ಪ್ರಮುಖ ಸುದ್ದಿ

ಸಂತ್ರಸ್ತರಿಗೆ ತೆರಿಗೆ ಹೊರೆ : ಕೊಡಗು ಮಹಿಳಾ ಜೆಡಿಎಸ್ ಆರೋಪ : ಅ.25 ರಂದು ಪ್ರತಿಭಟನೆ

ರಾಜ್ಯ( ಮಡಿಕೇರಿ) ಅ.22 :- ಮಳೆ ಸಂಕಷ್ಟದ ನಡುವೆಯೂ ಸ್ಥಳೀಯ ಸಂಸ್ಥೆಗಳ ಮೂಲಕ ಸರಕಾರ ದುಬಾರಿ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಜಾತ್ಯಾತೀತ ಜನತದಾಳದ ಮಹಿಳಾ ಘಟಕ, ಸಂತ್ರಸ್ತರನ್ನು ಕಡೆಗಣಿಸುತ್ತಿರುವ ಸರಕಾರದ ವಿರುದ್ಧ ಅ.25 ರಂದು ಮಡಿಕೇರಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ಶಾಂತಿ ಅಚ್ಚಪ್ಪ, ಮಹಾಮಳೆಯ ಪ್ರವಾಹದಿಂದ ಕಂಗೆಟ್ಟಿರುವ ಕೊಡಗಿನ ಸಂತ್ರಸ್ತರು ದುಬಾರಿ ತೆರಿಗೆ ಪದ್ಧತಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾ.ಪಂ, ಪಟ್ಟಣ ಪಂಚಾಯತ್ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ದುಬಾರಿ ತೆರಿಗೆಯನ್ನು ಸಂಗ್ರಹಿಸುತ್ತಿರುವ ಸರಕಾರ ಮಳೆಹಾನಿ ಸಂತ್ರಸ್ತರ ನೋವಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು.
ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಹಿಳಾ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಿ ಸರಕಾರದ ಧೋರಣೆಯನ್ನು ಖಂಡಿಸುವುದಾಗಿ ಶಾಂತಿ ಅಚ್ಚಪ್ಪ ತಿಳಿಸಿದರು.
ಈ ಬಾರಿ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಅನೇಕ ಮಂದಿ ಮನೆ, ಆಸ್ತಿ, ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಅವರು ಮನೆ ಕಳೆದುಕೊಂಡವರಿಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿಕೊಡಲು ಯೋಜನೆ ರೂಪಿಸಿದರು. ಅಲ್ಲದೆ ನಿರಾಶ್ರಿತರಿಗೆ ಬಾಡಿಗೆ ಮನೆಗಾಗಿ ತಲಾ 10 ಸಾವಿರ ರೂ. ಗಳನ್ನು ನೀಡುತ್ತಾ ಬರಲಾಗುತ್ತಿತ್ತು. ಆದರೆ ಈಗಿನ ಸರಕಾರ ಸಂತ್ರಸ್ತರ ಸೌಲಭ್ಯಗಳನ್ನು ಮೊಟಕುಗೊಳಿಸುತ್ತಾ ಬರುತ್ತಿದ್ದು, ಮನೆ ಬಾಡಿಗೆ ಹಣ ನೀಡುವುದನ್ನು ಸ್ಥಗಿತಗೊಳಿಸಿದೆ. ಅಲ್ಲದೆ ನೂತನ ಮನೆಗಳ ನಿರ್ಮಾಣಕ್ಕೆ ಕೇವಲ ತಲಾ 5 ಲಕ್ಷ ರೂ. ನೀಡುವುದಾಗಿ ಹೇಳಿದೆ. ಇದು ರಾಜ್ಯ ಸರ್ಕಾರ ಸಂತ್ರಸ್ತರನ್ನು ಕಡೆಗಣಿಸುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.
ಕೊಡಗಿನ ಜನ ಮಳೆಹಾನಿಯಿಂದ ಸಂಕಷ್ಟದಲ್ಲಿರುವಾಗಲೇ ದುಬಾರಿ ತೆರಿಗೆ ವಿಧಿಸಿ ಮತ್ತಷ್ಟು ಆರ್ಥಿಕ ಒತ್ತಡವನ್ನು ಹೇರಲಾಗುತ್ತಿದೆ ಎಂದು ಶಾಂತಿ ಅಚ್ಚಪ್ಪ ಆರೋಪಿಸಿದರು.
ನೆಲ್ಯಹುದಿಕೇರಿಯಲ್ಲಿ ಸ್ಥಾಪಿಸಿರುವ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರನ್ನು ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಜೆಡಿಎಸ್ ವಿರೋಧಿಸುವುದಾಗಿ ತಿಳಿಸಿದರು. ಮನೆ ಕಳೆದುಕೊಂಡವರಿಗೆ ತಕ್ಷಣ ಶಾಶ್ವತ ಪರಿಹಾರ ಮತ್ತು ಸೂರನ್ನು ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ನಿರಾಶ್ರಿತರು ಬಾಡಿಗೆ ಮನೆಗಳಲ್ಲಿ ಆಶ್ರಯ ಪಡೆದುಕೊಳ್ಳಲು ಸರ್ಕಾರ ತಕ್ಷಣ ಮಾಸಿಕ ತಲಾ 10 ಸಾವಿರ ರೂ.ಗಳನ್ನು ನೀಡಬೇಕು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮೂರು ವರ್ಷಕ್ಕಿಂತ ಹೆಚ್ಚುಕಾಲ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಭ್ರಷ್ಟಾಚಾರಕ್ಕೆ ಮುಕ್ತಿ ಕಾಣಿಸಬೇಕೆಂದು ಶಾಂತಿ ಅಚ್ಚಪ್ಪ ಆಗ್ರಹಿಸಿದರು.
ಜೆಡಿಎಸ್ ಎಸ್‍ಸಿ, ಎಸ್ಟಿ ಘಟಕದ ಜಿಲ್ಲಾ ಮಹಿಳಾ ಅಧ್ಯಕ್ಷೆ ಹೆಚ್.ವಿ.ಜಯ ಮಾತನಾಡಿ, ಈ ಹಿಂದಿನ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರ ರೈತರ ಮತ್ತು ಬಡವರ ಸಾಲಮನ್ನಾ ಮಾಡಿ ಜನಪರ ಸರ್ಕಾರ ಎಂದು ಹೆಸರು ಗಳಿಸಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಸಾಲ ಮನ್ನಾ ಪ್ರಕ್ರಿಯೆಯನ್ನು ಮುಂದುವರೆಸಬೇಕೆಂದು ಅವರು ಒತ್ತಾಯಿಸಿದರು.
ಕೊಡಗು ಮಹಾಮಳೆಯ ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡಿ ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಮಾಡಿಲ್ಲವೆಂದು ಆರೋಪಿಸಿದರು.
ಪೊನ್ನಂಪೇಟೆ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಮಾತನಾಡಿ, ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ನಿರೀಕ್ಷೆಗಳು ಹುಸಿಯಾಗಿದ್ದು, ಸಂತ್ರಸ್ತರು ತಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳಬೇಕೆಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಪೊನ್ನಂಪೇಟೆ ಹೋಬಳಿ ಅಧ್ಯಕ್ಷೆ ಹೆಚ್.ಎನ್.ಮಂಜುಳಾ ನಾಗು, ಮಡಿಕೇರಿ ನಗರಾಧ್ಯಕ್ಷೆ ಸುನಂದ ಹಾಗೂ ಪ್ರಧಾನ ಕಾರ್ಯದರ್ಶಿ ಜೆಸ್ಸಿಂತಾ ಶ್ರೀಧರ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: