ಕರ್ನಾಟಕ

ಯುವಕರಲ್ಲಿ ಆತ್ಮಹತ್ಯಾ ಮನೋಭಾವ ಹೆಚ್ಚಾಗುತ್ತಿದೆ: ಮನೋವೈದ್ಯರ ಕಳವಳ

ವಿವಾಹದಿಂದ ವಿಮುಖರಾಗುತ್ತಿದ್ದಾರೆ ತರುಣಿಯರು;  ಮನೋವೈದ್ಯರಿಂದ ಕುತೂಹಲಕಾರಿ  ಮಾಹಿತಿ

ಮಡಿಕೇರಿ,ಅ.21-ಭಾರತದಲ್ಲಿ ಯುವಜನಾಂಗ ಮತ್ತು ಮಹಿಳೆಯರ ಆತ್ಮಹತ್ಯಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ. ಈ ಸಂಖ್ಯೆ ಮತ್ತಷ್ಟು ಏರಿಕೆಯಾದಲ್ಲಿ ಜಗತ್ತಿನಲ್ಲಿ ಭಾರತ ಆತ್ಮಹತ್ಯೆ ಪ್ರಕರಣಗಳಲ್ಲಿ ಮೊದಲ ಸಾಲಿಗೆ ನಿಲ್ಲುವ ಅಪಾಯವಿದೆ ಎಂದು ಮುಂಬೈನ ಮಾನಸಿಕ ತಜ್ಞೆ ಡಾ.ಅಲ್ಕಾ  ಎ.ಸುಬ್ರಹ್ಮಣ್ಯಮ್ ಎಚ್ಚರಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ದಕ್ಷಿಣ ಭಾರತ ಮನೋವೈದ್ಯರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ಮನೋವೈದ್ಯರ ಸಂಘದ 52ನೇ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 15 ರಿಂದ 30 ವರ್ಷದವರೆಗಿನ ಯುವಪೀಳಿಗೆಯಲ್ಲಿ ಆತ್ಮಹತ್ಯೆ ಮನೋಭಾವ ಹೆಚ್ಚಾಗುತ್ತಿದೆ. ಈ ವಯೋಮಾನದವರು ಶೇ.13ರಷ್ಟು ಪ್ರಮಾಣದಲ್ಲಿ ವಾಹನ ಅಪಘಾತ, ಶೇ.10ರಷ್ಟು ಮಧ್ಯ ವ್ಯಸನ, ಶೇ.7ರಷ್ಟು ಮಂದಿ ಇತರ ಕಾರಣಗಳಿಂದ ಸಾವನ್ನಪ್ಪಿದರೆ ಶೇ.18 ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಪೈಕಿ

ತರುಣಿಯರೂ ಅತ್ಯಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಮತ್ತೊಂದು ಕಳವಳಕಾರಿ ವಿಚಾರವಾಗಿದೆ ಎಂದು ಮಾಹಿತಿ ನೀಡಿದರು.

ಲೈಂಗಿಕ ದೌರ್ಜನ್ಯ, ಸ್ನಚ್ಚಂದತೆಗೆ ತೊಡಕು, ಕಿರಿಯ ವಯಸ್ಸಿನಲ್ಲಿಯೇ ವಿವಾಹ ಬಂಧ, ವರದಕ್ಷಿಣೆ ಕಿರುಕುಳ ಮತ್ತಿತರ ಕಾರಣಗಳು ಮಹಿಳೆಯರು ಸಣ್ಣ ವಯಸ್ಸಿನಲ್ಲಿಯೇ ಆತ್ಮಹತ್ಯೆ ಶರಣಾಗಲು ಕಾರಣವಾಗಿದೆ. ತಮಗೆ ದೊರಕದ ನಿರೀಕ್ಷಿತ ಪ್ರೀತಿಯಿಂದಾಗಿ ಬೇಸತ್ತು ಅನೇಕ ಮಹಿಳೆಯರು ಸಾವಿಗೆ ಶರಣಾಗುತ್ತಿರುವುದು ಆಧುನೀಕ ದಿನಗಳಲ್ಲಿ ಹೆಚ್ಚಾಗುತ್ತಿದ್ದು ಸಮಾಜ ಈ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕಾಗಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ 32,325 ರೈತರು, ಅನಾರೋಗ್ಯದಿಂದ 2600, ವರದಕ್ಷಿಣೆ ಕಿರುಕುಳದಿಂದ 2267, ಕಾರಣಗಳು ತಿಳಿದಿಲ್ಲದೇ 20900, ಪ್ರೇಮ ವೈಫಲ್ಯದಿಂದ 4500 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಯುವಕರು ಹಾಗೂ ಮಹಿಳೆಯರ ಸಂಖ್ಯೆ ಶೇ.60 ರಷ್ಟಿರುವುದು ಭವಿಷ್ಯದ ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಬೇಕೆಂದು ಹೇಳಿದರು.

ಪರೀಕ್ಷೆಯ ಭಯ, ಕೆಟ್ಟವರ ಸಾಂಗತ್ಯ, ಮೊಬೈಲ್ ಗೀಳು, ಏಕಾಂಗಿತನ, ಆತ್ಮವಿಶ್ವಾಸದ ಕೊರತೆಯೇ ಆತ್ಮಹತ್ಯೆಗೆ ಪ್ರಮುಖ ಕಾರಣಗಳೆಂದು ವಿಶ್ಲೇಷಿಸಿದ ಡಾ.ಅಲ್ಕಾ, ಪ್ರತೀ 6 ನಿಮಿಷಕ್ಕೆ  ಓರ್ವ ಭಾರತೀಯರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಈ ಮನೋಭಾವ ಮುಂದುವರೆದಲ್ಲಿ ಸದ್ಯದಲ್ಲಿಯೇ ವಿಶ್ವದಲ್ಲಿಯೇ ಭಾರತ ಅತ್ಯಧಿಕ ಆತ್ಮಹತ್ಯೆ ಪ್ರಕರಣಗಳ ದೇಶವಾಗಿ ಬಿಂಬಿತವಾಗಲಿದೆ ಎಂದು ವಿಷಾಧಿಸಿದರು.

ಜೀವನದ ಬಗ್ಗೆ ಆಶಾಭಾವನೆ ಮೂಡಿಸುವ ನಿಟ್ಟಿನಲ್ಲಿ ಭಾರತದ ಶಿಕ್ಷಣ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯ ಎಂದು ಹೇಳಿದ ಡಾ.ಅಲ್ಕಾ, ಶಿಕ್ಷಕರು, ಪೋಷಕರಿಗೆ ಸೂಕ್ತ ತರಬೇತಿ, ಅನುತೀರ್ಣತೆಯಿಲ್ಲದ ಶಿಕ್ಷಣ ನೀತಿ, ಬಾಲ್ಯದಲ್ಲಿಯೇ ಜೀವನದ ಬಗ್ಗೆ ಆತ್ಮವಿಶ್ವಾಸ ಮೂಡಿಸುವಂತಹ ಶಿಕ್ಷಣ ಭಾರತದಲ್ಲಿ ದೊರಕಬೇಕು. ಹೀಗಾದಾಗ ಮಾತ್ರ ಯುಕವರು ಸಾವಿನ ನಿರ್ಧಾರ ಕೈಗೊಳ್ಳಲಾರರು ಎಂದು ಹೇಳಿದರು.

ಮಾಧ್ಯಮಗಳು ತಮ್ಮ ಟಿ.ಆರ್.ಪಿ.ಗಾಗಿ ಅತಿರಂಜಿತ ವರದಿಗಳಿಂದ ಸಾವಿನ ಪ್ರರಕಣ ವೈಭವೀಕರಿಸುತ್ತಿವೆ ಎಂದು ದೂರಿದ ಡಾ.ಅಲ್ಕಾ, ಫೇಸ್ ಬುಕ್ ನಲ್ಲಿ ಲೈವ್ ನೀಡುತ್ತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅಪಾಯಕಾರಿ ಟ್ರೆಂಡ್ ಗೆ ಕಡಿವಾಣ ಹಾಕದಿದ್ದರೆ ಯುವಕರು ದಿಕ್ಕು ತಪ್ಪುವ ಎಲ್ಲಾ ಸಾಧ್ಯತೆಗಳಿವೆ ಎಂದರು.

ಯುವಕರು ಗುರಿ ಮತ್ತು ಉದ್ದೇಶ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಹೈದರಾಬಾದ್ ನ ಮಾನಸಿಕ ಆರೋಗ್ಯ ಸಂಶೋಧಕ ಡಾ.ಜಿ.ಪ್ರಸಾದ್‍ರಾವ್, ಹಣ, ವೃತ್ತಿ, ಜೀವನ ಶೈಲಿಯ ಬೆಂಬತ್ತಿ ಸಾಗುತ್ತಿರುವ ಯುವಪೀಳಿಗೆಯ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಯಿದೆ. ದೇಶದಲ್ಲಿ 310 ಮಿಲಿಯನ್ ಯುವಪೀಳಿಗೆಯವರಿದ್ದು, ಸೂಕ್ತ ಮಾರ್ಗದರ್ಶನ ನೀಡಿದ್ದೆ ಆದಲ್ಲಿ ಇವರು ದೇಶದ ಆಸ್ತಿಯಾಗುತ್ತಾರೆ. ಇಲ್ಲದಿದ್ದಲ್ಲಿ ಸೂಕ್ತ ಮಾರ್ಗವಿಲ್ಲದೇ ಅನಾಹುತಕ್ಕೆ ಕಾರಣವಾಗಲಿದ್ದಾರೆ ಎಂದು ಎಚ್ಚರಿಸಿದರು.

ಇಂದಿನ ಯುವಪೀಳಿಗೆಯಲ್ಲಿ ಅತೃಪ್ತಿಯ ಮನೋಭಾವ ಕಾಡುತ್ತಿದೆ. ಎಷ್ಟು ಸಂಪಾದನೆ ಮಾಡಿದರೂ ತೃಪ್ತಿ ದೊರಕುತ್ತಿಲ್ಲ. ತಾನು, ತನ್ನ ಕುಟುಂಬಕ್ಕಿಂತ ಹೆಚ್ಚಾಗಿ ಸಮಾಜಕ್ಕೆ ತನ್ನ ಕೊಡುಗೆ ಬೇಕು ಎಂಬ ಕಳಕಳಿ ಕಂಡುಬರುತ್ತಿದೆ. ಹೀಗಾಗಿ ಬಹುತೇಕ ಯುವಪೀಳಿಗೆ ಕುಟುಂಬವನ್ನು ನಿರ್ಲಕ್ಷಿಸಿ ಸಮಾಜ, ದೇಶದ ಏಳಿಗೆಯತ್ತ ಆಸಕ್ತರಾಗಿದ್ದಾರೆ ಎಂದರು.

ತನಗೆಲ್ಲಾ ತಿಳಿದಿದೆ ಎಂಬ ಭಾವನೆ ಬಾಲ್ಯದಲ್ಲಿಯೇ ಕಂಡು ಬರುತ್ತಿರುವುದರಿಂದಲೇ ಹಿರಿಯರ ಮಾತಿಗೂ ಗೌರವ ನೀಡುತ್ತಿಲ್ಲ. ಯುವತಿಯರು ಮದುವೆಯಿಂದ ವಿಮುಖರಾಗುತ್ತಿದ್ದಾರೆ. ಒಂಟಿಯಾಗಿ ಬಾಳಬಲ್ಲೆ ಎಂಬ ಮನೋಸ್ಥೈರ್ಯ ಹೆಚ್ಚಾಗುತ್ತಿದೆ. ಗಂಡ, ಮಕ್ಕಳಿಲ್ಲದೇ ತಾನು ಸಂತೋಷವಾಗಿರಬಲ್ಲೆ ಎಂದು ಇಂದಿನ ತರುಣಿಯರು ಭಾವಿಸಿದ್ದಾರೆ. ಹೀಗಾಗಿ ತರುಣಿಯರಲ್ಲಿ ವಿವಾಹದ ಬಗ್ಗೆ ಆಸಕ್ತಿಯೇ ಇಲ್ಲ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳು ಇಂದಿನ ಯುವಪೀಳಿಗೆಯ ಮಾರ್ಗದರ್ಶಕವಾದಂತಿದೆ. ಎಲ್ಲವನ್ನೂ ಗೂಗಲ್ ನಲ್ಲಿಯೇ ಕಂಡುಕೊಂಡು ಅದನ್ನೇ ಗುರುವಾಗಿ ಸ್ವೀಕರಿಸಿರುವುದು ಚರ್ಚಾಸ್ಪದ. ನವಭಾರತದ ಸಂಕಲ್ಪದಿಂದಾಗಿ ನವಭಾರತೀಯರು ಮಾನಸಿಕವಾಗಿ ಬದಲಾಗಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಮಾನಸಿಕ ತಜ್ಞ ಡಾ.ಮೋಹನ್ ಸುನೀಲ್‍ಕುಮಾರ್ ಡಿಜಿಟಲ್ ಚಿಕಿತ್ಸಾ ವಿಧಾನ ವಿಚಾರವಾಗಿ, ತೆಲಂಗಾಣದ ನಾರ್ಕೆಟಪಳ್ಳಿ ವಿಶ್ವವಿದ್ಯಾನಿಲಯದ ಡಾ.ಪ್ರವೀಣ್‍ಕೈರ್ಕರ್ ಮತ್ಸರದಿಂದ ಮಾನಸಿಕ ತಲ್ಲಣ ವಿಚಾರಕ್ಕೆ ಸಂಬಂಧಿಸಿದಂತೆ, ನಿದ್ರಾಹೀನತೆ ಬಗ್ಗೆ ಪಾಂಡಿಚೇರಿಯ ಡಾ.ವಿವೇಕ್ ಮೆನನ್ ಉಪನ್ಯಾಸ ನೀಡಿದರು. ಬೆಂಗಳೂರಿನ ವೈದ್ಯೆ ಡಾ.ಹೇಮಾತರೂರು ಉಪಸ್ಥಿತರಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: