ಕರ್ನಾಟಕ

ಶಾಶ್ವತ ಪರಿಹಾರ ಸಿಗದೆ ಸಂತ್ರಸ್ತರ ಕೇಂದ್ರ ಬಿಟ್ಟು ತೆರಳುವುದಿಲ್ಲ ಸಂತ್ರಸ್ತರ ಎಚ್ಚರಿಕೆ 

ಮಡಿಕೇರಿ,(ಸಿದ್ದಾಪುರ),ಅ.21-ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಮನೆ ಕಳೆದುಕೊಂಡು ಸರ್ಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಚಿಂತನೆ ನಡೆಸಿಲ್ಲ ಎಂದು ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಪಿ.ಆರ್ ಭರತ್ ಆರೋಪಿಸಿದ್ದಾರೆ.

ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಆಗಮಿಸುತ್ತಿರುವ ಅಧಿಕಾರಿ, ಜನಪ್ರತಿನಿಧಿಗಳು ಭರವಸೆ ಮಾತ್ರ ನೀಡುತ್ತಿದ್ದಾರೆ. ಶಾಶ್ವತ ಯೋಜನೆಗಳ ಬಗ್ಗೆ ಚಿಂತನೆ ಹರಿಸುತ್ತಿಲ್ಲ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸದೇ ಪಕ್ಷದ ಮುಖಂಡರುಗಳೊಂದಿಗೆ ಕೊಠಡಿಯಲ್ಲಿ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ.

ನಂತರ ಸಂತ್ರಸ್ತರೊಂದಿಗೆ ಮಾತನಾಡಿ, ಒಂದು ವಾರದಲ್ಲಿ ಇಪ್ಪತ್ತೈದು ಸಾವಿರ ರೂ. ಮತ್ತೆ ಮೂರು ತಿಂಗಳ ನಂತರ ಇಪ್ಪತ್ತೈದು ಸಾವಿರ ರೂ. ನೀಡಲಾಗುವುದು. ಶಾಲೆ ನಡೆಯಬೇಕಾಗಿರುವುದರಿಂದ ಸಂತ್ರಸ್ತರು ಇಲ್ಲಿಂದ ತೆರಳಬೇಕೆಂದು ಸೂಚಿಸಿದರಲ್ಲದೆ, ಹತ್ತು ತಿಂಗಳ ನಂತರ ಸೂಕ್ತ ಜಾಗ ಹಾಗೂ ಮನೆ ಕಟ್ಟಿಕೊಡಲು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.

ಸೌಜನ್ಯಕ್ಕಾದರೂ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸದೆ ಏಕಾಏಕಿ ಕೇಂದ್ರ ಬಿಟ್ಟು ತೆರಳಿ ಎಂದು ಹೇಳಿದರ ಎಲ್ಲಿ ಹೋಗುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮಗೆ ಶಾಲೆಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ನಮ್ಮ ಮಕ್ಕಳೇ ಆಗಿದ್ದಾರೆ ಅವರಿಗೆ ಶಾಶ್ವತ ನೆಲೆ ಇಲ್ಲದೆ ಶಾಲೆಗೆ  ಕಳುಹಿಸುವುದಾದರೂ ಹೇಗೆ ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದ ಅವರು, ಜಿಲ್ಲಾಡಳಿತವೇ ಬೇರೆ ಕಡೆ ಪರಿಹಾರ ಕೇಂದ್ರ ತೆರೆಯಲಿ. ಗ್ರಾಮದಲ್ಲಿ ಶಾದಿ ಮಹಲ್ ಹಾಗೂ ಸಮುದಾಯ ಭವನಗಳಿದೆ. ಶಾಶ್ವತ ಸೂರು ಸಿಗುವವರೆಗೂ ಕೇಂದ್ರ ಬಿಟ್ಟು ತೆರಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. (ಕೆ.ಎಸ್, ಎಂ.ಎನ್)

 

Leave a Reply

comments

Related Articles

error: