ದೇಶಪ್ರಮುಖ ಸುದ್ದಿ

ಜಸ್ಟಿಸ್ ಬೋಬ್ಡೆ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಂತೆ ಸಿಜೆಐ ರಂಜನ್ ಗೊಗೊಯ್ ಶಿಫಾರಸು

ನವದೆಹಲಿ,ಅ.18- ಜಸ್ಟಿಸ್ ಶರದ್ ಅರವಿಂದ್ ಬೋಬ್ಡೆ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ರಂಜನ್ ಗೊಗೊಯ್ ಅವರು ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಜಸ್ಟಿಸ್ ಎಸ್ ಬೋಬ್ಡೆ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸುವ ಪ್ರಕ್ರಿಯೆಯನ್ನು ಆರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಜಸ್ಟಿಸ್ ಗೊಗೊಯ್ ಬಳಿಕ ಹಿರಿತನದ ಆಧಾರದಲ್ಲಿ ಜಸ್ಟಿಸ್ ಬೋಬ್ಡೆ ಎರಡನೇ ಸ್ಥಾನದಲ್ಲಿದ್ದಾರೆ. ಜಸ್ಟಿಸ್ ಬೋಬ್ಡೆ ಮಧ್ಯಪ್ರದೇಶ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದು, 2021 ಎಪ್ರಿಲ್ 23ರಂದು ನಿವೃತ್ತಿಯಾಗಲಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ .24ರಂದು ಜನಿಸಿರುವ ಜಸ್ಟಿಸ್ ಬೋಬ್ಡೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು. 2000ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬಾಂಬೆ ಹೈಕೋರ್ಟ್ಗೆ ಸೇರ್ಪಡೆಯಾಗಿದ್ದರು. 2012ರಲ್ಲಿ ಮಧ್ಯಪ್ರದೇಶದ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 2013 ಎಪ್ರಿಲ್ನಲ್ಲಿ ಸುಪ್ರೀಂಕೋರ್ಟ್ಗೆ ಪದೋನ್ನತಿ ಪಡೆದಿದ್ದರು.

ಸುಪ್ರೀಂ ಕೋರ್ಟ್ 46ನೇ ಮುಖ್ಯ ನ್ಯಾಯಾಧೀಶರಾಗಿ ಕಳೆದ ವರ್ಷ ಅಕ್ಟೋಬರ್ 3ರಂದು ಅಧಿಕಾರ ಸ್ವೀಕರಿಸಿದ್ದ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಮುಂದಿನ ತಿಂಗಳು ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ.

ನಿವೃತ್ತಿಯಾಗುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಮುಂದಿನ ಉತ್ತರಾಧಿಕಾರಿಯಾಗಬೇಕೆಂದು ಸೂಚಿಸುವ ಸಂಪ್ರದಾಯವಿದೆ. ಅದರಂತೆ ರಂಜನ್ ಗೊಗೊಯ್ ಅವರು ಬೊಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: