ಮೈಸೂರು

ಐದು ವರ್ಷಗಳ ಕಾಲ ಸ್ಥಿರ ಆಡಳಿತ ನೀಡಿದ ಕಾಂಗ್ರೆಸ್‌ ಸರಕಾರವನ್ನು ಕಳೆದುಕೊಂಡಿದ್ದಕ್ಕೆ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ : ಡಾ.ಎಚ್‌.ಸಿ.ಮಹದೇವಪ್ಪ

ಮೈಸೂರು,ಅ.18:- ರಾಜ್ಯದಲ್ಲೀಗ ಆಡಳಿತದಲ್ಲಿರುವ ಮೂರು ತಿಂಗಳ ಬಿಜೆಪಿ ಸರಕಾರ ಹಾಗೂ ಹಿಂದಿನ ಹದಿನಾಲ್ಕು ತಿಂಗಳಿನ ಸಮ್ಮಿಶ್ರ ಸರಕಾರದ ಆಡಳಿತವನ್ನು ನೋಡಿರುವ ಜನರು, ಐದು ವರ್ಷಗಳ ಕಾಲ ಸ್ಥಿರ ಆಡಳಿತ ನೀಡಿದ ಕಾಂಗ್ರೆಸ್‌ ಸರಕಾರವನ್ನು ಕಳೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಅವರು   ಟಿ.ನರಸೀಪುರ ತಾಲೂಕಿನ ಕನ್ನಹಳ್ಳಿ ಗ್ರಾಮಕ್ಕೆ ಇತ್ತೀಚೆಗೆ  ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ, ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿ ಸಮಸ್ಯೆಗಳನ್ನು ಆಲಿಸಿ  ಮಾತನಾಡಿ, ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ತಿ.ನರಸೀಪುರ, ಹುಣಸೂರು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಭೂತಪೂರ್ವ ಅಭಿವೃದ್ಧಿಯಾಗಿದ್ದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರಬೇಕಿತ್ತು. ಚುನಾವಣೆಯಲ್ಲಿ ಜಾತಿ ರಾಜಕಾರಣ ನುಸುಳಿದ್ದರಿಂದ ನಮ್ಮ ನಿರೀಕ್ಷೆ ಹುಸಿಯಾಯಿತು ಎಂದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲೂ ಬಹುದು, ಬರದೇ ಇರಬಹುದು. ಈ ಕುರಿತು ಸ್ಪಷ್ಟತೆಯಿಲ್ಲ ಎಂದ ಅವರು ಹುಣಸೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಪಕ್ಷದಲ್ಲಿ ಸಮರ್ಥವಾದ ಅಭ್ಯರ್ಥಿ ಇಲ್ಲದ್ದರಿಂದ ಕಾಂಗ್ರೆಸ್‌ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂದಿನ ಮಧ್ಯಂತರ ಚುನಾವಣೆ ಹಾಗೂ ಸಾರ್ವತ್ರಿಕ ಚುನಾವಣೆ ಬಂದರೂ ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: