ಪ್ರಮುಖ ಸುದ್ದಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಸಿಎನ್‍ಸಿ ಪ್ರತಿಭಟನೆ

ರಾಜ್ಯ( ಮಡಿಕೇರಿ) ಅ.25 :- ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ದೇವಟ್ ಪರಂಬು ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆ ಯಾಚನೆ ಮಾಡಬೇಕೆಂದು ಆಗ್ರಹಿಸಿ ‘ನವದೆಹಲಿ ಚಲೋ’ ಸತ್ಯಾಗ್ರಹ ಹಮ್ಮಿಕೊಂಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಇದಕ್ಕೆ ಪೂರ್ವಭಾವಿಯಾಗಿ ಇಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವರ ಸಾಕ್ಷಿ ಪ್ರಜ್ಞೆಯಾದ ಸಿ.ಎನ್.ಸಿ ಕೊಡವ ನಾಷನಲ್ ಕೌನ್ಸಿಲ್ ಆಶ್ರಯದಲ್ಲಿ ನ.1 ರ ಕರ್ನಾಟಕ ರಾಜ್ಯೋತ್ಸವ ದಿನವನ್ನು ದುರಾಕ್ರಮಣ ವಿರೋಧಿ ದಿನವೆಂದು ಪರಿಗಣಿಸಿ ನವದೆಹಲಿಯ ಪಾರ್ಲಿಮೆಂಟ್ ಭವನದ ಮುಂದೆ ಶಾಂತಿಯುತ ಸತ್ಯಾಗ್ರಹ ನಡೆಸುವುದರ ಮೂಲಕ ನಮ್ಮ ಸಾತ್ವಿಕ ಪ್ರತಿರೋಧವನ್ನು ದಾಖಲಿಸುತ್ತಿರುವುದಾಗಿ ತಿಳಿಸಿದರು.
1956ರ ನವೆಂಬರ್ 1 ರಂದು ಕೊಡಗು ‘ಸಿ’ ರಾಜ್ಯ ವಿಶಾಲ ಮೈಸೂರು, ಇಂದಿನ ಕರ್ನಾಟಕದಲ್ಲಿ ವಿಲೀನಗೊಂಡಿತು. ಬಳಿಕ ಅಕ್ಷರಶಃ ಕೊಡಗಿನ ಕೊಡವರ ಭಾಷೆ, ಸಂಸ್ಕೃತಿಯನ್ನು , ಸ್ವಂತಿಕೆಯನ್ನು ನಾಶ ಮಾಡುವ ಬಲವಂತದ ಪ್ರಯತ್ನಗಳು ನಡೆಯಿತೆಂದು ಬೇಸರ ವ್ಯಕ್ತಪಡಿಸಿ, ಈ ಹಿನ್ನೆಲೆಯಲ್ಲಿ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿರುವುದಾಗಿ ಹೇಳಿದರು.
ನಮ್ಮ ಪ್ರಧಾನ ಹಕ್ಕೂತ್ತಾಯದ ಅಂತಿಮ ಗುರಿ ತಲುಪುವಲ್ಲಿಯವರೆಗೆ ನಮ್ಮ ಈ ಶಾಸನಬದ್ಧ ಆಶೋತ್ತರವನ್ನು ಪ್ರಚುರ ಪಡಿಸುವುದನ್ನು ಮುಂದುವರೆಸುತ್ತೇವೆ. ಅದಕ್ಕಾಗಿಯೇ ನವೆಂಬರ್ 1 ರಂದು ನವದೆಹಲಿ ಚಲೋ ಸತ್ಯಾಗ್ರಹ ಹಮ್ಮಿಕೊಂಡಿದ್ದು ಆ ಮೂಲಕ ಆಡಳಿತಾಂಗದ ಕಣ್ಣು-ಕಿವಿ ತೆರೆಸುವುದರೊಂದಿಗೆ ಜಗತ್ತಿನ ಧರ್ಮ ಪಜ್ಞೆಯನ್ನು ಜಾಗೃತಿಗೊಳಿಸಲಿದ್ದೇವೆ ಎಂದರು.
ನ.1 ರಂದು ಬೆಳಗ್ಗೆ 9 ಗಂಟೆಯಿಂದ 11.30 ರವರೆಗೆ ನವದೆಹಲಿಯ ಫ್ರೆಂಚ್ ರಾಯಭಾರಿ ಕಛೇರಿ ಮುಂದೆ ದೇವಟ್‍ಪರಂಬು ದುರಂತಕ್ಕೆ ಟಿಪ್ಪುವಿನೊಂದಿಗೆ ಕಾರಣರಾದ ಫ್ರೆಂಚ್ ಸರ್ಕಾರ ಕೊಡವರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ಸತ್ಯಾಗ್ರಹ ನಡೆಸಲಿದ್ದೇವೆ. ಬಳಿಕ 11.30 ರಿಂದ ಮಧ್ಯಾಹ್ನ 3.30 ರವರೆಗೆ ‘ಕೊಡವ ಲ್ಯಾಂಡ್’ಗೆ ಆಗ್ರಹಿಸಿ ‘ಸಂಸತ್ ಮಾರ್ಗ-ಪಾರ್ಲಿಮೆಂಟ್ ಸ್ಟ್ರೀಟ್’ನಲ್ಲಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದರು.
ಈ ಸತ್ಯಾಗ್ರಹದಲ್ಲಿ ಕೊಡಗಿನ ವಿವಿಧೆಡೆಗಳ ಸುಮಾರು 25 ಮಂದಿ ಕೊಡವ-ಕೊಡವತಿ ಸ್ವಯಂಸೇವಕರು ಸಾಂಪ್ರದಾಯಿಕ ಉಡುಗೆ ತೊಟ್ಟು ಪಾಲ್ಗೊಳ್ಳಲಿದ್ದಾರೆ ಎಂದು ನಾಚಪ್ಪ ತಿಳಿಸಿದರು.
ಬೇಡಿಕೆಗಳು
ಸಂವಿಧಾನದ 371 ನೇ ವಿಧಿ ಪ್ರಕಾರ ಕೊಡಗು ಅಭಿವೃದ್ದಿ ಮಂಡಳಿ ರಚನೆ ಮಾಡಬೇಕು. ಜಮ್ಮಾಭೂಮಿ ಸಂಬಂಧ 2011 ರ ಭೂಕಂದಾಯ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಮತ್ತು ಈಶಾನ್ಯ ಭಾರತದ ಮಾದರಿಯಲ್ಲಿ 371ನೇ ವಿಧೀ ಪ್ರಕಾರ ಇನ್ನರ್ ಲೈನ್ ಪರ್ಮಿಟ್ ಮೂಲಕ ಭದ್ರತೆ ಒದಗಿಸಬೇಕು. ಕೊಡವರ ಭೂಮಿ ಸಾಂಪ್ರದಾಯಿಕ ವೈಯಕ್ತಿಕ ಕಾಯ್ದೆ, ಜನಪದ ಕಾಯ್ದೆ, ಧಾರ್ಮಿಕ ನಂಬಿಕೆಯನ್ನು ಸಂರಕ್ಷಿಸಲು ಮಿಜೋ ಮತ್ತು ನಾಗಾಗಳಿಗೆ ಕೊಡ ಮಾಡಿದ ಸಂರಕ್ಷಣೆ ಬೇಕು ಹಾಗೂ ಈಗಾಗಲೇ ರ್ಯಾಡಿಕಲ್ ಜಿಹಾದಿ ಭಯೋತ್ಪಾದಕ ಇಸೀಸ್ ಸಂಬಂಧ ಹೊಂದಿರುವ ಭೂಗತ ಜಗತ್ತಿನ ಭೂಮಾಫಿಯಾಗಳು, ರಿಯಲ್ ಎಸ್ಟೇಟ್, ಕುಳಗಳು, ಹವಾಲ ಅಕ್ರಮಿಗಳು, ಖೋಟಾನೋಟು ಜಾಲದವರು ದಾವೂದ್ ಇಬ್ರಾಹಿಂ ಡಿ ಕಂಪೆನಿಯವರು, ಕೃಷಿ ಭೂಮಿಯಲ್ಲಿ ಎಲ್ಲಾ ನಿರ್ಮಾಣ ದಂಧೆಕೋರರು ಅನಿವಾಸಿ ಭಾರತೀಯರು ಬಹುರಾಷ್ಟ್ರೀಯ ಉದ್ಯಮಿಗಳು ಕೊಡಗಿನ ಭೂಮಿಯನ್ನು ಕಬಳಿಸುತ್ತಿದ್ದು ಈ ನೆಲದಲ್ಲಿ ನಮ್ಮನ್ನು ಅನಾಥರಾಗಿಸಿದ ಹಿನ್ನೆಲೆಯಲ್ಲಿ ನಮ್ಮ ಹಕ್ಕು ಸಂರಕ್ಷಣೆಗೆ ಸಂವಿಧಾನದ 371 ವಿಧಿ ಜಾರಿಯಾಗಬೇಕು ಅಂತೆಯೇ ಮಣಿಪುರ ಮತ್ತಿತರೆಡೆ ಇರುವಂತೆ ನಮ್ಮ ನೆಲದಲ್ಲಿ ಪ್ರವೇಶಿಸಲು ಇನ್ನರ್ ಲೈನ್ ಪರ್ಮಿಟ್ ಜಾರಿ ಮಾಡಬೇಕು.
ನಿರಾಯುಧ ಕೊಡವರನ್ನು 1785 ರ ಡಿಸೆಂಬರ್ 12 ರಂದು ನರಮೇಧ ಘಟಿಸಿದ ದೇವಾಟ್ ಪರಂಬ್ ದುರಂತ ಘನಘೋರ ಹತ್ಯಾಕಾಂಡವಾಗಿದೆ. ಕೊಡವರ ಚರಿತ್ರೆಯಲ್ಲಿನ ಈ ಯಾತನಾದಾಯಕ ಅಧ್ಯಾಯದ ನೋವು ಮತ್ತು ವೇದನೆ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತಲೇ ಇದೆ. ವಿಶ್ವ ಸಂಸ್ಥೆಯ ಹೋಲೋಕಾಸ್ಟ್ ರಿಮೆಂಬರೆನ್ಸ್ ಪಟ್ಟಿಯಲ್ಲಿ ದೇವಾಟ್ ಪರಂಬ್ ದುರಂತ ಸೇರ್ಪಡೆಯಾಗಬೇಕು ಮತ್ತು ವಿಶ್ವ ಸಂಸ್ಥೆಯ ಹೋಲೋಕಾಸ್ಟ್ ಮ್ಯೂಸಿಯಂ ರಚನೆಯಾಗಬೇಕು. ಅಂತರರಾಷ್ಟ್ರೀಯ ಮಟ್ಟದ ನರಮೇಧ ಸ್ಮಾರಕ ಸಮಾಧಿಯನ್ನು ನಿರ್ಮಿಸಲು ಭಾರತ ಸರ್ಕಾರ ಮತ್ತು ಫ್ರೆಂಚ್ ಸರ್ಕಾರ ಕೂಡ ಆರ್ಥಿಕ ಸಹಾಯ ನೀಡಬೇಕು. ಇಂಡಿಯನ್ ಆಮ್ರ್ಸ್ ಆಕ್ಟ್ ಸೆಕ್ಷನ್ 3 ಮತ್ತು 4 ರನ್ವಯ ಕೊಡವರು ಮತ್ತು ಜಮ್ಮ ಹಿಡುವಳಿದಾರರಿಗೆ ಕೋವಿ ಹೊಂದಲಿರುವ ವಿನಾಯಿತಿ ಹಕ್ಕು ಅಭಾದಿತವಾಗಿ ಮುಂದುವರೆಯಬೇಕು. ಅದಕ್ಕಾಗಿ ಇಂಡಿಯನ್ ಆರ್ಮ್ಸ್ ಆ್ಯಕ್ಟ್ ಗೆ ಸೂಕ್ತ ತಿದ್ದುಪಡಿ ತರಬೇಕು.
ಕಾವೇರಿ ಮತ್ತು ಅದರ ಉಪನದಿಗಳಿಗೆ ತುರ್ತಾಗಿ ಜೀವಂತ ವ್ಯಕ್ತಿಯ ಶಾಸನಬದ್ದ ಸ್ಥಾನಮಾನ (ಲಿವಿಂಗ್ ಎಂಟಿಟೀಸ್ ಹ್ಯಾವಿಂಗ್ ದಿ ಸ್ಟೇಟಸ್ ಆಫ್ ಎ ಲೀಗಲ್ ಪರ್ಸನ್) ನೀಡಬೇಕು. ಈ ಸಂಬಂಧ ರಾಷ್ಟ್ರಪತಿಗಳು ತುರ್ತಾಗಿ ಸುಗ್ರಿವಾಜ್ಞೆ ಹೊರಡಿಸಬೇಕು. ಕೊಡಗಿನಲ್ಲಿ ಗೋವಧೆ ಮತ್ತು ಗೋ ಸಾಗಾಣೆ ನಿಷೇಧಕ್ಕೆ ಆಗ್ರಹ–ಈ ಸಂಬಂಧ ಕೊಡವರ ಮತ್ತು ಕೊಡಗಿನ ಜನರ ಧಾರ್ಮಿಕ ಭಾವನೆಗಳ್ನು ಗೌರವಿಸಿ 16 ಜನವರಿ 1835 ರಲ್ಲೇ ಬ್ರಿಟೀಷ್ ಕಮೀಷನರ್ ಲೆಫ್ಟಿನೆಂಟ್ ಕರ್ನಲ್ ಜೆ.ಎಸ್ ಫ್ರೇಷರ್‍ರವರು ಹೊರಡಿಸಿದ ಆದೇಶವನ್ನು ಒಡನೆ ಸ್ಥಿರೀಕರಿಸಿ ಜಾರಿಗೊಳಿಸಬೇಕಲ್ಲದೆ ಸಂವಿಧಾನದ ನಿರ್ದೇಶಕ ತತ್ವ 48ನೇ ವಿಧಿಯಲ್ಲಿ ಗೋ ರಕ್ಷಣೆ ಹಾಗೂ ಗೋ ತಳಿ ಸಂವರ್ಧನೆಗೆ ತೋರಿರುವ ಬದ್ದತೆಯನ್ನು ಅನುಷ್ಠಾನಗೊಳಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: