ಕರ್ನಾಟಕ

ತಲಕಾವೇರಿಯಿಂದ ಪೂಂಪ್‍ಹಾರ್ ಗೆ ಕಾವೇರಿ ಜಾಗೃತಿ ಯಾತ್ರೆ: ಸಾಧು ಸಂತರ ಆಗಮನ

ಮಡಿಕೇರಿ,ಅ.21-ಅಖಿಲ ಭಾರತ ಸನ್ಯಾಸಿ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 9ನೇ ವರ್ಷದ ತಲಕಾವೇರಿ- ಪೂಂಪ್‍ಹಾರ್ ಕಾವೇರಿ ಜಾಗೃತಿ ಯಾತ್ರೆಗೆ ಇಂದು ಚಾಲನೆ ದೊರೆಯಲಿದೆ.

ತಲಕಾವೇರಿ ಕ್ಷೇತ್ರದಿಂದ ಪ್ರಾರಂಭಗೊಳ್ಳುವ ಯಾತ್ರೆ ನವೆಂಬರ್ 8ಕ್ಕೆ ನದಿ ಸಂಗಮವಾಗುವ ಬಂಗಾಳಕೊಲ್ಲಿಯ ಪೂಂಪ್‍ಹಾರ್ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ. ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕರ್ನಾಟಕ, ತಮಿಳುನಾಡು ಪ್ರಾಂತ್ಯದ ಸಾಧು ಸಂತರು, ಕಾರ್ಯಕರ್ತರು ಭಾನುವಾರ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲೆಯ ಗಡಿಭಾಗ ಕುಶಾಲನಗರ ಬಳಿ ಸಾಧುಸಂತರ ತಂಡವನ್ನು ಬರಮಾಡಿಕೊಳ್ಳಲಾಯಿತು.

ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖರಾದ ಶ್ರೀರಮಾನಂದ ಸ್ವಾಮೀಜಿ ನೇತೃತ್ವದಲ್ಲಿ 30 ಕ್ಕೂ ಅಧಿಕ ಸಾಧುಸಂತರು ಮತ್ತು ಕಾರ್ಯಕರ್ತರನ್ನು ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಕಾವೇರಿ ತೀರ್ಥ ನೀಡುವ ಮೂಲಕ ಬರಮಾಡಿಕೊಂಡರು. ಸಮಿತಿಯ ರಾಜ್ಯ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್, ಪ್ರಮುಖರಾದ ಡಿ.ಆರ್.ಸೋಮಶೇಖರ್, ಅಕ್ಷಯ್ ಪನ್ಯಾಡಿ ಮತ್ತಿತರರು ಹಾಜರಿದ್ದರು.

ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಹೊರಡುವ ಯಾತ್ರಾ ತಂಡಕ್ಕೆ ಕಾವೇರಿ ಯಾತ್ರಾ ಸಮಿತಿಯ ಸಂಚಾಲಕರಾದ ವೇ.ಬ್ರ.ಡಾ.ಭಾನುಪ್ರಕಾಶ್ ಶರ್ಮ ಅವರು ಶುಭ ಕೋರಿ ಚಾಲನೆ ನೀಡುವರು.

ತಂಡದ ಸದಸ್ಯರು ಮೂಲ ಕಾವೇರಿಯಿಂದ ತೀರ್ಥ ಸಂಗ್ರಹಿಸಿ ನದಿ ತಟಗಳ ವ್ಯಾಪ್ತಿಗಳಲ್ಲಿ ತೆರಳುವ ಸಂದರ್ಭ ಹಲವೆಡೆ ಜೀವನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮ, ಜನರಿಗೆ ನದಿಯ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವುದು ಮತ್ತು ಇತರ ಕಾರ್ಯಕ್ರಮಗಳೊಂದಿಗೆ ನ.8 ರಂದು ಪೂಂಪ್‍ಹಾರ್ ಬಳಿ ಸಮುದ್ರದಲ್ಲಿ ಪವಿತ್ರ ಕಾವೇರಿ ತೀರ್ಥವನ್ನು ವಿಸರ್ಜನೆ ಮಾಡಲಾಗುವುದು. ಸಮಾರೋಪದಲ್ಲಿ ಜೀವನದಿಯ ಸಂರಕ್ಷಣೆಗೆ ಕೈಗೊಳ್ಳುವ ನಿರ್ಣಯವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನಕ್ಕೆ ತರುವ ಮೂಲಕ ಆಗ್ರಹಿಸಲಾಗುವುದು.

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡುವ ತಂಡ ಭಾಗಮಂಡಲ, ಬಲಮುರಿ ಮೂಲಕ ಮೂರ್ನಾಡು, ಸಿದ್ದಾಪುರ, ಕುಶಾಲನಗರ, ಕಣಿವೆ ಮಾರ್ಗವಾಗಿ ತೆರಳಿ ನಂತರ ರಾಮನಾಥಪುರಕ್ಕೆ ಸಾಗಲಿದೆ. (ಕೆಸಿಐ, ಎಂ.ಎನ್)

Leave a Reply

comments

Related Articles

error: