ಪ್ರಮುಖ ಸುದ್ದಿ

ಇಂದು ಮತ್ತೆ 17 ಮಂದಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

ದೇಶ(ನವದೆಹಲಿ)ಅ.24:-  ಸುಪ್ರೀಂ ಕೋರ್ಟ್ ಇಂದು ಮತ್ತೆ ರಾಜ್ಯದ  17 ಮಂದಿ ಕಾಂಗ್ರೆಸ್ ಮತ್ತು ಜೆಡಿಸ್ ಪಕ್ಷದ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ನಡೆಸಲಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಸಂಜೀವ್ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಎದುರು ಬುಧವಾರ  ಕಾಂಗ್ರೆಸ್​ ಪರ ಕಪಿಲ್​ ಸಿಬಲ್​ ಮತ್ತು ಅನರ್ಹ ಶಾಸಕರ ಪರ ಮುಕುಲ್​ ರೋಹಟ್ಗಿ ವಾದ ಮಂಡಿಸಿದರು. ಜೊತೆಗೆ ಇನ್ನೂ ಹೆಚ್ಚಿನ ವಾದ ಮಂಡನೆಯ ಇಂಗಿತ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಗುರುವಾರಕ್ಕೆ ವಿಚಾರಣೆ ಮುಂದೂಡಲಾಗಿತ್ತು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ವಿಳಂಬವಾದ ಹಿನ್ನೆಲೆಯಲ್ಲಿ 15 ಕ್ಷೇತ್ರಗಳ ಉಪಚುನಾವಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಲಾಗಿತ್ತು. ಮಂಗಳವಾರವೇ ಅರ್ಜಿ ವಿಚಾರಣೆ ನಿಗದಿಯಾಗಿದ್ದರೂ ಕಾಂಗ್ರೆಸ್​ ಪರ ವಕೀಲ ಕಪಿಲ್​ ಸಿಬಲ್​ ಕೋರ್ಟ್​ಗೆ ಆಗಮಿಸಲು ಸಾಧ್ಯವಾಗದ ಕಾರಣ ಬುಧವಾರಕ್ಕೆ ಮುಂದೂಡಲಾಗಿತ್ತು. ಬೆಳಿಗ್ಗೆಯೇ ನಡೆಯಬೇಕಿದ್ದ ವಿಚಾರಣೆಯನ್ನು ಮಧ್ಯಾಹ್ನ 2ಗಂಟೆಗೆ ನಿಗದಿಪಡಿಸಲಾಗಿತ್ತು.

ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಸಂಬಂಧಪಟ್ಟಂತೆ ಎಲ್ಲ ವಾದ-ಪ್ರತಿವಾದಗಳನ್ನೂ ಬುಧವಾರವೇ ಮುಗಿಸಬೇಕು ಎಂದು ನ್ಯಾಯಮೂರ್ತಿ ಎನ್​.ವಿ. ರಮಣ ಸೂಚನೆ ನೀಡಿದ್ದರು. ಹಾಗೇ 15 ಕ್ಷೇತ್ರಗಳಿಗೆ ಉಪಚುನಾವಣೆ ಸಂಬಂಧ ರಾಜ್ಯ ಹೈಕೋರ್ಟ್​ಗೆ ಕಾಂಗ್ರೆಸ್​ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಧೀಶರು, ಅನರ್ಹ ಶಾಸಕರು ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿ ವಿಚಾರಣೆ ನಿಗದಿಯಾಗಿರುವಾಗ ನೀವೇಕೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದೀರಿ ಎಂದು ಪ್ರಶ್ನಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: