ಕ್ರೀಡೆದೇಶ

ಅನಿಲ್ ಕುಂಬ್ಳೆಗೆ 49ನೇ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ

ನವದೆಹಲಿ,ಅ.17- ಜಂಬೋ ಖ್ಯಾತಿಯ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ 49ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅನಿಲ್ ಕುಂಬ್ಳೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮಾಜಿ ಕ್ರಿಕೆಟಿಗರಾದ ಸಚಿನ್ ತಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್,  ಮೊಹಮ್ಮದ್ ಕೈಫ್, ಗೌತಮ್ ಗಂಭೀರ್ ಹರ್ಭಜನ್ ಸಿಂಗ್ ಸೇರಿದಂತೆ ನೂರಾರು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಅನಿಲ್ ಕುಂಬ್ಳೆ ಇನ್ನಿಂಗ್ಸ್‌ವೊಂದರಲ್ಲೇ ಪಾಕಿಸ್ತಾನದ ವಿರುದ್ಧ ತಂಡದ ಎಲ್ಲ 10 ವಿಕೆಟ್ ಪಡೆದು ವಿಶ್ವದ ಎರಡನೇ ಬೌಲರ್ ಎಂದೆನಿಸಿಕೊಂಡಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಜಿಮ್ ಲೇಕರ್ ದಾಖಲೆಯನ್ನು ಸರಿಗಟ್ಟಿದರು.

ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹಾಗೂ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಮೂರನೇ ಶ್ರೇಷ್ಠ ಸ್ಪಿನ್ನರ್ ಎಂಬ ದಾಖಲೆಗೆ ಅನಿಲ್ ಕುಂಬ್ಳೆ ಭಾಜನವಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 619 ಹಾಗೂ ಏಕದಿನದಲ್ಲಿ 337 ವಿಕೆಟುಗಳನ್ನು ಅನಿಲ್ ಕುಂಬ್ಳೆ ಪಡೆದಿದ್ದಾರೆ. ಅಲ್ಲದೆ ಭಾರತದ ಅತಿ ದೊಡ್ಡ ಮ್ಯಾಚ್ ವಿನ್ನರ್ ಎಂದೇ ಖ್ಯಾತಿಗೆ ಪಾತ್ರವಾಗಿದ್ದಾರೆ.

ಕ್ರಿಕೆಟ್ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ಕೋಚ್ ಹುದ್ದೆಯನ್ನು ವಹಿಸಿದ್ದರೂ ನಾಯಕ ವಿರಾಟ್ ಕೊಹ್ಲಿ ಜತೆಗಿನ ಭಿನ್ನಭಿಪ್ರಾಯದ ಹಿನ್ನಲೆಯಲ್ಲಿ ಕೋಚ್ ಸ್ಥಾನವನ್ನು ತೊರೆದಿದ್ದರು. ಪ್ರಸ್ತುತ ಮುಂದಿನ ಮೂರು ವರ್ಷಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪ್ರಮುಖ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿಯೂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿಯೂ ಅನಿಲ್ ಕುಂಬ್ಳೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಐಸಿಸಿ ತಾಂತ್ರಿಕ ಸಮಿತಿಯ ನಿರ್ದೇಶಕರಾಗಿ ಕ್ರಿಕೆಟ್ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. (ಎಂ.ಎನ್)

Leave a Reply

comments

Related Articles

error: