ದೇಶಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ಬಿಗಿ ಭದ್ರತೆ: 18,360 ಭದ್ರತಾ ಸಿಬ್ಬಂದಿ ನಿಯೋಜನೆ; ಯಾವುದೇ ದಿನ ತೀರ್ಪು ಬರುವ ನಿರೀಕ್ಷೆ

ನವದೆಹಲಿ,ಅ.18- ಅಯೋಧ್ಯೆ ಭೂ ವಿವಾದದ ಅಂತಿಮ ತೀರ್ಪನ್ನು ಸುಪ್ರೀಂ ಕೋರ್ಟ್‌ ನವೆಂಬರ್‌ 17ರೊಳಗೆ ಯಾವುದೇ ದಿನ ಪ್ರಕಟಿಸುವ ಸಾಧ್ಯತೆ ಇರುವುರಿಂದ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಈಗಾಗಲೇ ಅಯೋಧ್ಯೆಯಲ್ಲಿ ಡಿಸೆಂಬರ್‌ 10ರವರೆಗೂ ಸೆಕ್ಷನ್‌ 144 ಜಾರಿ­ಗೊಳಿಸಲಾಗಿದೆ. ಅ.15ರಿಂದಲೇ ಕಠಿಣ ಭದ್ರತಾ ನಿಯಮ­ಗಳನ್ನು ಜಾರಿಗೆ ತರಲಾಗಿದ್ದು, ನವೆಂಬರ್‌ 1 ಹಾಗೂ ತೀರ್ಪು ಹೊರಬರುವ ಕೆಲವು ದಿನ­ಗಳ ಮುನ್ನ ಇದನ್ನು ಇನ್ನಷ್ಟು ಬಿಗಿಗೊಳಿ­ಸಲಾ­ಗುವುದು ಎಂದು ಅಯೋಧ್ಯೆ ಎಸ್ಪಿ ಶೈಲೇಂದ್ರ ಸಿಂಗ್‌ ಹೇಳಿದ್ದಾರೆ.

ಕೇಂದ್ರ ಸಶಸ್ತ್ರ ಪಡೆಗಳ 153 ತುಕಡಿಗಳನ್ನು ಅಯೋಧ್ಯೆಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. ಒಂದು ತುಕಡಿ ಎಂದರೆ ಅದರಲ್ಲಿ120 ಸಿಬ್ಬಂದಿ ಇರುತ್ತಾರೆ. ಅಂದರೆ 18,360 ಭದ್ರತಾ ಸಿಬ್ಬಂದಿಯನ್ನು ನಿಯೋ­ಜಿಸಲಾಗುತ್ತಿದೆ. ಯೋಧರು ಹಂತಹಂತವಾಗಿ ಅಯೋಧ್ಯೆಗೆ ಬಂದಿಳಿಯುತ್ತಿದ್ದಾರೆ. ಇಡೀ ನಗರ ಕಠಿಣ ತಪಾಸಣೆ ಹಾಗೂ ಕಣ್ಗಾವಲಿಗೆ ಒಳಪಟ್ಟಿದೆ. ಉಗ್ರ ನಿಗ್ರಹ ದಳದ ಕಮಾಂಡೊ­ಗಳು, ಗುಪ್ತಚರ ಇಲಾಖೆಯ ಅಧಿಕಾರಿಗಳು ಬೀಡುಬಿಟ್ಟು ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ.

ಕೇಂದ್ರ ಪೊಲೀಸ್‌ ಪಡೆ, ಸಿಆರ್‌ಪಿಎಫ್‌ನ ಕ್ಷಿಪ್ರ ಕ್ರಿಯಾ ಪಡೆಗಳ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸಶಸ್ತ್ರ ಪೊಲೀಸ್‌ ಪಡೆ, ಉತ್ತರ ಪ್ರದೇಶ ಪೊಲೀಸರನ್ನು ನಿಯೋ­ಜಿಸಲಾಗಿದೆ. ಒಂದೊಮ್ಮೆ ತೀರ್ಪಿನ ಬಳಿಕ ವಿವಾದಿತ ಸ್ಥಳದತ್ತ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸುವ ಪ್ರಯತ್ನ ಮಾಡಿದಲ್ಲಿ ಅಂತವರನ್ನು ಬಂಧಿಸಿಡಲು ತಾತ್ಕಾಲಿಕ ಜೈಲು ವ್ಯವಸ್ಥೆ ಕೈಗೊಳ್ಳ­ಲಾಗುತ್ತಿದೆ.

ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅತಿಥಿ ಗೃಹ/ಹೋಟೆಲ್‌ಗಳಲ್ಲಿ ತಂಗಿರುವವ­ರನ್ನು ತಪಾಸಣೆಗೆ ಒಳಪಡಿಸಲಾ­ಗುತ್ತಿದೆ. ಅಯೋಧ್ಯೆಗೆ ಬರುವ ಜನರಿಗೆ ಐಡಿ ಕಾರ್ಡ್‌ ತರಲು ಸೂಚಿಸಲಾಗಿದೆ. ಸಂಚಾರ ವ್ಯವಸ್ಥೆಯಲ್ಲೂ ಮುನ್ನೆಚ್ಚರಿಕೆ ವಹಿಸಲಾಗು­ತ್ತಿದೆ. ವಾಹನಗಳು ಅಕ್ಕಪಕ್ಕದ ಜಿಲ್ಲೆಗಳ ಮೂಲಕ ಸಂಚರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವ ಭಾರಿ ವಾಹನಗಳು ಅಯೋಧ್ಯೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. (ಎಂ.ಎನ್)

 

Leave a Reply

comments

Related Articles

error: