಾ ವಿಚಾರಗಳು ಆರದ ಮೌಲ್ಯಗಳೇ ಆಗಿದೆಯೆಂದು ತಿಳಿಸಿದರು.
ಮಹಾತ್ಮಾ ಗಾಂಧೀಜಿಯವರು ಸರಳತೆಯ ಬದುಕಿನೊಂದಿಗೆ ಉನ್ನತ ಚಿಂತನೆಗಳನ್ನು ಹೊಂದಿದ್ದರಾದರೆ, ಪ್ರಸ್ತುತ ವ್ಯವಸ್ಥೆಯಲ್ಲಿನ ವೈಭವದ ಬದುಕು ಸಣ್ಣ ಆಲೋಚನೆಗಳನ್ನಷ್ಟೆ ಕಾಣುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿ, ಗಾಂಧೀಜಿಯವರ ಚಿಂತನೆಗಳಂತೆಯೇ ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್ ಉನ್ನತ ಚಿಂತನೆಗಳನ್ನು ಹೊಂದಿದ್ದ ಮಹಾನ್ ವ್ಯಕ್ತಿಯಾಗಿದ್ದು, ಅವರನ್ನು ಮಹಾತ್ಮಾಗಾಂಧೀಜಿಯವರು ‘ರಾಜರ್ಷಿ’ ಎಂದು ಕರೆದಿದ್ದುದನ್ನು ಸ್ಮರಿಸಿಕೊಂಡು ಇಂತಹ ಮಹಾನ್ ವ್ಯಕ್ತಿಗಳ ಚಿಂತನೆ ಪ್ರಸ್ತುತವೆಂದು ತಿಳಿಸಿದರು.
‘ಶಕ್ತಿ’ ಸಂಪಾದಕ ಚಿದ್ವಿಲಾಸ್‍ರಿಗೆ ಅಭಿನಂದನೆ- ಜೀವಮಾನದ ಸಾಧನೆಯ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಸನ್ಮಾನಿಸಲ್ಪಟ್ಟ ‘ಶಕ್ತಿ’ ಪತ್ರಿಕೆ ಸಂಪಾದಕ ಜಿ. ಚಿದ್ವಿಲಾಸ್ ಅವರನ್ನು ಟ್ರಸ್ಟ್ ವತಿಯಿಂದ ಶಾಲು ಹೊದೆಸಿ, ಪೇಟ ತೊಡಿಸಿ, ಫಲತಾಂಬೂಲದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಚಿದ್ವಿಲಾಸ್ ಅವರು, ತಮ್ಮ ತಂದೆ ದಿ. ಗೋಪಾಲಕೃಷ್ಣ ಅವರು ತಮಗೆ, ಬದುಕಿನುದ್ದಕ್ಕೂ ಸ್ವಾಭಿಮಾನದ ಬದುಕಿನ ಪಾಠವನ್ನು ಕಲಿಸಿದ್ದಾರೆಂದು ಮನದುಂಬಿ ನುಡಿದು, ಕೌಟುಂಬಿಕ ವ್ಯವಸ್ಥೆಗಳು ಜಾಳು ಜಾಳಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲು ತಂದೆ ನೀಡಿದ ಮಾರ್ಗದರ್ಶನ ಹಾಗೂ ತನ್ನ ಸಹೋದರರು ಮತ್ತು ಒಟ್ಟು ಕುಟುಂಬ ತನ್ನ ಮೇಲೆ ಇಟ್ಟ ಅಭಿಮಾನ, ವಿಶ್ವಾಸ ಮತ್ತು ಜವಾಬ್ದಾರಿಗಳಿಗೆ ಕೃತಜ್ಞತೆ ಸಲ್ಲಿಸಿ, ಅವರೆಲ್ಲರ ಹಾರೈಕೆಯಿಂದ ಈ ಹಂತಕ್ಕೆ ಬಂದು ನಿಂತಿದ್ದೇನೆ. ಜಾತಿ ಮತ ಧರ್ಮಗಳ ಚೌಕಟ್ಟಿಗೆ ಸೀಮಿತವಾಗದೆ ಬೆಳೆದು ನಿಂತಿರುವ ಶಕ್ತಿ ಪತ್ರಿಕೆಯನ್ನು ಯಾವುದೇ ಕಾರಣಕ್ಕು ವೈಯಕ್ತಿಕ ವಿಚಾರಗಳಿಗೆ ಬಳಕೆಯಾಗದಂತೆ ನೋಡಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪತ್ರಕರ್ತರಿಗೆ ಸಂಬಂಧಿಸಿದ ಟ್ರಸ್ಟ್, ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್‍ಗಳು ಒಂದಾಗಿ ಬೆರೆತು ಮುನ್ನಡೆಯುವ ದಿನಗಳು ಒದಗಿ ಬರಲೆನ್ನುವ ಆಶಯವನ್ನು ಇದೇ ಸಂದರ್ಭ ವ್ಯಕ್ತಪಡಿಸಿದರು.
‘ ಹೆಜ್ಜೆಗೊಂದು ಹೊಸ ಯುಗಾದಿ’ ಪುಸ್ತಕ ಅನಾವರಣ- ಕನ್ನಡ ಸಾಹಿತ್ಯ ಲೋಕಕ್ಕೆ ಹತ್ತು ಹಲ ಸಾಹಿತ್ಯ ಕೃತಿಗಳನ್ನು ನೀಡಿರುವ ಜಿಲ್ಲೆಯವರೇ ಆದ ಡಾ. ಬೆಸೂರು ಮೋಹನ್ ಪಾಳೇಗಾರ್ ಅವರು ರಚಿಸಿದ ‘ ಹೆಜ್ಜೆಗೊಂದು ಹೊಸ ಯುಗಾದಿ’ ಪುಸ್ತಕವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಹಾಲಿ ಟ್ರಸ್ಟಿಗಳು ಹಾಗೂ ಮಾಜಿ ಮ್ಯಾನೇಜಿಂಗ್ ಟ್ರಸ್ಟ್‍ಗಳಾದ ಟಿ.ಪಿ. ರಮೇಶ್ ಮತ್ತು ಅತಿಥಿಗಣ್ಯರು ಅನಾವರಣಗೊಳಿಸಿದರು.
ಈ ಸಂದರ್ಭ ಟಿ.ಪಿ. ರಮೇಶ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಮೋಹನ್ ಪಾಳೇಗಾರ್ ಅವರು ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಇವರು ವೈಜ್ಞಾನಿಕ ಚಿಂತನೆಯನ್ನು ಒಳಗೊಂಡ ಪುಸ್ತಕಗಳು ಸೇರಿದಂತೆ 300 ಕ್ಕೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆಂದು ತಿಳಿಸಿದರು.
ಕೃತಿ ಕರ್ತೃ ಮೋಹನ್ ಪಾಳೇಗಾರ್ ಮಾತನಾಡಿ, ಪತ್ರಿಕಾ ಕ್ಷೇತ್ರ ಅತ್ಯಂತ ಶ್ರೇಷ್ಟ ಮಾಧ್ಯಮವಾಗಿದೆ. ಹೀಗಿದ್ದೂ ಇಂದು ಸಾಕಷ್ಟು ಪತ್ರಿಕೆಗಳು ಸೋಲುತ್ತಿವೆ. ಇದಕ್ಕೆ ಪ್ರಮುಖ ಕಾರಣ ಜನಸಾಮಾನ್ಯರಲ್ಲಿ ಪತ್ರಿಕೆಗಳನ್ನು ಕೊಂಡುಕೊಂಡು ಓದುವ ಚಿಂತನೆ ಮೂಡದಿರುವುದು ಎಂದು ಅನಿಸಿಕೆ ವ್ಯಕ್ತಪಡಿಸಿ, ಇನ್ನಾದರು ಮಕ್ಕಳಿಗೆ ಕನ್ನಡ ಪತ್ರಿಕೆಗಳನ್ನು ಓದಲು ನೀಡುವ ಮೂಲಕ ಅವರಲ್ಲಿ ಕನ್ನಡ ಪ್ರಜ್ಞೆ ಭಾಷಾ ಪ್ರಜ್ಞೆಯನ್ನು ಮೂಡಿಸುವಂತಾಗಬೇಕು. ನಮ್ಮ ಸಂಸ್ಕೃತಿಯ ಉಳಿವಿಗೆ ಪತ್ರಿಕೆಗಳು ಉಳಿಯುವುದು ಅತ್ಯವಶ್ಯವೆಂದು ನುಡಿದರು.
ಗೌರವಾರ್ಪಣೆ- ಇದೇ ಸಂದರ್ಭ ಟ್ರಸ್ಟ್ ವತಿಯಿಂದ ಮುಖ್ಯ ಅತಿಥಿ ಡಾ. ಎಸ್. ಶಿವರಾಜಪ್ಪ ಅವರಿಗೆ ವಡಿಕತ್ತಿಯನ್ನು ನೀಡಿ ಗೌರವಿಸಲಾಯಿತು.
ಸಂತಾಪ- ಸಮಾರಂಭದ ಆರಂಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿರುವ ಹಿರಿಯ ರಾಜಕಾರಣಿಗಳಾದ ಎ.ಕೆ. ಸುಬ್ಬಯ್ಯ, ಜೆ. ಎ. ಕರುಂಬಯ್ಯ ಮತ್ತು ಶಾಂತು ಅಪ್ಪಯ್ಯ, ಕೊಡಗು ಜಿಲ್ಲಾ ಆಕಾಶವಾಣಿಯಲ್ಲಿ ಹಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರವೀಂದ್ರ ಕುಮಾರ್, ಅಂತರಾಷ್ಟ್ರೀಯ ಮಟ್ಟದ ಕಲಾವಿದ ಕದ್ರಿ ಗೋಪಾಲಕೃಷ್ಣ ಅವರಿಗೆ ಮೌನಾಚರಣೆಯ ಮೂಲಕ ಸಂತಾಪ ಸೂಚಿಸಲಾಯಿತು.
ಲಿಯಾಕತ್ ಆಲಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭದಲ್ಲಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನುಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರು. ಟ್ರಸ್ಟಿ ಶ್ರೀಧರ ಹೂವಲ್ಲಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರೆ, ಖಜಾಂಚಿ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ವಿ.ಪಿ. ಸುರೇಶ್ ಸರ್ವರನ್ನು ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: