ಮೈಸೂರು

‘ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಬದ್ಧತೆ ಇರಬೇಕು : ಯೋಗಶ್ರೀ ಡಾ.ಎ.ಆರ್.ಸೀತಾರಾಂ

ಮೈಸೂರು, ಅ.17- ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ, ಬದ್ಧತೆ ಹಾಗೂ ಕಲಿಕಾ ಶಕ್ತಿ ಇರಬೇಕೆಂದು ನಗರದ ಪರಮಹಂಸ ಯೋಗ ಚಿಕಿತ್ಸೆ ಮತ್ತು ಆಪ್ತ ಸಮಾಲೋಚನಾ ಕೇಂದ್ರದ ಸ್ಥಾಪಕ ಯೋಗಶ್ರೀ ಡಾ.ಎ.ಆರ್.ಸೀತಾರಾಂ ಅಭಿಪ್ರಾಯಪಟ್ಟರು.

ಒತ್ತಡ ನಿರ್ವಹಣೆ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ್ಯ ಮತ್ತು ಮೌಲ್ಯಗಳ ಬಗ್ಗೆ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‍ರವರು ಎಲ್ಲರಿಗೂ ಆರೋಗ್ಯ ಕಲ್ಪಿಸುವತ್ತ ಹೆಚ್ಚಿನ ಒತ್ತನ್ನು ನೀಡುತ್ತಿದ್ದರೆಂದು ಹೇಳಿದ ಅವರು, ಅವರ ಆಡಳಿತ ಕಾಲದಲ್ಲಿ ಸಾಕಷ್ಟು ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದರೆಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಯೋಗ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆಯೆಂದು ನುಡಿದರು. ತಾವು ಇಷ್ಟೊಂದು ಆರೋಗ್ಯವಂತರಾಗಿ ಹಾಗೂ ಚೈತನ್ಯಶಾಲಿಯಾಗಿರಲು, ತಾವು ಪ್ರತಿನಿತ್ಯ ತಪ್ಪದೇ ಮಾಡುವ ಯೋಗಾಭ್ಯಾಸವೇ ಕಾರಣವೆಂದು ತಿಳಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಯೋಗಾಭ್ಯಾಸವನ್ನು ತನ್ನ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ‘ಫಿಟ್ ಇಂಡಿಯಾ’ ಪ್ರಚಾರ ಆರಂಭಿಸಿದ್ದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಬದುಕಿನಲ್ಲಿ ಯಾವುದೇ ರೀತಿಯ ಸಾಧನೆ ಮಾಡಲು ಸದೃಢ ಶರೀರ ಬೇಕು. ಸಮಾಜದ ಅಭಿವೃದ್ಧಿಗಾಗಿ ತಾವು 120 ವರ್ಷಗಳ ಕಾಲ ಜೀವಿಸಿರಬೇಕೆಂದು ಒಮ್ಮೆ ಗಾಂಧೀಜಿ ಹೇಳಿದ್ದನ್ನು ಅವರು ಸ್ಮರಿಸಿದರು.

ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಕುಮಾರ್ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: