ಪ್ರಮುಖ ಸುದ್ದಿ

ಮಳೆಯ ರುದ್ರನರ್ತನ: ಮತ್ತೆ ಪ್ರವಾಹದ ಸುಳಿಗೆ ಸಿಲುಕಿದ ಕರ್ನಾಟಕ

ಬೆಂಗಳೂರು,ಅ.21-ಆಗಸ್ಟ್ ನಲ್ಲಿ ಸಂಭವಿಸಿದ ಭೀಕರ ನೆರೆಯಿಂದ ಹೊರಬಂದು ಜನರು ಮತ್ತೆ ಬದುಕು ಕಟ್ಟಿಕೊಳ್ಳಲು ಆರಂಭಿಸಿರುವಾಗಲೇ ರಾಜ್ಯದಲ್ಲಿ ಮತ್ತೆ ಮಳೆಯ ರುದ್ರನರ್ತನ ಆರಂಭವಾಗಿದೆ.

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಜನರ ಸ್ಥಿತಿ ಹೇಳ ತೀರದಾಗಿದೆ. ಬೆಳಗಾವಿಯಲ್ಲಿ ಮಲಪ್ರಭಾ, ಘಟಪ್ರಬಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಹಳ್ಳಿಗಳು ಜಲಾವೃತವಾಗುತ್ತಿವೆ. ಜನರು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ಬೆಳಗಾವಿಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಈ ವರ್ಷ ಮೂರನೇ ಬಾರಿ ಜಲಾವೃತಗೊಂಡಿದೆ. ಸುರೇಬಾನ ಸುತ್ತಮುತ್ತ ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಇದರ ಜತೆಗೆ ಬೈಲಹೊಂಗಲ, ಸವದತ್ತಿ, ಕಿತ್ತೂರು ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಮಲಪ್ರಭಾ ನದಿಯ ನವಿಲುತೀರ್ಥ ಜಲಾಶಯಕ್ಕೆ ಸುಮಾರು 23 ಸಾವಿರ ಕ್ಯೂಸೆಕ್ ನೀರಿನ ಹರಿದಿದೆ.

ಡ್ಯಾಂ ಈ ಮಳೆಗಾಲದಲ್ಲೇ ತುಂಬಿದ್ದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಪರಿಣಾಮ ಡ್ಯಾಂ ಕೆಳಗಿನ ರಾಮದುರ್ಗ ತಾಲೂಕಿನ ನದಿ ತೀರದ ಸುರೇಬಾನ ಮತ್ತಿತರ ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ಸುರೇಬಾನದ ಶಾಲಾ-ಕಾಲೇಜು, ಉಪ ಪೊಲೀಸ್ ಠಾಣೆ ಜಲಾವೃತಗೊಂಡಿವೆ.

ಭಾನುವಾರ ರಾತ್ರಿ ಸುರಿದ ಮಳೆಗೆ ಹುದಲಿ ಬಳಿ ರಸ್ತೆ ಕುಸಿದಿದ್ದು, ಕೆ.ಎಸ್.ಆರ್.ಟಿ.ಸಿ. ಯ ಬೆಳಗಾವಿ- ಪಣಗುತ್ತಿ ಬಸ್ ರಸ್ತೆ ಬಿರುಕಿನಲ್ಲಿ ಸಿಲುಕಿಕೊಂಡಿದೆ. ಬಸ್ ಮೇಲೆತ್ತಲು ರಾಜ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಮಳೆಯಿಂದ ಬೆಳಗಾವಿ- ರಾಮದುರ್ಗ ನಡುವಿನ ವಿವಿಧ ರಸ್ತೆಗಳಲ್ಲಿ ಸಂಚಾರವೂ ಸ್ಥಗಿತಗೊಂಡಿದೆ.
ರಾಮದುರ್ಗದಿಂದ ಕೊಣ್ಣೂರ, ರಾಮದುರ್ಗ- ಕಟಕೋಳ, ರಾಮದುರ್ಗ- ಮೂಲಂಗಿ, ಸುರೇಬಾನ- ಕುಲಗೇರಿ ರಸ್ತೆ ಸಂಪರ್ಕ ಕಡಿತಗೊಂಡಿವೆ ಎಂದು ಕೆ.ಎಸ್.ಆರ್.ಟಿ.ಸಿ‌ ಬೆಳಗಾವಿ ವಿಭಾಗದ ವ್ಯವಸ್ಥಾಪಕ ಮಹಾದೇವಪ್ಪ ಮುಂಜಿ ತಿಳಿಸಿದ್ದಾರೆ.

ಚಿಕ್ಕೋಡಿ, ಹುಕ್ಕೇರಿ, ರಾಯಭಾಗದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಒಂದೊಂದಾಗಿ ಊರುಗಳು ಮುಳುಗಡೆಯಾಗುತ್ತಿವೆ. ವಾಹನಗಳು ಕೊಚ್ಚಿ ಹೋಗುತ್ತಿವೆ. ಕೆಲ ಕಡೆ ರಸ್ತೆಗಳು ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿದೆ. ರಾಮದುರ್ಗ – ಬೆಳಗಾವಿ ಮುಖ್ಯರಸ್ತೆ ಸಂಪರ್ಕ ಕಡಿತಗೊಡಿದೆ. ಬೆಳಗಾವಿಯ ಗೋಕಾಕ್ ತಾಲೂಕಿನಲ್ಲಿ ಗುಡ್ಡ ಕುಸಿತ ಆರಂಭವಾಗಿದೆ. ಗುಡ್ಡದಲ್ಲಿರುವ ದೊಡ್ಡ ಗಾತ್ರದ ಬಂಡೆಗಳ ಸುತ್ತಮುತ್ತ ಬಿರುಕು ಬಿಟ್ಟಿದ್ದು, ಬೆಟ್ಟದ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬಾಗಲಕೋಟೆ ಜಿಲ್ಲೆಯಾದ್ಯಂತ ಸೋಮವಾರ ಬೆಳಗಿನ ಜಾವ ಕೂಡ ಮಳೆ ಸುರಿದಿದ್ದು, ಇದರ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಮುಧೋಳ ಪಟ್ಟಣದ ನಗರಸಭೆ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿದೆ. ಒಂಟಗೋಡಿ, ‌ಮಿರ್ಜಿ, ಚನಾಳ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಮಲಪ್ರಭಾ ನದಿಯಲ್ಲಿ ನೀರು ಹೆಚ್ಚಳವಾಗಿದ್ದು, 35 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬಾದಾಮಿಯ ಅಗಸ್ತ್ಯ ತೀರ್ಥ, ಬನಶಂಕರಿ ಯ ಹರಿದ್ರಾ ತೀರ್ಥಗಳು ಮುಳುಗುವ ಹಂತಕ್ಕೆ ತಲುಪಿದೆ. ಮಲಪ್ರಭಾ ನದಿ ಹರಿವು ಹೆಚ್ಚಳವಾಗಿರುವುದರಿಂದ ಬಾದಾಮಿ ತಾಲೂಕಿನ 20 ಗ್ರಾಮಗಳಲ್ಲಿ ಮತ್ತೆ ನೆರೆಯ ಭೀತಿ ಎದುರಾಗಿದೆ.

ಹುಬ್ಬಳ್ಳಿಯ ಇಂಗಳಹಳ್ಳಿ ಹಾಗೂ ಶಿಶುವಿನಹಳ್ಳಿ ನಡುವಿನ ಸೇತುವೆ ಮಧ್ಯೆ ಕಾಮಗಾರಿಯ ಕೆಲಸ ಮಾಡುತ್ತಿದ್ದ 9 ಜನ ಕಾರ್ಮಿಕರು ನದಿ ನೀರಿನ ಮಧ್ಯೆ ಸಿಲುಕಿ ಹಾಕಿಕೊಂಡಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ತಹಸಿಲ್ದಾರ್ ಪ್ರಕಾಶ್ ನಾಸಿ ಸ್ಥಳದಲ್ಲಿ ಉಪಸ್ಥಿತಿರಿದ್ದು, ರಕ್ಷಣಾ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಮಲಪ್ರಭಾ ಡ್ಯಾಂ ನಿಂದ ನೀರು ಹರಿಬಿಡಲಾಗುತ್ತಿರುವುದರಿಂದ ಸಂಜೆ ವೇಳೆಗೆ ಹುಬ್ಬಳ್ಳಿ ವಿಜಯಪುರ ಹೆದ್ದಾರಿ ಸಂಚಾರ ಕಡಿತವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಗಲೇ ಬೆಣ್ಣೆಹಳ್ಳ-ರೋಣ ನಡುವಿನ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೂಡ ವರುಣನ ಆವಾಂತರ ಹೇಳತೀರದಾಗಿದೆ. ಮುಧೋಳ ಬಳಿ ಕೋಳಿಗಳ ಫಾರಂಗೆ ನೀರು ನುಗಿದ್ದು, ಸುಮಾರು 3 ಸಾವಿರ ಕೋಳಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಇದರ ಜೊತೆಗೆ ಇಲ್ಲಿನ ರಾಮದುರ್ಗ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳನ್ನು ಮಲಪ್ರಭಾ ನೀರು ಆವರಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಎತ್ತು, ಕುರಿ, ನಾಯಿ ಮತ್ತು ಅಗತ್ಯ ವಸ್ತುಗಳನ್ನು ಹಿಡಿದುಕೊಂಡು ಊರು ಖಾಲಿ ಮಾಡುತ್ತಿದ್ದಾರೆ. ಟ್ಯಾಕ್ಟರ್, ಟಂಟಂ, ಎತ್ತಿನಬಂಡಿಯಲ್ಲಿ ವಸ್ತುಗಳನ್ನು ಸಾಗಿಸಿಕೊಂಡು ಊರು ಬಿಡುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಜನ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ತರೀಕೆರೆ ತಾಲೂಕಿನಲ್ಲಿ ಸುರಿದ ಮಳೆಗೆ 8 ವರ್ಷಗಳ ಬಳಿಕ ಜಂಬದ ಹಳ್ಳ ಡ್ಯಾಂ ತುಂಬಿ ಹರಿಯುತ್ತಿದೆ. ಜೊತೆಗೆ ಮುಗಳಿ, ಶಿವನಿ ಗ್ರಾಮದ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಮುಗಳಿ – ತಮಟದಹಳ್ಳಿ, ಅಜ್ಜಂಪುರ – ಶಿವನಿ ಗ್ರಾಮದ ಸಂಪರ್ಕ ಸಂಪೂಣಘ ಕಡಿತಗೊಂಡಿದೆ. ಜಮೀನುಗಳು ಜಲಾವೃತವಾಗಿದ್ದು ನದಿಯಂತಾಗಿದೆ.

ಶಿವಮೊಗ್ಗ ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಆರಂಭವಾದ ಮಳೆ ಕೆಲವು ಕಡೆ ಇನ್ನೂ ಮುಂದುವರೆದಿದೆ. ಜಿಲ್ಲೆಯ ಶಕಾರಿಪುರ, ಸೊರಬ, ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗಿದೆ. ಪರಿಣಾಮ ಕೆರೆ ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಉಡುಪಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 61.59 ಮಿ. ಮೀ. ಮಳೆ ದಾಖಲಾಗಿದೆ. ಭಾನುವಾರದಿಂದ ಸೋಮವಾರ ಬೆಳಿಗ್ಗೆ 8.30 ರ ತನಕ ಉಡುಪಿಯಲ್ಲಿ 80.2 ಮಿ. ಮೀ. , ಕುಂದಾಪುರ: 39ಮಿ. ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 65.57 ಮಿ. ಮೀ. ಮಳೆ ಬಿದ್ದಿದೆ. ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಶ್ರೀನಿವಾಸ ದಾಸ್ ಮನೆಗೆ ಗಾಳಿ, ಮಳೆಯಿಂದ ಭಾಗಶಃ ಹಾನಿಯಾಗಿದ್ದು 25,000ರೂ., ಗೋಪಿದಾಸ್ ಅವರ ಜಾನುವಾರು ಕೊಟ್ಟಿಗೆಗೆ ಭಾಗಶಃ ಹಾನಿಯಿಂದ 10,000ರೂ. ನಷ್ಟವಾಗಿದೆ.

ಕಳೆದ ಎರಡು ದಿನಗಳಿಂದ ತುಂಗಭದ್ರಾ ಡ್ಯಾಂ ಒಳ ಹರಿವು ಹೆಚ್ಚಾಗಿದ್ದರಿಂದ ನದಿಗೆ ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಹರಿಸಲಾಗುತ್ತಿದ್ದು ನದಿ ಪಾತ್ರದ ಗ್ರಾಮಗಳ ಜನರು ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.

ತಾಲೂಕಿನ ವಿರೂಪಾಪೂರಗಡ್ಡಿ, ಋಷಿಮುಖ ಪರ್ವತ, ನವ ವೃಂದಾವನ ಗಡ್ಡಿ ಶ್ರೀ ಕೃಷ್ಣದೇವರಾಯ ಸಮಾಧಿ 60 ಕಾಲಿನ ಮಂಟಪ ಸಂಪೂರ್ಣ ಜಲಾವೃತವಾಗಿವೆ. ವಿರೂಪಾಪೂರಗಡ್ಡಿ ರೆಸಾರ್ಟ್ ಗಳಲ್ಲಿ ಉಳಿದು ಕೊಂಡಿದ್ದ 180ಕ್ಕೂ ಹೆಚ್ಚು ಜನ ಪ್ರವಾಸಿಗರನ್ನು ಸೋಮವಾರ ಬೆಳಿಗ್ಗೆ ಹರಿಗೋಲಿನ ಮೂಲಕ ನದಿ ದಾಟಿಸಲಾಗಿದೆ.

ವೀಕ್ ಎಂಡ್ ಮಾಡಲು ವಿರೂಪಾಪೂರಗಡ್ಡಿ ರೆಸಾರ್ಟ್ ಗಳಿಗೆ ಆಗಮಿಸಿದ್ದ 350 ಕ್ಕೂ ಹೆಚ್ಚು ಜನ ಶನಿವಾರ ಬೆಳಿಗ್ಗೆ ರೆಸಾರ್ಟ್ ಮಾಲೀಕರು ಹರಿಗೋಲಿನ ಸಹಾಯದಿಂದ ನದಿ ದಾಟಿಸಿದ್ದರು. ಸೋಮವಾರ ಉಳಿದ ಜನ ಪ್ರವಾಸಿಗರನ್ನು ದಾಟಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಜನರಿಗೆ ಸಂಕಷ್ಟ ಉಂಟಾಗಿದೆ. ಶನಿವಾರ ತಾಲೂಕು ಆಡಳಿತದ ಅಧಿಕಾರಿಗಳು ಟೆಕ್ಕಿಗಳನ್ನು ದಾಟಿಸಲು ಬಳಸಿದ್ದ ಹರಿಗೋಲು ವಶಪಡಿಸಿಕೊಂಡಿದ್ದರು.

ನದಿಯಲ್ಲಿ ಒಂದು ಲಕ್ಷಕ್ಕೂ ಕ್ಯೂಸೆಕ್ಸ್ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಕಂಪ್ಲಿ- ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಲು ನಾಲ್ಕು ಅಡಿ ಬಾಕಿ ಇದ್ದು ಇನ್ನೂ ಜನ ವಾಹನಗಳು ಓಡಾಡುತ್ತಿರುವುದು ಕಂಡು ಬಂದಿದೆ. ನದಿ ದಡದಲ್ಲಿ ಇದ್ದ ರೈತರ ಪಂಪ್ ಸೆಟ್ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ. (ಎಂ.ಎನ್)

 

Leave a Reply

comments

Related Articles

error: