ದೇಶಪ್ರಮುಖ ಸುದ್ದಿ

ಕೇರಳ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ

ಕೊಚ್ಚಿ,ಅ.24-ಕೇರಳದ 5 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 5 ಕ್ಷೇತ್ರಗಳ ಪೈಕಿ 4ರಲ್ಲಿ ಭಾರೀ ಮುನ್ನಡೆ ಸಾಧಿಸಿ ಗೆಲುವಿನ ಸನಿಹದಲ್ಲಿದೆ.

ಆಡಳಿತರೂಢ ಎಲ್​ಡಿಎಫ್ ಮೈತ್ರಿಕೂಟ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಎಲ್​ಡಿಎಫ್ ಮೈತ್ರಿಕೂಟ ಅಚ್ಚರಿಯ ಬೆಳವಣಿಗೆಯಲ್ಲಿ ಬಹುಮತ ಗಳಿಸಿ ಸರ್ಕಾರ ರಚಿಸಿತ್ತು. ಆದರೆ, ಪ್ರಸ್ತುತ ಉಪ ಚುನಾವಣೆಯಲ್ಲಿ ಎಲ್​ಡಿಎಫ್​ ಗೆ ಹಿನ್ನಡೆ ಉಂಟಾಗಿರುವುದು ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಇರುವುದನ್ನು ಸ್ಪಷ್ಟಪಡಿಸಿದೆ. ಇನ್ನೂ ಕೇರಳದಲ್ಲಿ ಖಾತೆ ತೆರೆಯುವ ಮಹತ್ವಾಕಾಂಕ್ಷೆಯಲ್ಲಿದ್ದ ಬಿಜೆಪಿ ಮತ್ತೊಮ್ಮೆ ನಿರಾಸೆ ಅನುಭವಿಸಿದೆ.

ಕೇರಳದ ಮಂಜೇಶ್ವರ, ಎರ್ನಾಕುಲಂ, ಆರೂರ್, ಕೋನ್ನಿ ಮತ್ತು ವಟ್ಟಿಯಾರ್ಕಾವು ಎಂಬ 5 ಕ್ಷೇತ್ರಗಳಿಗೆ ಅ. 21 ರಂದು ಉಪ ಚುನಾವಣೆ ನಡೆದಿತ್ತು. ಮಂಜೇಶ್ವರ ಕ್ಷೇತ್ರದ ಶಾಸಕ ಮೃತಪಟ್ಟಿದ್ದ ಕಾರಣ ಈ ಕ್ಷೇತ್ರ ತೆರವಾಗಿದ್ದರೆ, ಉಳಿದ ನಾಲ್ಕು ಕ್ಷೇತ್ರಗಳ ಶಾಸಕರು ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕಾರಣ ತೆರವಾಗಿದ್ದ ಕ್ಷೇತ್ರಗಳಿಗೆ ಕಳೆದ ಸೋಮವಾರ ಉಪ ಚುನಾವಣೆ ನಡೆಸಲಾಗಿತ್ತು. ಜನ ಭಾರೀ ಮಳೆಯನ್ನೂ ಲೆಕ್ಕಿಸದೆ ಮತ ಚಲಾಯಿಸಿದ್ದರು.

ಈ ಐದು ಕ್ಷೇತ್ರದ ಉಪ ಚುನಾವಣೆ ಫಲಿತಾಂಶ 2021ರಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. (ಎಂ.ಎನ್)

 

Leave a Reply

comments

Related Articles

error: