ಕ್ರೀಡೆ

ಬಾಂಗ್ಲಾ ವಿರುದ್ಧದ ಟಿ-20 ಸರಣಿಗೆ ಶಿವಂ ದುಬೆ ಆಯ್ಕೆ

ಮುಂಬೈ,ಅ.25-ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗಾಗಿ ಟೀಂ ಇಂಡಿಯಾ ಪ್ರಕಟಗೊಂಡಿದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ-20 ಸರಣಿಗಾಗಿ 26ರ ಹರೆಯದ ಶಿವಂ ದುಬೆ ಆಯ್ಕೆಯಾಗಿದ್ದಾರೆ. ಎಡಗೈ ಬ್ಯಾಟಿಂಗ್ ಹಾಗೂ ಬಲಗೈ ಮಧ್ಯಮ ಗತಿಯ ವೇಗಿದ ಬೌಲರ್ ಆಗಿರುವ ಶಿವಂ, ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತು ಮಾಡಿದ್ದಾರೆ. ಗಾಯಾಳು ಹಾರ್ದಿಕ್ ಪಾಂಡ್ಯ ಚೇತರಿಕೆಯ ಹಾದಿಯಲ್ಲಿರುವುದು ಮತ್ತು ವಿಜಯ್ ಶಂಕರ್‌ರನ್ನು ಕಡೆಗಣಿಸಿರುವ ಹಿನ್ನಲೆಯಲ್ಲಿ ಶಿವಂ ದುಬೆಗೆ ಚೊಚ್ಚಲ ಅವಕಾಶ ದೊರಕಿದೆ.

ಸಂಜು ಸ್ಯಾಮ್ಸನ್ ಕೊಹ್ಲಿ ಸ್ಥಾನ ತುಂಬಿದರೆ, ವಿಕೆಟ್ ಕೀಪರ್​ ಆಗಿ ರಿಷಬ್ ಪಂತ್​​ ಅವರನ್ನೇ ತಂಡದಲ್ಲಿ ಮುಂದುವರೆಸಲಾಗಿದೆ.

2019ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಶಿವಂ ದುಬೆ ತಮ್ಮ ಸಹಜ ಶೈಲಿಯ ಆಕ್ರಮಣಕಾರಿ ಆಟದಿಂದಲೇ ಗಮನ ಸೆಳೆದಿದ್ದರು. ಇದೀಗ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

ಭಾರತ ಟಿ-20​ ತಂಡ:

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಕ್ರುನಾಲ್ ಪಾಂಡ್ಯ, ಯುಜುವೇಂದ್ರ ಚಹಲ್, ರಾಹುಲ್ ಚಹಾರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದುಲ್ ಠಾಕೂರ್.

ಶಿವಂ ದುಬೆ ಮಾತನಾಡಿ, ಈ ಅವಕಾಶ ನೀಡಿದ್ದಕ್ಕಾಗಿ ದೇವರು ಹಾಗೂ ಅಪ್ಪನಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ವಿಶೇಷವಾಗಿಯೂ ದೇಶಕ್ಕಾಗಿ ಆಡುವುದು ನನ್ನ ತಂದೆಯ ಕನಸಾಗಿತ್ತು. ಅದೀಗ ನನಸಾಗುತ್ತಿದೆ ಎಂದು ಭಾವನಾತ್ಮಕವಾಗಿ ನುಡಿದರು.

ನನಗೆ ಸಹಜ ಶಕ್ತಿಯಿದ್ದು, ಅದರತ್ತ ಹೆಚ್ಚಿನ ಪರಿಶ್ರಮ ವಹಿಸಲಿದ್ದೇನೆ. ನಾನು ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗುವುದನ್ನುಅಪ್ಪ ಬಯಸಿದ್ದರು. ಅದನ್ನೇ ಜೀವನ ಶೈಲಿಯಾಗಿ ಮಾಡಿದ್ದೇನೆ. ಪವರ್ ಹಿಟ್ಟಿಂಗ್ ಕೂಡಾ ನನಗಿಷ್ಟ ಎಂದು ಹೇಳಿದರು.

ಸದ್ಯ ನಾನು ಖುಷಿಯಾಗಿದ್ದು, ಈ ಆಯ್ಕೆಯನ್ನು ನಿರೀಕ್ಷೆ ಮಾಡುತ್ತಿದ್ದೆ. ಇದೀಗ ಶೇ.100ರಷ್ಟು ನನ್ನ ಫಿಟ್ನೆಸ್ ಹಾಗೂ ಕಠಿಣ ಪರಿಶ್ರಮದತ್ತ ಗಮನ ಹರಿಸಲಿದ್ದೇನೆ. ನಾಯಕ ವಿರಾಟ್ ಕೊಹ್ಲಿ ನನಗೆ ಬೆಂಬಲ ನೀಡಿದ್ದಾರೆ. ಒತ್ತಡ ಎದುರಿಸಿದರೆ ಅಥವಾ ಏನೇ ಸಮಸ್ಯೆ ಬಂದರೂ ವಿರಾಟ್ ಕೊಹ್ಲಿ ಬಳಿ ಮಾತನಾಡುತ್ತಿದ್ದೆ. ಅವರು ನನಗೆ ಸಲಹೆಯನ್ನು ನೀಡುತ್ತಿದ್ದರು ಎಂದಿದ್ದಾರೆ.

2015-16ರ ಸಯ್ಯದ್ ಮುಶ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ದುಬೆ ಟ್ವೆಂಟಿ-20 ಡೆಬ್ಯು ಮಾಡಿದ್ದರು. ಬಳಿಕ 2016-17ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆಗೈದರು. ಅದೇ ಸಾಲಿನಲ್ಲಿ ಮುಂಬೈ ಪರ ರಣಜಿ ಟ್ರೋಫಿಯಲ್ಲೂ ಡೆಬ್ಯು ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನ ಮೊದಲ ಇನ್ನಿಂಗ್ಸ್‌ನಲ್ಲೇ ಐದು ವಿಕೆಟ್ ಪಡೆದು ಮಿಂಚಿದರು. 2018-19ರ ರಣಜಿ ಸಾಲಿನಲ್ಲಿ ರೈಲ್ವೆಸ್ ವಿರುದ್ಧ ಚೊಚ್ಚಲ ಶತಕ ಸಾಧನೆ ಮಾಡಿದರು. ಬೆನ್ನಲ್ಲೇ ಕೋಲ್ಕತ್ತಾ ವಿರುದ್ಧ ಮಗದೊಂದು ಬಾರಿ ಐದು ವಿಕೆಟ್ ಸಾಧನೆ ಮಾಡಿದರು.

2018 ಡಿಸೆಂಬರ್ 17ರಂದು ಬರೋಡಾ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಅಲ್ಲದೆ ಮುಂಬೈ ಪರ ಎಂಟು ಪಂದ್ಯಗಳಲ್ಲಿ 23 ವಿಕೆಟ್ ಕಬಳಿಸಿ ಮುಂಚೂಣಿಯಲ್ಲಿ ಗುರುತಿಸಿಕೊಂಡರು. 16 ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದುಬೆ 1012 ರನ್ ಹಾಗೂ 40 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೂ ನಾಯಕ ವಿರಾಟ್ ಕೊಹ್ಲಿ ಹೆಚ್ಚಿನ ಬೆಂಬಲದೊಂದಿಗೆ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡರು.

ಇನ್ನು ಈವರೆಗೆ ಬಾಂಗ್ಲಾದೇಶ ವಿರುದ್ಧದ ಎಲ್ಲಾ ಪಂದ್ಯಗಳಿಗೂ ಆಯ್ಕೆಯಾಗಿದ್ದ ಒಬ್ಬ ಆಟಗಾರ ಈ ಬಾರಿ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಯಿಂದ ರೈನಾ ಹೊರಗುಳಿದಿದ್ದಾರೆ.

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಈವರೆಗೆ ಒಟ್ಟು 8 ಟಿ-20 ಪಂದ್ಯಗಳನ್ನು ಆಡಿದೆ. ಈ ಎಲ್ಲಾ ಪಂದ್ಯಗಳಲ್ಲಿ ರೈನಾ ಆಡಿದ್ದರು. ಆದರೆ ಇದೇ ಮೊದಲ ಬಾರಿ ಇವರ ಅನುಪಸ್ಥಿತಿಯಲ್ಲಿ ಭಾರತ ಟಿ-20 ಪಂದ್ಯ ಆಡುತ್ತಿದೆ.

ಒಂದು ಕಾಲದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರ ಸ್ತಂಭವಾಗಿದ್ದ ಸುರೇಶ್ ರೈನಾ ಸದ್ಯ ಮೈದಾನಕ್ಕಿಳಿಯದೆ ಸುಮಾರು ಆರು ತಿಂಗಳುಗಳೇ ಕಳೆದಿವೆ. 2019ರ ಐಪಿಎಲ್​ನಲ್ಲಿ ನೀರಸ ಪ್ರದರ್ಶನ ತೋರಿದ ಇವರು ಬಳಿಕ ಮೊಣಕಾಲು ಸರ್ಜರಿಗೆ ತುತ್ತಾದರು. ಕಳಪೆ ಫಾರ್ಮ್​ನಿಂದಾಗಿ ದೇಶೀಯ ಕ್ರಿಕೆಟ್​ನಿಂದಲೂ ಹೊರ ನಡೆಯಬೇಕಾಯಿತು. ಸದ್ಯ ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲು ಹರಸಾಹಸ ಪಡುತ್ತಿರುವ ರೈನಾಗೆ ಅವಕಾಶ ಒದಗಿಬರುತ್ತಿಲ್ಲ. (ಎಂ.ಎನ್)

Leave a Reply

comments

Related Articles

error: