ಮೈಸೂರು

ಆಸ್ತಿ ವಿಚಾರ: ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರಿಂದ ದೂರು; ಐವರ ವಿರುದ್ಧ ಪ್ರಕರಣ ದಾಖಲು

ಮೈಸೂರು,ಅ.21-ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಅವರು ನೀಡಿರುವ ದೂರಿನ ಮೇರೆಗೆ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುಮಾ ವಿಜಯ ಸೇರಿದಂತೆ ಐವರ ವಿರುದ್ಧ ಐಪಿಸಿ ಕಲಂ 380, 447, 457 ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಮಂಜುನಾಥ್‌ ಅವರು ತಮ್ಮ ಸ್ನೇಹಿತರಾದ ಎಂ.ಪಿ.ರವೀಂದ್ರ ಅವರಿಗೋಸ್ಕರ ವಿ.ವಿ.ಮೊಹಲ್ಲಾದಲ್ಲಿ ಪ್ಲಾಟ್‌ ಖರೀದಿಸಲು ಮುಂದಾಗಿದ್ದು, ಅದರಂತೆ ಅಪಾರ್ಟ್‌ಮೆಂಟ್‌ವೊಂದರಲ್ಲಿಪೆಂಟ್‌ ಹೌಸ್‌ ಖರೀದಿಸಲು ನೆರವಾಗಿದ್ದರು. ರವೀಂದ್ರ ಅವರು 10 ಲಕ್ಷ ರೂ. ಹಣವನ್ನು ಪೆಂಟ್‌ ಹೌಸ್‌ ಖರೀದಿಗೆ ನೀಡಿದ್ದು, ಉಳಿದ 26 ಲಕ್ಷ ರೂ. ಹಣವನ್ನು ಮಂಜುನಾಥ್‌ ನೀಡಿದ್ದರು. ಬಳಿಕ 25 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಕೂಡ ಮಾಡಿಸಿದ್ದರು.

ನಂತರದ ದಿನಗಳಲ್ಲಿ ರವೀಂದ್ರ ಅವರು ಪೆಂಟ್‌ಹೌಸ್‌ ನೀವೇ ಬಳಸಿ ಎಂದು 20 ಲಕ್ಷ ರೂ. ಪಡೆದು, ಮುಂದಿನ ದಿನಗಳಲ್ಲಿ ಪೆಂಟ್‌ ಹೌಸ್‌ ಅನ್ನು ನಿಮ್ಮ ಹೆಸರಿಗೆ ಬರೆದುಕೊಡುವುದಾಗಿ ಹೇಳಿದ್ದರು. ಈ ಮಧ್ಯೆ ರವೀಂದ್ರ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಕೀ ನನ್ನ ಬಳಿಯೇ ಇತ್ತು. ಅದನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ಕೂಡ ನೇಮಕ ಮಾಡಿದ್ದೆ.

ಕಳೆದ ಅ.13ರಂದು ರವೀಂದ್ರ ಅವರ ಸೋದರಿ ಸುಮಾ ವಿಜಯ ಅವರು ವಿ.ವಿ.ಪುರಂ ಪೊಲೀಸ್‌ ಠಾಣೆಗೆ ಬಂದು ನಮ್ಮ ತಮ್ಮ ರವೀಂದ್ರಗೆ ಸೇರಿದ ಪೆಂಟ್‌ಹೌಸ್‌ನ ಬೀಗ ತೆಗೆಸಿಕೊಡುವಂತೆ ಕೇಳಿದ್ದು, ನಾನು ಈ ವಿಚಾರವನ್ನು ನನ್ನ ಆಪ್ತ ಕಾರ್ಯದರ್ಶಿ ಮೂಲಕ ತಿಳಿದುಕೊಂಡು ನಡೆದಿರುವ ವಿಷಯವನ್ನು ಹೇಳಿದ್ದೆ. ಮನೆ ನನ್ನ ಹೆಸರಿಗೆ ಆಗಿರುವ ಬಗ್ಗೆ ಇರುವ ದಾಖಲಾತಿಗಳೊಂದಿಗೆ ಬರುತ್ತೇನೆ ಎಂದು ಹೇಳಿದ್ದೆ.

ಆದರೆ ಸುಮಾ ವಿಜಯ ಅವರು ಅಂದು ರಾತ್ರಿ ನೇರವಾಗಿ ಅಪಾರ್ಟ್‌ಮೆಂಟ್‌ನ ಪೆಂಟ್‌ಹೌಸ್‌ಗೆ ಐದು ಮಂದಿಯೊಂದಿಗೆ ತೆರಳಿ ಮನೆಯ ಬೀಗ ಹೊಡೆದು ಮನೆಯಲ್ಲಿದ್ದ 17.5 ಲಕ್ಷ ರೂ. ನಗದು ಮತ್ತು ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ನೀಡಿದ್ದರು. ಈ ಸಂಬಂಧ ವಿವಿ ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್, ಎಂ.ಎನ್)

Leave a Reply

comments

Related Articles

error: