ಮೈಸೂರು

  ಕಣ್ಮನ ಸೆಳೆದ  ಆರ್ಟಿಕ್ಯುಲೇಟ್ 42ನೇ ನೃತ್ಯೋತ್ಸವ

ಮೈಸೂರು, ಅ.22:- ನಗರದಲ್ಲಿ ಮನೆ ಮಾತಾಗಿರುವ ಆರ್ಟಿಕ್ಯುಲೇಟ್ ನೃತ್ಯೋತ್ಸವದ 42ನೇ ಸರಣಿ ಇತ್ತೀಚೆಗೆ ವೀಣೆ ಶೇಷಣ್ಣ ಭವನ, ಗಾನಭಾರತಿಯಲ್ಲಿ ಯಶಸ್ವಿಯಾಗಿ ನಡೆಯಿತು. ಹೆಸರಾಂತ ನಾಲ್ವರು ನೃತ್ಯಪಟುಗಳು ತಮ್ಮ ನೃತ್ಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡರು.

ಬೆಂಗಳೂರಿನ ಚಿತ್ಕಲ ಸ್ಕೂಲ್ ಆಫ್ ಡಾನ್ಸ್‍ನ ವಿದ್ವಾನ್ ಪಿ.ಪ್ರವೀಣ್‍ಕುಮಾರ್‍  ಶಿಷ್ಯೆ  ಎಂ.ಎಸ್.ವಿದ್ಯಾಲಕ್ಷ್ಮಿ   ತ್ಯಾಗರಾಜರ ಕೃತಿ ‘ನಾದ ತನುಮನಿಷಂ ಶಂಕರಂ’ (ಚಿತ್ತರಂಜನಿ ರಾಗ, ಆದಿತಾಳ) ಎಂಬ ಕೃತಿಯೊಂದಿಗೆ ಪ್ರಾರಂಭಿಸಿ ಸುಮನಸಸೃಂಜನಿ ರಾಗ ಹಾಗೂ ಆದಿತಾಳದಲ್ಲಿ ತಿಲ್ಲಾನಕ್ಕೆ ನರ್ತಿಸಿ, ಕೊನೆಯಲ್ಲಿ ಪುರಂದರದಾಸರ ಕೃತಿ ‘ಕಡಗೋಲ ತಾರೆನ್ನ ಚಿನ್ನವೇ’ಎಂಬ ನೃತ್ಯದೊಂದಿಗೆ ಪ್ರದರ್ಶನ ಮುಕ್ತಾಯಗೊಳಿಸಿದರು.

ಭರತನಾಟ್ಯ ಕಲಾವಿದೆ ಪದ್ಮಭೂಷಣ ಡಾ.ಸರೋಜ ವೈದ್ಯನಾಥನ್‍ ಶಿಷ್ಯೆ ಸ್ನೇಹ ವೆಂಕಟರಮಣಿ ಕೃಷ್ಣ  ಸಿಂಧೂಭೈರವಿ ರಾಗ ಹಾಗೂ ಆದಿತಾಳದಲ್ಲಿ ಸಂಯೋಜಿಸಿದ ಗೋಪಾಲಕೃಷ್ಣ ಭಾರತಿಯವರ ತಮಿಳು ಕೃತಿ ‘ಥಾ ಥೈ ಎಂಡ್ರದುವಾರ್’ ಎಂಬ ಕೃತಿಗೆ ನೃತ್ಯಾಭಿನಯ ನೀಡಿದರು. ತೆಲುಗು ಕೃತಿ ‘ನನ್ನೇ ಪೆನ್ಲಾಡುಚುಮಿ ನಾ ಯಾನಾ ಮುವ್ವಗೋಪಾಲ’ ಎಂಬ ಕೃತಿಗೆ ಅಭಿನಯಿಸಿ, ತೆಲುಗು ರಚನೆ ‘ರಾಧ ಮಾಧವ ರತಿ ಚರಿತಮಿತಿ’ ಗೆ ಹೆಜ್ಜೆ ಹಾಕಿ  ಪ್ರೇಕ್ಷಕರ ಗಮನ ಸೆಳೆದರು.

ಒರಿಸ್ಸಾದ ಭುವನೇಶ್ವರದ ವಿದ್ವಾನ್  ಸೋನಾಲಿ ಮಹಾಪಾತ್ರ  ಶಿಷ್ಯರಾದ ಸತ್ಯ ಪ್ರಕಾಶ್ ಸಾಹೂ   ಖ್ಯಾತ ಒಡಿಸ್ಸಿ ನೃತ್ಯ ಕಲಾವಿದ. ಎರಡು ನೃತ್ಯ ಪ್ರದರ್ಶನ ನೀಡಿ ಜಗನ್ನಾಥನ ಗುಣಗಾನ ಮಾಡಿದರಲ್ಲದೇ, ಆನಂದ ಭೈರವಿ ರಾಗದಲ್ಲಿ ‘ಅಷ್ಠಬಂಧು’ ಶಿವಸ್ತುತಿಗೆ ನರ್ತಿಸಿದರು.                              ಮೈಸೂರಿನ ಕಲಾವಿದೆಯಾಗಿರುವ ಹರ್ಷಿನಿ ಪುರುಷೋತ್ತಮ್   ಆದಿತಾಳದಲ್ಲಿ ಸಂಯೋಜನೆಗೊಂಡ ‘ಏಕ ಶ್ಲೋಕಿ ರಾಮಾಯಣ’ ಎಂಬ ಕೃತಿ ಹಾಗೂ ಕನಕದಾಸರ ಕೃತಿ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ (ಕಂಡಚಾಪು ತಾಳ) ಕೃತಿಗೆ ನೃತ್ಯಾಭಿನಯ ನೀಡಿದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: