ಮೈಸೂರು

ರತ್ನ ಖಚಿತ ಸಿಂಹಾಸನದ ಅವರೋಹಣ : ಸೂಕ್ತ ಪೊಲೀಸ್‌ ಬಂದೋಬಸ್ತ್ ನಲ್ಲಿ ಸ್ಟ್ರಾಂಗ್‌ ರೂಂಗೆ

ಮೈಸೂರು, ಅ.24:- ಸೆ.25 ರಂದು ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ನೆಲಮಾಳಿಗೆಯಿಂದ ದರ್ಬಾರ್‌ ಹಾಲ್‌ಗೆ ತಂದು ಜೋಡಿಸಲಾಗಿದ್ದ ರತ್ನ ಖಚಿತ ಸಿಂಹಾಸನದ ಅವರೋಹಣ ಕಾರ್ಯಕ್ರಮ ನಿನ್ನೆ ನಡೆಯಿತು.

ಈ ವೇಳೆ ನಾನಾ ಧಾರ್ಮಿಕ ಆಚರಣೆಗಳು ನೆರವೇರಿದವು. ಸಿಂಹಾಸನ ಅವರೋಹಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅರಮನೆ ಕನ್ನಡಿ ತೊಟ್ಟಿಯಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ನೆರವೇರಿಸಲಾಯಿತು. ಬಳಿಕ ದರ್ಬಾರ್‌ ಹಾಲ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಕಂಗೊಳಿಸುತ್ತಿದ್ದ ಸಿಂಹಾಸನ ವನ್ನು ಮೊದಲಿಗೆ 14 ಬಿಡಿ ಭಾಗಗಳಾಗಿ ವಿಂಗಡಿಸಲಾಯಿತು. ಬಳಿಕ ಬಿಡಿ ಭಾಗಗಳನ್ನು ಸೂಕ್ತ ಪೊಲೀಸ್‌ ಬಂದೋಬಸ್ತ್ ನಲ್ಲಿ ಸುರಕ್ಷಿತವಾಗಿ ಸ್ಟ್ರಾಂಗ್‌ ರೂಂಗೆ ಸಾಗಿಸಲಾಯಿತು.

ಈ ಬಿಡಿ ಭಾಗಗಳನ್ನು ಮುಂದಿನ ದಸರಾ ಮಹೋತ್ಸವಕ್ಕೆ ಮತ್ತೆ ಹೊರಕ್ಕೆ ತೆಗೆಯಲಾಗುತ್ತದೆ. ಸಿಂಹಾಸನ ಅವರೋಹಣದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದ ಮಧ್ಯಾಹ್ನ ಎರಡು ಗಂಟೆವರೆಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ದರ್ಬಾರ್‌ ಹಾಲ್‌ನಿಂದ ಸ್ಟ್ರಾಂಗ್‌ ರೂಂವರೆಗಿನ ಸಿಸಿ ಕ್ಯಾಮೆರಾಗಳನ್ನು ಪರದೆಯಿಂದ ಮುಚ್ಚಲಾಗಿತ್ತು. ಒಂದೊಂದು ಬಿಡಿಭಾಗವನ್ನೂ ಸ್ಟ್ರಾಂಗ್‌ ರೂಂಗೆ ಕೊಂಡೊಯ್ಯುವಾಗ ಶಸ್ತ್ರಸಜ್ಜಿತ ಪೊಲೀಸರು ಬಿಗಿಭದ್ರತೆ ಒದಗಿಸಿದರು. ಸೆ. 29 ರಿಂದ ಅ.6 ರವರೆಗೆ ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್‌ ನಡೆಸಿ, ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: