ಕರ್ನಾಟಕ

ಮಡಿಕೇರಿಯಲ್ಲಿ ಉತ್ತಮ ಮಳೆ: ಅ.23 ರವರೆಗೆ ಆರೆಂಜ್ ಅಲರ್ಟ್ ಘೋಷಣೆ

ಮಡಿಕೇರಿ,ಅ.21- ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ಮಡಿಕೇರಿ, ಭಾಗಮಂಡಲ ಮತ್ತು ವಿರಾಜಪೇಟೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ 24 ಗಂಟೆಗಳಿಂದ ಮಳೆ ತೀವ್ರತೆಯನ್ನು ಪಡೆದುಕೊಂಡಿದೆ. ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ.

ಅರಬ್ಬೀ ಸಮುದ್ರ ಮತ್ತು ಲಕ್ಷ ದ್ವೀಪದಲ್ಲಿ ವಾಯು ಭಾರ ಕುಸಿತವಾದ ಕಾರಣ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಸುಮಾರು ಐದು ದಿನಗಳ ಕಾಲ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಅ.20 ರಿಂದ 23 ರವರೆಗೆ ಆರೆಂಜ್ ಅಲರ್ಟ್ ಹಾಗೂ ಅ.23 ರಿಂದ 24 ರವರೆಗೆ ಎಲ್ಲೋ ಅಲರ್ಟ್ ಘೋಷಿಸಿ ಜಿಲ್ಲಾಡಳಿತ ಎಚ್ಚರಿಕೆಯ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನಗಳು 115.50 ಯಿಂದ 204.4 ಮಿ.ಮೀ ಮಳೆಯಾಗಲಿದೆ. ಕೊನೆಯ ಒಂದು ದಿನ 64.5 ರಿಂದ 115.50 ಮಿ.ಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಅವಧಿಯಲ್ಲಿ ಬೆಟ್ಟ, ಗುಡ್ಡ, ತಗ್ಗು ಪ್ರದೇಶ ಮತ್ತು ಈಗಾಗಲೇ ಮಳೆಹಾನಿಗೊಂಡಿರುವ ವ್ಯಾಪ್ತಿಯ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಿರಾಶ್ರಿತರ ಸ್ಥಳಾಂತರಕ್ಕೆ ಆಕ್ಷೇಪ: ಮತ್ತೊಂದೆಡೆ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಪ್ರವಾಹ ಏರ್ಪಟ್ಟು ಮನೆಗಳನ್ನು ಕಳೆದುಕೊಂಡ ನೆಲ್ಯಹುದಿಕೇರಿ ವ್ಯಾಪ್ತಿಯ ನಿರಾಶ್ರಿತರು ಶಾಲಾ ಕಟ್ಟಡದಲ್ಲಿರುವ ಪರಿಹಾರ ಕೇಂದ್ರವನ್ನು ಬಿಡಬೇಕೆನ್ನುವ ಜಿಲ್ಲಾಡಳಿತದ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ತರಗತಿಗಳನ್ನು ನಡೆಸಲು ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಸುಮಾರು 60 ಕ್ಕೂ ಹೆಚ್ಚು ಕುಟುಂಬಗಳನ್ನು ಬೇರೆಡೆ ಸ್ಥಳಾಂತರಗೊಳ್ಳುವಂತೆ ತಿಳಿಸಲಾಗಿದೆ. ಆದರೆ ಎಲ್ಲವನ್ನೂ ಕಳೆದುಕೊಂಡ ಬಡವರ್ಗದ ಮಂದಿ ಈ ದಿಢೀರ್ ಬೆಳವಣಿಗೆಯಿಂದ ಎಲ್ಲಿಗೆ ಹೋಗಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕಾರ್ಮಿಕ ಮುಖಂಡ ಪಿ.ಆರ್.ಭರತ್ ಪ್ರಶ್ನಿಸಿದ್ದಾರೆ.

ಸರ್ಕಾರ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಮತ್ತು ಸೂರು ಕಲ್ಪಿಸುವಲ್ಲಿ ಸಂಪೂರ್ಣವಾಗಿದೆ ವಿಫಲವಾಗಿದೆ ಎಂದು ಆರೋಪಿಸಿರುವ ಅವರು ಶಾಶ್ವತ ನೆಲೆಯನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಸರಕಾರಕ್ಕೆ ಇದು ಸಾಧ್ಯವಾಗದಿದ್ದಲ್ಲಿ ನಿವೇಶನ ಖರೀದಿಸಿ, ಮನೆ ನಿರ್ಮಿಸಿಕೊಳ್ಳಲು ತಲಾ 10 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲಿ ಎಂದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: