ಮೈಸೂರು

ಕುಕ್ಕರಹಳ್ಳಿ ಕೆರೆ ಹೂಳೆತ್ತದಿರಿ : ಪರಿಸರ ಪ್ರೇಮಿಗಳ ಒತ್ತಾಯ ;ಪ್ರತಿಭಟನೆ

ಕುಕ್ಕರಹಳ್ಳಿ ಕೆರೆ ಉಳಿಸಿ, ಜೀವ ವೈವಿಧ್ಯತೆಯನ್ನು ರಕ್ಷಿಸಿ ಎಂದು ಒತ್ತಾಯಿಸಿ ಕುಕ್ಕರಹಳ್ಳಿ ಉಳಿಸಿ ಸಮಿತಿ ವತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೆರೆಯು ಮಳೆಯ ನೀರಿನ ಅಭಾವದಿಂದ ನರಳುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳ ಸತತ ಬರಗಾಲದಿಂದ ಕೆರೆಯ ನೀರಿನ ಮಟ್ಟ ಕನಿಷ್ಠ ಪ್ರಮಾಣಕ್ಕೆ ಇಳಿದಿದೆ. ಮೈಸೂರಿನ ಸುತ್ತಮುತ್ತ ಇರುವ ನೀರಿನ ಸೆಲೆಗಳೆಲ್ಲಾ ಬತ್ತಿಹೋಗಿದ್ದು, ಸ್ವಲ್ಪ ನೀರು ಉಳಿದಿರುವ ಕುಕ್ಕರಹಳ್ಳಿ ಕೆರೆಯ ಹಲವು ವಲಸೆ ಹಕ್ಕಿಗಳ ಏಕೈಕ ಆಶ್ರಯತಾಣವಾಗಿದ್ದು, ಇಂತಹ ಹೊತ್ತಿನಲ್ಲಿ ಕುಕ್ಕರಹಳ್ಳಿ ಕೆರೆಯಲ್ಲಿ ಹೂಳೆತ್ತುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ವಿಷಮ ಪರಿಸ್ಥಿತಿಯಲ್ಲಿ ಕೆರೆಯಲ್ಲಿನ ಅಭಿವೃದ್ಧಿ ಕಾರ್ಯಗಳು ಕೆರೆಯ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೇ ವಿನ: ಅದನ್ನು ಹಾಳುಗೆಡವಬಾರದು. ಈಗಾಗಲೇ ಅನೇಕ ಸಂಘಟನೆಗಳು ಹಾಗೂ ಪರಿಸರ ತಜ್ಞರು ವಿಶ್ವವಿದ್ಯಾಲಯದ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು, ಅವೈಜ್ಞಾನಿಕ ಅಭಿವೃದ್ಧಿ ಕಾರ್ಯಗಳ ಕುರಿತು ಗಮನ ಸೆಳೆದಿದ್ದಾರೆ. ಕೆರೆಯಂಚಿನಲ್ಲಿ ಹೂಳೆತ್ತುವ ಕಾರ್ಯವನ್ನು ಈ ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪರಿಸರ ಪ್ರೇಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವಾಯುವಿಹಾರಿಗಳು ಸೇರಿದಂತೆ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: