ದೇಶಪ್ರಮುಖ ಸುದ್ದಿ

ರೋಗಿಗೆ ನೆಲದ ಮೇಲೆ ಊಟ ಬಡಿಸಿದ ಆಸ್ಪತ್ರೆ ಸಿಬ್ಬಂದಿ

ಸಾಕುಪ್ರಾಣಿಗಳಿಗೂ ತಟ್ಟೆಯಲ್ಲಿ ಊಟ ಬಡಿಸುವ ಈ ಕಾಲದಲ್ಲಿ ರಾಂಚಿಯ ಸರಕಾರಿ ಆಸ್ಪತ್ರೆಯೊಂದು ರೋಗಿಯೊಬ್ಬರಿಗೆ ನೆಲದ ಮೇಲೆ ಊಟ ಬಡಿಸಿದೆ. ಇದು ಕಟ್ಟುಕಥೆಯಲ್ಲ ಸ್ವಾಮಿ, ನಮ್ಮ ಸರಕಾರಿ ಆಸ್ಪತ್ರೆಗಳ ಕರ್ಮಕಾಂಡದ ಒಂದು ಚಿತ್ರಣ.

ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್)ನಲ್ಲಿ ಮುನ್ನಿ ದೇವಿ ಎಂಬ ರೋಗಿ ಹಳೇ ಮಿನರಲ್ ನೀರಿನಿಂದ ನೆಲವನ್ನು ಸ್ವಚ್ಛಗೊಳಿಸಿ ರೆಡಿಯಾಗಿ ಕೂರುತ್ತಾರೆ. ಆಸ್ಪತ್ರೆ ಸಿಬ್ಬಂದಿ ನೆಲದ ಮೇಲೆ ಊಟ ಬಡಿಸಿ ಹೋಗುತ್ತಾರೆ. ಈ ಪ್ರಕ್ರಿಯೆ ಕಳೆದೊಂದು ತಿಂಗಳಿನಿಂದ ನಡೆದುಕೊಂಡು ಬಂದಿದೆಯಂತೆ. ಬಿಜೆಪಿ ನಗರ ಘಟಕ ಅಧ್ಯಕ್ಷ ಮನೋಜ್ ಮಿಶ್ರಾ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.  

ಅಪಘಾತವೊಂದರಲ್ಲಿ ಬಲಗೈ ಮತ್ತು ತಲೆ ಭಾಗದಲ್ಲಿ ಗಾಯಗಳಾಗಿದ್ದರಿಂದ 60 ವರ್ಷದ ಮುನ್ನಿದೇವಿಯನ್ನು ಪೊಲೀಸರು ಜಾರ್ಖಂಡ್ ನ ಪ್ರಸಿದ್ಧ ಸರಕಾರಿ ಆಸ್ಪತ್ರೆಯಾದ ರಿಮ್ಸ್ ಗೆ ದಾಖಲಿಸಿದ್ದರು. ರೋಗಿಗಳ ಹೆಸರಿನಲ್ಲಿ ಮುನ್ನಿದೇವಿಯ ಹೆಸರು ದಾಖಲಾಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.

ಆಕೆ ರೋಗಿಯಾಗಿ ದಾಖಲಾಗಿದ್ದಳೋ ಅಥವಾ ಇಲ್ಲವೋ ಅನ್ನೋದು ಮುಖ್ಯವಲ್ಲ. ಆಕೆ ಒಬ್ಬಳು ಮನುಷ್ಯಳಾಗಿದ್ದು, ಆಕೆಗೆ ಅಮಾನವೀಯವಾಗಿ ನೆಲದ ಮೇಲೆ ಆಹಾರ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಜಾರ್ಖಂಡ್ ವಿಶೇಷ ಕಾರ್ಯದರ್ಶಿ(ಆರೋಗ್ಯ) ಮನೋಜ್ ಕುಮಾರ್ ಆಸ್ಪತ್ರೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿ ಅಮಾನವೀಯ ಕೃತ್ಯ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ರಘುಬರ್ ದಾಸ್ ಆದೇಶಿಸಿದ್ದಾರೆ. ರಿಮ್ಸ್ ನ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ನಿರ್ದೇಶಕರಿಗೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 28ರಂದು ಕೋರ್ಟ್ ವಿಚಾರಣೆ ನಿಗದಿ ಮಾಡಿದೆ.

Leave a Reply

comments

Tags

Related Articles

error: