ದೇಶಪ್ರಮುಖ ಸುದ್ದಿ

ವಿವಾದಿತ ಇಸ್ಲಾಂ ಪ್ರಚಾರಕ ಝಾಕಿರ್ ನಾಯಕ್‍ಗೆ ಜಾರಿ ನಿರ್ದೇಶನಾಲಯ ನೋಟಿಸ್

ಮುಂಬೈ: ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಡಾ.ಝಾಕಿರ್ ನಾಯ್ಕ್‌ ಗೆ ಜಾರಿ ನಿರ್ದೇಶನಾಲಯ(ಇಡಿ) ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಇಂಟರ್‍ನೆಟ್ ವಿಡಿಯೋ ಮೂಲಕ ವಿದೇಶದಿಂದಲೇ ವಿಚಾರಣೆ ನಡೆಸಬೇಕು ಎಂಬ ಝಾಕಿರ್ ನಾಯಕ್ ಮನವಿಯನ್ನು ತಿರಸ್ಕರಿಸಿರುವ ಜಾರಿ ನಿರ್ದೇಶನಾಲಯ, ಖುದ್ದು ವಿಚಾರಣೆಗೆ ಹಾಜರಾಗುವಂತೆ ಇಂದು ನಾಲ್ಕನೆ ಹಾಗೂ ಕೊನೆ ಬಾರಿ ಸಮನ್ಸ್ ಜಾರಿ ಮಾಡಿದೆ. ಇದು ಕೊನೆ ನೋಟಿಸ್ ಎಂದು ಜಾರಿ ನಿರ್ದೇಶನಾಲಯ ಎಚ್ಚರಿಸಿದ್ದು, ಈ ಬಾರಿ ವಿಚಾರಣೆಗೆ ಹಾಜರಾಗದಿದ್ದರೆ ಬಂಧನ ವಾರಂಟ್ ಜಾರಿ ಮಾಡುವಂತೆ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಪ್ರಕಾರ ವಿಡಿಯೋ ಲಿಂಕ್ ಮೂಲಕ ವಿಚಾರಣೆ ನಡೆಸಲು ಅವಕಾಶ ಇಲ್ಲ. ಝಾಕಿರ್ ನಾಯಕ್ ವಿರುದ್ಧ ಗಂಭೀರ ಆರೋಪಗಳಿರುವುದರಿಂದ ಅವರು ಸ್ವತಃ ವಿಚಾರಣೆಗೆ ಒಳಗಾಗಬೇಕು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಕೋಮುವಾದ ಹೆಚ್ಚಿಸುವ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡುವಂಥ ಭಾಷಣ ಮಾಡಿದ ಆರೋಪವೂ ಝಾಕಿರ್ ಮೇಲಿದ್ದು, ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿ ಝಾಕಿರ್‌ ನಾಯಕ್‍ನನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದೆ. ನಾಯಕ್‌ ಒಡೆತನದ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌(ಐಆರ್‌ಎಫ್‌)ಗೆ ಕಾನೂನುಬಾಹಿರ ಚಟುವಟಿಕೆ ಕಾಯ್ದೆ ಅಡಿ ಕೇಂದ್ರ ಸರ್ಕಾರ ಈಗಾಗಲೇ ನಿಷೇಧ ಹೇರಿದೆ.

Leave a Reply

comments

Related Articles

error: