
ಮೈಸೂರು
ಪರಿಸರವನ್ನು ರಕ್ಷಿಸಿ, ಪ್ರಜೆಗಳ ಬೇಕು ಬೇಡಗಳನ್ನು ಕೂಡ ಪೂರೈಸಿ ಸಮತೋಲನ ಕಾಯ್ದುಕೊಂಡು ಹೋಗುವುದು ಬಹಳ ಅವಶ್ಯ : ಬಿ.ಪಿ.ದೇವಮಾನೆ ಅಭಿಮತ
ಪರಿಸರ ಸಂರಕ್ಷಣೆಯಲ್ಲಿ ಕಾನೂನು ಜಾರಿಯ ಸವಾಲುಗಳು’ ಕಾರ್ಯಾಗಾರ
ಮೈಸೂರು,ಅ.24:- ಜನಸಂಖ್ಯೆ ಬೆಳೆದಂತೆ, ತಾಂತ್ರಿಕತೆ ಬೆಳೆದಂತೆ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರವನ್ನು ರಕ್ಷಿಸಿ, ಪ್ರಜೆಗಳ ಬೇಕು ಬೇಡಗಳನ್ನು ಕೂಡ ಪೂರೈಸಿ ಸಮತೋಲನ ಕಾಯ್ದುಕೊಂಡು ಹೋಗುವುದು ಬಹಳ ಅವಶ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಅಭಿಪ್ರಾಯಪಟ್ಟರು.
ಅವರಿಂದು ಸುಣ್ಣದ ಕೇರಿಯಲ್ಲಿರುವ ಎಬಿವಿಪಿ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಹಮ್ಮಿಕೊಳ್ಳಲಾದ’ ಪರಿಸರ ಸಂರಕ್ಷಣೆಯಲ್ಲಿ ಕಾನೂನು ಜಾರಿಯ ಸವಾಲುಗಳು’ ಕುರಿತು ಕಾನೂನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಬದುಕಲು ಮುಖ್ಯವಾಗಿ ಶುದ್ಧ ಗಾಳಿ, ಶುದ್ಧನೀರು, ಶುದ್ಧ ಆಹಾರ ಬೇಕು. ಇವೆಲ್ಲ ಸ್ವಚ್ಛವಾಗಿ ಫ್ಯಾಕ್ಟರಿಗಳಲ್ಲಿ ಸಿಗಲ್ಲ. ನಿಸರ್ಗದಲ್ಲಿ ಸಿಗಲಿದೆ. ನಿಸರ್ಗವನ್ನು ಕಾಯ್ದುಕೊಂಡರೆ ನಿಜವಾದ ಸ್ವರೂಪದಲ್ಲಿ ಸಿಗಲಿದೆ. ಇಲ್ಲದಿದ್ದಲ್ಲಿ ಪರಿಶುದ್ಧ ರೂಪದಲ್ಲಿ ಸಿಗುವುದು ಕಷ್ಟ. ನಾವು ಉಸಿರಾಡುವ ಗಾಳಿ ಕೂಡ ಧೂಳು, ಹೊಗೆಗಳಿಂದ ಕಲುಷಿತವಾಗಿದೆ. ಹಿಂದೆಲ್ಲ ನೀರನ್ನು ಮಾರಾಟ ಮಾಡುವವರು ಮಹಾಪಾಪಿಗಳಾಗಿದ್ದರು. ಆದರೆ ಈಗ ನೀರಿನ ವ್ಯಾಪಾರ ದೊಡ್ಡ ವ್ಯಾಪಾರವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಷ್ಟೇ ದುಡ್ಡಿದ್ದರೂ ಒಳ್ಳೆಯ ಆಹಾರ ಸಿಗುತ್ತಿಲ್ಲ. ಅದರಲ್ಲಿ ರಸಾಯನಿಕಗಳು ಮಿಶ್ರಣವಾಗುತ್ತಿವೆ. ಉತ್ತಮ ಆಹಾರ ಸಿಗಲು ಸಾಧ್ಯವಿಲ್ಲ. ದೇಶಿ ಆಹಾರ, ದೇಶಿ ಬೆಳೆಯನ್ನು ಬೆಳೆಯುವವರಿಗೆ ಮಾತ್ರ ಹೈಬ್ರಿಡ್ ಯಾವುದು? ದೇಶಿ ಯಾವುದು ಎನ್ನುವುದು ತಿಳಿಯುತ್ತದೆ. ಹುಟ್ಟುವಾಗಲೇ ಹೈಬ್ರಿಡ್ ತಿನ್ನುತ್ತ ಬಂದಲ್ಲಿ ಅವರಿಗೆ ದೇಶಿಯ ಬೆಳೆಯ ಅರಿವಿರುವುದಿಲ್ಲ. ಪರಿಸರ ಸಂರಕ್ಷಣೆ ಮಾಡುವುದು ಅಂದರೆ ಗಾರ್ಡನ್ ಸಂರಕ್ಷಣೆ ಮಾಡುವುದು ಅಂತಲ್ಲ. ಮನುಷ್ಯನಿಗೆ ಮೂಲಭೂತ ಅವಶ್ಯಕತೆಗಳನ್ನು ಒಳ್ಳೆಯ ರೂಪದಲ್ಲಿ ಸಿಗುವ ವಾತಾವರಣ ನಿರ್ಮಿಸಬೇಕು ಎಂದರು.
ಸಂವಿಧಾನದ ಆಶಯಗಳ ಮೂಲಕ ಪರಿಸರ ಸಂರಕ್ಷಣೆ ಮಾಡಬಹುದು.ದೇಶದ ಶ್ರೇಷ್ಠ ಕಾನೂನು ಸಂವಿಧಾನ. ನಾಲ್ಕು ಮಹಾನ್ ವ್ಯಕ್ತಿಗಳ ತತ್ವಾದರ್ಶದ ಮೇಲೆ ನಿರ್ಮಾಣವಾಗಿದೆ. ಬುದ್ಧನ ಧಮ್ಮ, ಬಸವಣ್ಣನವರ ಸಮಾನತೆ, ಗಾಂಧೀಜಿಯವರ ಅಹಿಂಸೆ,ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಇವರ ತತ್ವ ಆಧರಿಸಿ ಸಂವಿಧಾನ. ನಮಗೆ ನಮ್ಮ ಅಜ್ಜನ, ಅವನ ತಂದೆಯ ಹೆಸರು ತಿಳಿದಿರಲ್ಲ. ಆದರೆ ಬುದ್ಧನ ತಂದೆಯ, ಬಸವಣ್ಣನವರ ತಂದೆತಾಯಿಯ ಹೆಸರು ನೆನಪಿರತ್ತೆ. ಅದಕ್ಕೆ ಕಾರಣ ಅವರು ಸಮಾಜದ ಏಳ್ಗೆಗಾಗಿ ಹೋರಾಟ ನಡೆಸಿದವರು. ನಾವು ಸಮಾಜಕ್ಕಾಗಿ ಏನಾದರೂ ಮಾಡಿದರೆ ಮಾತ್ರ ಸಮಾಜ ನಮ್ಮನ್ನು ಸ್ಮರಿಸತ್ತೆ. ನಾವು ಸ್ವಾರ್ಥಿಗಳಾಗಿ, ಸ್ವೇಚ್ಛೆಯಾಗಿ ಬದುಕಿದರೆ ಸಮಾಜ ನಾವು ಸತ್ತ ಮರುದಿನವೇ ನಮ್ಮನ್ನು ಮರೆಯತ್ತೆ. ಕಾನೂನು ವಿದ್ಯಾರ್ಥಿಗಳಾದ ನೀವು ಸಮಾಜಕ್ಕೆ ನ್ಯಾಯ ಕೊಡುವ ವ್ಯಕ್ತಿಗಳಾಗಿ, ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ಕೊಡಲು ಬದ್ಧರಾಗಿ ಎಂದರು. ಪ್ರತಿಯೊಬ್ಬ ನಾಗರಿಕರ ಘನತೆ ಎತ್ತಿ ಹಿಡಿಯಬೇಕು. ದೇಶದ ಏಕತೆ, ಐಕ್ಯತೆ ಎತ್ತಿ ಹಿಡಿಯಬೇಕು. ಭ್ರಾತೃತ್ವ ಬೆಳೆಸಬೇಕು ಎಂದು ತಿಳಿಸಿದರು. ಒಳ್ಳೆಯವರು, ಕೆಟ್ಟವರೆಂಬ ಅಂತರ ಸೃಷ್ಟಿಸುವ ವ್ಯವಸ್ಥಿತ ಜಾಲವಿದ್ದು, ಯುವಕರು ಈ ಕುರಿತು ಎಚ್ಚರವಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಕಾನೂನು ವಿಭಾಗದ ಡೀನ್ ಡಾ.ಸಿ.ಬಸವರಾಜ್ ಮಾತನಾಡಿ ನಾವು ಬದುಕಲು ಬೇಕಾಗಿರುವ ಪ್ರತಿಯೊಂದು ವಸ್ತು ಕೂಡ ಪರಿಸರವನ್ನು ಸೇರಿದೆ. ನಮ್ಮ ಅಸ್ತಿತ್ವಕ್ಕೆ ಉಳಿವಿಗೆ ಬೇಕಾಗಿರುವುದು ಪರಿಸರ. ಇಂದು ಉತ್ತಮ ನೀರು ಸಿಗುತ್ತಿಲ್ಲ. ನೀರಿಲ್ಲದೆ ನಮ್ಮ ಅಸ್ತಿತ್ವವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ನೀರನ್ನು ಉಳಿಸಬೇಕು. ಮಾಲಿನ್ಯದಿಂದ ರಕ್ಷಿಸಬೇಕು. ನೀರು ಮಾಲಿನ್ಯಯುಕ್ತವಾದರೆ ಏನಾಗಲಿದೆ ಎಂಬುದನ್ನು ಊಹಿಸಿ. ಗಾಳಿ ಕೂಡ ಅಷ್ಟೇ ಮುಖ್ಯ. ಮಾಲಿನ್ಯಯುಕ್ತವಾಗಿದ್ದರೆ ಬದುಕಲು ಸಾಧ್ಯವಿಲ್ಲ. 1986ರಲ್ಲಿ ಪರಿಸರ ಸಂರಕ್ಷಿಸಲು ಕಾಯ್ದೆ ತಂದರು. ಕಾನೂನು ಮಾಡುತ್ತಿದ್ದರೂ ಪರಿಸರ ಮಾತ್ರ ನಾಶವಾಗುತ್ತಿದೆ. ಇದಕ್ಕೆ ಕಾರಣ ಮನುಷ್ಯನ ಪ್ರವೃತ್ತಿ. ಇಲ್ಲದಿದ್ದಲ್ಲಿ ಕಾನೂನುಗಳ ಅಗತ್ಯವಿರಲಿಲ್ಲ. ಸಂವಿಧಾನದ ಆಶಯಗಳನ್ನು ಪಾಲಿಸಿ. ಪರಿಸರ ಸಂರಕ್ಷಣೆ ಮೂಲಭೂತ ಹಕ್ಕಾಗಿ ಕೊಟ್ಟಿದ್ದಾರೆ. ಸರ್ಕಾರಗಳೂ ಕೂಡ ಕರ್ತವ್ಯ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಬಿವಿಪಿ ನಗರ ಘಟಕದ ಅಧ್ಯಕ್ಷ ಮಹದೇವಪ್ರಸಾದ್, ನಗರ ಸಂಚಾಲಕ ಶ್ರೀರಾಮ ಅಂಗೀರಸ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)