ಪ್ರಮುಖ ಸುದ್ದಿ

ಜೀವನದ ಸಂಧ್ಯಾಕಾಲದಲ್ಲಿರುವವರಿಗೆ ಮಾನಸಿಕ ನೆಮ್ಮದಿ ನೀಡಿ : ಜೊಸೇಫ್ ಮ್ಯಾಥ್ಯು ಕರೆ

ರಾಜ್ಯ(ಮಡಿಕೇರಿ)ಅ.23:- ಜೀವನದ ಸಂಧ್ಯಾಕಾಲದಲ್ಲಿರುವ ಹಿರಿಯ ನಾಗರಿಕರಿಗೆ ಮಾನಸಿಕ ನೆಮ್ಮದಿ ದೊರಕಿಸುವ ನಿಟ್ಟಿನಲ್ಲಿ ಪ್ರತಿಯೋರ್ವರು ಗಂಭೀರ ಗಮನ ಹರಿಸಬೇಕು ಎಂದು ರೋಟರಿ ಜಿಲ್ಲೆ 3181 ರ ಗವರ್ನರ್ ಜೊಸೇಫ್ ಮ್ಯಾಥ್ಯು ಕರೆ ನೀಡಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಸಂದರ್ಭ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಜೊಸೇಫ್ ಮ್ಯಾಥ್ಯು, ಬದುಕಿನ ಕೊನೇ ದಿನಗಳಲ್ಲಿ ಹಿರಿಯ ಜೀವಗಳಿಗೆ ಒಂದಿಷ್ಟು ಸಂತೋಷ, ನೆಮ್ಮದಿಯ ಅಗತ್ಯವಿದೆ. ತನ್ನ ಮಕ್ಕಳು, ಕುಟುಂಬದವರ ಶ್ರೆಯೋಭಿವೃದ್ದಿಗಾಗಿ ಜೀವನವಿಡೀ ತ್ಯಾಗ ಮಾಡಿರುವ ಜೀವಗಳಿಗೆ ಕೊನೇ ಕಾಲದಲ್ಲಾದರೂ ಒಂದಿಷ್ಟು ನೆಮ್ಮದಿಯನ್ನು ನೀಡುವುದು ಪ್ರತಿಯೋರ್ವರ ಕರ್ತವ್ಯವಾಗಬೇಕೆಂದು ಹೇಳಿದರು. ಮಕ್ಕಳ ಪಾಲನೆಗೆ ಪೋಷಕರು ತೆಗೆದುಕೊಂಡ ಪರಿಶ್ರಮದ ಕಿಂಚಿತ್ತಾದರೂ ಹಿರಿಯರ ಆರೈಕೆಗೆ ಮಕ್ಕಳು ಕಾಳಜಿ ವಹಿಸಬೇಕು, ಯಾವುದೇ ಕಾರಣಕ್ಕೂ ಹಿರಿಯರನ್ನು ಕಡೆಗಾಣಿಸದಿರಿಎಂದು ಸಲಹೆ ನೀಡಿದ ಜೊಸೇಫ್ ಮ್ಯಾಥ್ಯು, ಇಂದಿನ ಆಧುನಿಕ ದಿನಗಳಲ್ಲಿ ಮಕ್ಕಳಿಂದಲೇ ಹಿರಿಯ ಜೀವಗಳು ತಿರಸ್ಕೃತರಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಂಟಿಕೊಪ್ಪದಲ್ಲಿ ವಿಕಾಸ ಜನಸೇವಾ ಟ್ರಸ್ಟ್ ನ ಆಶ್ರಯಧಾಮದಲ್ಲಿ 20 ಹಿರಿಯ ನಾಗರಿಕರನ್ನು ಸಲಹುತ್ತಿರುವ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ರೋಟರಿ ಜಿಲ್ಲಾ ಗವರ್ನರ್, ಇಂಥ ಸಂಸ್ಥೆಗೆ ಮತ್ತಷ್ಟು ನೆರವು ನೀಡಬೇಕೆಂದು ಆಶಿಸಿದರು.

ರೋಟರಿ ಜಿಲ್ಲೆಯಲ್ಲಿ ಈ ವರ್ಷ ಜೀವನ್ ಸಂಧ್ಯಾ ಹೆಸರಿನಲ್ಲಿ ಹಿರಿಯ ನಾಗರಿಕರ ಹಿತಕಾಯುವ ಯೋಜನೆ ರೂಪಿಸಿರುವುದಾಗಿ ಮಾಹಿತಿ ನೀಡಿದ ಜೋಸೇಫ್ ಮ್ಯಾಥ್ಯು, ಸೇವ್ ಎ ಲೈಫ್ ಎಂಬ ಮತ್ತೊಂದು ಯೋಜನೆ ಮುಖಾಂತರವೂ ಪ್ರಾಣಾಪಾಯದಲ್ಲಿರುವವರ ರಕ್ಷಣೆಗೆ ಯೋಜನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ರೋಟರಿ ವಲಯ 6 ರ ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿ, ಜನಸೇವೆಯೇ ರೋಟರಿ ಸೇವೆ ಕೂಡ ಆಗಿದ್ದು, ಜಗತ್ತಿನಾದ್ಯಂತ ಜನರಿಗೆ ಅಗತ್ಯವಾದ ಸಹಾಯವನ್ನು ವಿವಿಧ ಯೋಜನೆಗಳ ಮುಖಾಂತರ ರೋಟರಿ ಕ್ಲಬ್ ಗಳು ಮಾಡುತ್ತಾ ಬಂದಿದೆ ಎಂದರು. ಸ್ವಾರ್ಥ ರಹಿತ ಸೇವೆಯೇ ರೋಟರಿ ಸದಸ್ಯರ ಗುರಿಯಾಗಿರಬೇಕೆಂದು ಆಶಿಸಿದ ನಾಗೇಶ್, ಮನುಷ್ಯತ್ವವೇ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ರೋಟರಿ ಜಿಲ್ಲೆ 3181 ನಲ್ಲಿ ಜೀವನ್ ಸಂಧ್ಯಾ ಮತ್ತು ಸೇವ್ ಎ ಲೈಫ್ ನಂಥ ಯೋಜನೆಗಳ ಮೂಲಕ ವಿಭಿನ್ನ ಕಾಯ9ಕ್ರಮ ಹಮ್ಮಿಕೊಂಡಿರುವುದಾಗಿ ಮಾಹಿತಿ ನೀಡಿದರು.

ರೋಟರಿ ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ರೋಟರಿ ಜಿಲ್ಲೆಯಲ್ಲಿಯೇ ಅತ್ಯಂತ ಸಕ್ರಿಯ ಕ್ಲಬ್ ಗಳಲ್ಲೊಂದಾಗಿದ್ದು, ವಿಭಿನ್ನ ಕಾರ್ಯಯೋಜನೆಗಳಿಗೆ ಹೆಸರುವಾಸಿಯಾಗಿದೆ ಎಂದು ಶ್ಲಾಘಿಸಿದರು. ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಸ್ವಚ್ಛತೆ ಕಾಪಾಡುವ ಓಬಳಿ, ಕೋರಂಗಾಲ ದುರಂತದಲ್ಲಿ 6 ಮಂದಿಯ ಜೀವವನ್ನು ತನ್ನ ಪ್ರಾಣವನ್ನೂ ಲೆಕ್ಕಿಸದೇ ರಕ್ಷಿಸಿದ ಕಾಳನ ರವಿ ಮತ್ತು ಶನಿವಾರಸಂತೆಯ ಪ್ರಗತಿಪರ ಕೃಷಿಕ ಎ.ಡಿ.ಮೋಹನ್ ಅವರನ್ನು ಸನ್ಮಾನಿಸಿದ್ದಕ್ಕಾಗಿ ಮಿಸ್ಟಿ ಹಿಲ್ಸ್ ತಂಡವನ್ನು ಅನಿಲ್ ಎಚ್.ಟಿ. ಪ್ರಶಂಸಿಸಿದರು.

ರೋಟರಿ ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ ಮಾತನಾಡಿ, ರೋಟರಿ ಜಿಲ್ಲಾ ಗವರ್ನರ್ ಸ್ವಾರ್ಥ ರಹಿತ ಸೇವೆಗೆ ಮಾದರಿಯಾಗಿದ್ದು ಹೀಗಾಗಿಯೇ ರೋಟರಿ ಜಿಲ್ಲೆಯಲ್ಲಿ ನೂರಾರು ಜನಪರ ಕಾರ್ಯಕ್ರಮಗಳು ಯಶಸ್ವಿಯಾಗಿ ಆಯೋಜಿಸಲ್ಪಡುತ್ತಿದೆ ಎಂದು ಶ್ಲಾಘಿಸಿದರು.

ಎಸ್.ಎಂ. ಚೇತನ್ ಸಂಪಾದಕತ್ವದಲ್ಲಿ ಪ್ರಕಟಿತ ಮಿಸ್ಟಿ ಹಿಲ್ಸ್ ನ ರೋಟೋ ಮಿಸ್ಟ್ ವಾರ್ತಾ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್.ಜಗದೀಶ್ ಪ್ರಶಾಂತ್ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು. ರೋಟರಿ ವಲಯ 6 ರ 13 ರೋಟರಿ ಕ್ಲಬ್ ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಿಸ್ಟಿ ಹಿಲ್ಸ್ ನಿಂದ ಸಾಧಕರಿಗೆ ಸನ್ಮಾನ

ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಡಿಕೇರಿಯ ಸ್ವಚ್ಛತೆ ಕಾಪಾಡುವಲ್ಲಿ ಹಲವಾರು ವರ್ಷಗಳಿಂದ ಕಾರ್ಯತತ್ಪರಗಾರಿರುವ ಹಿರಿಯ ಪೌರಸಿಬ್ಬಂದಿ ಓಬಳಿ, ಕೋರಂಗಾಲ ಭೂಕುಸಿತ ಸಂದರ್ಭ ಮಣ್ಣಿನಡಿ ಸಿಲುಕಿದ್ದ 6 ಮಂದಿಯ ಪ್ರಾಣ ರಕ್ಷಿಸಿದ ಭಾಗಮಂಡಲದ ಕಾಳನರವಿ, ಶನಿವಾರಸಂತೆಯಲ್ಲಿ ಪ್ರಗತಿ ಪರ ಕೃಷಿಕರಾಗಿ, ಹಲವಾರು ವಿಶಿಷ್ಟ ಕೃಷಿ ಯಂತ್ರಗಳನ್ನು ಕಂಡುಹಿಡಿದು ವಿಭಿನ್ನ ರೀತಿಯಲ್ಲಿ ಕೃಷಿ ಯೋಜನೆ ಜಾರಿಗೊಳಿಸಿರುವ ಎ.ಡಿ.ಮೋಹನ್ ಅವರನ್ನು ಮಡಿಕೇರಿ ಮಿಸ್ಟಿ ಹಿಲ್ಸ್ ವತಿಯಿಂದ ಜಿಲ್ಲಾ ರಾಜ್ಯಪಾಲ ಜೊಸೇಫ್ ಮ್ಯಾಥ್ಯು, ಮಾಜಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ, ವಲಯ 6 ರ ಸಹಾಯಕ ಗವರ್ನರ್ ಪಿ.ನಾಗೇಶ್, ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ.ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಸನ್ಮಾನಿಸಿ ಗೌರವಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: