ಪ್ರಮುಖ ಸುದ್ದಿ

ಗ್ರಾ.ಪಂ ಕೆಡಿಪಿ ಸಭೆಗೆ ಅಧಿಕಾರಿಗಳು ಗೈರು : ಕಡಗದಾಳು ಗ್ರಾ.ಪಂ ಅಸಮಾಧಾನ

ರಾಜ್ಯ( ಮಡಿಕೇರಿ) ಅ.17 :- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಪೂರಕವಾಗಿ ನಡೆಯಬೇಕಾಗಿರುವ ಗ್ರಾಮ ಪಂಚಾಯ್ತಿ ಮಟ್ಟದ ಕೆಡಿಪಿ ಸಭೆಗಳಿಗೆ ಅಧಿಕಾರಿಗಳು ಹಾಜರಾಗದೇ ಇರುವುದರಿಂದ ಸಭೆಯ ಉದ್ದೇಶ ವಿಫಲವಾಗುತ್ತಿದೆ ಎಂದು ಆರೋಪಿಸಿರುವ ಕಡಗದಾಳು ಗ್ರಾ.ಪಂ ಅಧ್ಯಕ್ಷ ಮಾದೇಟಿರ ತಿಮ್ಮಯ್ಯ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ರಾ.ಪಂ ಜನಪ್ರತಿನಿಧಿಗಳ ಒಕ್ಕೂಟ’ವನ್ನು ಅಸ್ತಿತ್ವಕ್ಕೆ ತಂದು ವಿವಿಧ ಹಂತಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಕಡಗದಾಳು ಗ್ರಾ.ಪಂ ಕೆಡಿಪಿ ಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಮೂರು ತಿಂಗಳಿಗೊಮ್ಮೆ ನಡೆಯುವ ಕೆಡಿಪಿ ಸಭೆಯಲ್ಲಿ 30 ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಆದರೆ, ಕಡಗದಾಳು ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ವಿದ್ಯುತ್ ಇಲಾಖೆ ಹೊರತು ಪಡಿಸಿ ಇನ್ನುಳಿದ ಯಾವುದೇ ಅಧಿಕಾರಿಗಳು ಪಾಲ್ಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿರುವುದಾಗಿ ಬೇಸರ ವ್ಯಕ್ತಪಡಿಸಿದರು.
ಕಡಗದಾಳು ಕೆಡಿಪಿ ಸಭೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ 15 ದಿನ ಮುಂಚಿತವಾಗಿಯೇ ಜ್ಞಾಪನಾ ಪತ್ರ ನೀಡಲಾಗಿತ್ತು. ಹೀಗಿದ್ದೂ ಬಹುತೇಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳದೆ, ಗ್ರಾಮದ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿರುವುದರ ವಿರುದ್ಧ ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯಾ ಸೇರಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಇನ್ನು ಮುಂದೆ ಈ ರೀತಿಯ ಧೋರಣೆಯನ್ನು ಅಧಿಕಾರಿಗಳು ಮುಂದುವರಿಸಿದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸೇರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಾವುದೇ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಕೆಡಿಪಿ ಸಭೆಯನ್ನು ಇಲಾಖಾ ಅಧಿಕಾರಿಗಳು ಪಾಲ್ಗೊಳ್ಳದಿದ್ದರೆ ಮುಂದೂಡುವಂತೆಯೂ ಮಾದೇಟಿರ ತಿಮ್ಮಯ್ಯ ಮನವಿ ಮಾಡಿದರು.
ಸರ್ಕಾರದ ಆದೇಶ ಪಾಲನೆಯ ನಿಟ್ಟಿನಲ್ಲಿ ಅಧಿಕಾರಿಗಳು ಆಯಾ ಗ್ರಾಮ ಪಂಚಾಯ್ತಿಗಳಿಗೆ ನಿಗದಿತ ದಿನಾಂಕದ ಒಳಗೆ ಕೆಡಿಪಿ ಸಭೆ ನಡೆಸುವಂತೆ ಸೂಚಿಸುತ್ತಾರೆ. ಅದೇ ರೀತಿ ಪ್ರತಿ ಕೆಡಿಪಿ ಸಭೆಗಳಿಗೆ ಪಾಲ್ಗೊಳ್ಳುವಂತೆ ವಿವಿಧ ಇಲಾಖಾ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆ, ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಡಗದಾಳು ಗ್ರಾ.ಪಂ. ಸದಸ್ಯರಾದ ರಮೇಶ್ ಆಚಾರ್ಯ, ಪುಷ್ಪಾವತಿ ರೈ, ರಮೇಶ್ ರೈ ಹಾಗೂ ಪೊನ್ನಚಂಡ ರಮೇಶ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: