ಮೈಸೂರು

ಮೂವರು ಮನೆಗಳವು ಆರೋಪಿಗಳ ಪೈಕಿ ಇಬ್ಬರ ಬಂಧನ : 2.5ಲಕ್ಷರೂ.ಮೌಲ್ಯದ ಚಿನ್ನಾಭರಣ ವಶ

ಮೈಸೂರು,ಅ.23:- ಹುಣಸೂರು ಪೊಲೀಸರು ಮೂವರು ಮನೆಗಳವು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿ ಬಂಧಿತರಿಂದ 2.5ಲಕ್ಷರೂ.ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.

ಬಂಧಿತರನ್ನು ಹುಣಸೂರು ಪಟ್ಟಣದ ವಿ.ಪಿ.ಬೋರೆಯ ನಾಗೇಂದ್ರ ನಾಯಕರ ಪುತ್ರ ಕಿರಣ್ ಮತ್ತು ಚೋಟು ಅವರ ಪುತ್ರ ಅಮಾನ್ ಎಂದು ಗುರುತಿಸಲಾಗಿದ್ದು, ಕಳ್ಳತನ ಕೃತ್ಯದಲ್ಲಿ ಬಾಲಕನೋರ್ವ ಭಾಗಿಯಾಗಿದ್ದು, ಪರಾರಿಯಾಗಿದ್ದಾನೆ.

ಅ.8ರಂದು ಮಂಜುನಾಥ್ ಬಡಾವಣೆಯ ನಿವಾಸಿ ಬೆಳಗಾವಿ ಮೂಲದ ಪ್ರಕಾಶ್ ಕುಟ್ಟಿ ಎಂಬವರು ತಮ್ಮ ಮನೆಯ ಮುಂಬಾಗಿಲು ಒಡೆದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ದೂರು ನೀಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಿರ್ದೇಶನದಂತೆ ಡಿವೈಎಸ್ಪಿ ಕೆ.ಎಸ್.ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸಪೆಕ್ಟರ್ ಕೆ.ಎಸ್.ಪೂವಯ್ಯ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿತ್ತು. ಅ.20ರಂದು ಮಧ್ಯರಾತ್ರಿ 11.30ರ ಸಮಯದಲ್ಲಿ ಪೊಲೀಸರು ಪಟ್ಟಣದ ಮಂಜುನಾಥ್ ಬಡಾವಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸ್ಕೂಟರ್ ನಲ್ಲಿ ಮೂವರು ಅತಿವೇಗವಾಗಿ ಹೋಗುತ್ತಿದ್ದುದನ್ನು ಗಮನಿಸಿದ ಸರ್ಕಲ್ ಇನ್ಸಪೆಕ್ಟರ್ ಕೆ.ಎಸ್.ಪೂವಯ್ಯ ಮತ್ತವರ ತಂಡ ಸ್ಕೂಟರ್ ನ್ನು ಹಿಂಬಾಲಿಸಿ ಅಡ್ಡಗಟ್ಟಿ ಇಬ್ಬರನ್ನು ವಶಕ್ಕೆ ಪಡೆಯಿತು. ಈ ಸಂದರ್ಭದಲ್ಲಿ ಬಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕಾಶ್ ಅವರ ಮನೆಯಲ್ಲಿ ಕಳುವು ಮಾಡಿದ್ದ 43ಗ್ರಾಂ ಚಿನ್ನಾಭರಣ ಮತ್ತು 750ಗ್ರಾಂ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಲಾಗದೆ ತಮ್ಮ ಬಳಿಯೇ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: