ಪ್ರಮುಖ ಸುದ್ದಿಮೈಸೂರು

ಅಧಿಕಾರಿಗಳು ಶಾಶ್ವತವಾಗಿ ಉಳಿಯುವ ಕಾಮಗಾರಿಗಳನ್ನು  ಮಾಡಿಸಬೇಕು : ಸಚಿವ ವಿ ಸೋಮಣ್ಣ

ಮೈಸೂರು,ಅ.27:-   ಮಳೆ ಹಾಗೂ ಪ್ರವಾಹದಿಂದ ಹೆಚ್.ಡಿ ಕೋಟೆ ತಾಲೂಕಿನಲ್ಲಿ ಮನೆಗಳು, ರಸ್ತೆ, ಸೇತುವೆಗಳು ನಾಶವಾಗಿದ್ದು, ಪುನರ್ ನಿರ್ಮಾಣ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು.  ಅದರಂತೆ ಅಧಿಕಾರಿಗಳು ಶಾಶ್ವತವಾಗಿ ಉಳಿಯುವ ಕಾಮಗಾರಿಗಳನ್ನು  ಮಾಡಿಸಬೇಕು ಎಂದು ವಸತಿ, ರೇಷ್ಮೆ, ತೋಟಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್.ಡಿ ಕೋಟೆ ತಾಲೂಕಿನ ಖಾರಾಪುರಬಳಿ ಇರುವ  ಜಂಗಲ್ ಲಾಡ್ಜ್  ಅಂಡ್ ರೆಸಾರ್ಟ್ ನಲ್ಲಿಂದು  ಹೆಚ್.ಡಿ.ಕೋಟೆ ತಾಲೂಕಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಹೆಚ್.ಡಿ ಕೋಟೆ ತಾಲೂಕು ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ‌ಹಿಂದುಳಿದ ತಾಲೂಕು ಎಂದು ಗುರುತಿಸಲಾಗಿದೆ. ಈ ತಾಲೂಕಿನ ಅಭಿವೃದ್ಧಿಗೆ ಸರ್ಕಾರದ ವಿಶೇಷ ಅನುದಾನ ದೊರೆಯುತ್ತದೆ.  ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಮಳೆಯಿಂದ ಎಷ್ಟು ಪ್ರಮಾಣದ ತೊಂದರೆಯಾಗಿದೆ ಎಂಬುದನ್ನು ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತಹಶೀಲ್ದಾರ್ ಮಂಜುನಾಥ್   ಮಾತನಾಡಿ ಎ ಮತ್ತು ಬಿ ಕೆಟಗರಿಯಲ್ಲಿ ಒಟ್ಟು 575 ಮನೆಗಳು ನಾಶವಾಗಿದ್ದು, ಅವುಗಳಿಗೆ 5 ಲಕ್ಷ ರೂ.ಗಳ ಅನುದಾನವನ್ನು ಹಂತ ಹಂತವಾಗಿ ನೀಡಲಾಗುವುದು. ರಿಪೇರಿಗಾಗಿ 1480 ಮನೆಗಳಿಗೆ 25 ಸಾವಿರ ರೂ.ಗಳನ್ನು ಈಗಾಗಲೇ ನೀಡಲಾಗಿದ್ದು, ಒಟ್ಟು ತಾಲೂಕಿಗೆ 5.96 ಕೋಟಿ ರೂ.ಗಳನ್ನು  ಈಗಾಗಲೇ ಖರ್ಚುಮಾಡಲಾಗಿದೆ  ಎಂದು ಮಾಹಿತಿ ನೀಡಿದರು.

ಒಟ್ಟು 1080 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದ್ದು, ನಷ್ಟದ ಪ್ರಮಾಣ 1.80 ಲಕ್ಷ ರೂ.ಗಳು ಎಂದು ಅಂದಾಜಿಸಲಾಗಿದೆ. ತೋಟಗಾರಿಕೆ ಬೆಳೆ ನಾಶ ಪರಿಹಾರಕ್ಕೆ‌ 42 ಲಕ್ಷ.ರೂ ಒಟ್ಟು 2.22 ಲಕ್ಷ ರೂ.ಗಳ ಅನುದಾನ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

ತಾಲೂಕು ಶಿಕ್ಷಣಾಧಿಕಾರಿಗಳು ಮಾತನಾಡಿ ತಾಲೂಕಿನಲ್ಲಿ 30 ಶಾಲೆಯಲ್ಲಿ  65 ಕೊಠಡಿಗಳು ಸಂಪೂರ್ಣ ಹಾನಿಯಾಗಿದ್ದು, ಪುನರ್ ನಿರ್ಮಾಣ ಮಾಡಲು 6.89 ಕೋಟಿ ರೂ. ಹಾಗೂ 95 ಶಾಲೆಗಳ 184 ಕೊಠಡಿಗಳು ರಿಪೇರಿಯಲ್ಲಿದ್ದು ಅವುಗಳಿಗೆ 9 ಕೋಟಿ ರೂ.ಗಳು ಬೇಕಾಗಲಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನ ಎಲ್ಲಾ ಹಾಡಿಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅರಣ್ಯಾಧಿಕಾರಿಗಳು  ಹಾಡಿಗಳ ಜನರಿಗೆ ಮನೆ ನಿರ್ಮಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಹಾಡಿಗಳಿಗೆ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಮೂಲಭೂತ ಸೌಲಭ್ಯ ಒದಗಿಸುವ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಅವರು ತಾಲೂಕಿನಲ್ಲಿ ಮುಖ್ಯಸ್ಥರಾಗಿದ್ದು ತಾಲೂಕು ಅಭಿವೃದ್ಧಿಗಾಗಿ ತಾಲೂಕು ಮಟ್ಟದ 32 ಇಲಾಖೆಗಳ ಮುಖ್ಯಸ್ಥರನ್ನು ಪ್ರತಿ ತಿಂಗಳಿಗೊಮ್ಮೆ ಸಭೆ ಕರೆದು ತಾಲೂಕು ಪ್ರಗತಿ ಬಗ್ಗೆ ಸಭೆ ನಡೆಸಬೇಕು. ನಂತರ ಸಭೆಯ ನಡವಳಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಈ ನಿರ್ಣಯವನ್ನು ಎಲ್ಲಾ ತಾಲೂಕಿನ ತಹಶೀಲ್ದಾರ್ ಅವರಿಗೆ ಸುತ್ತೋಲೆ ಹೊರಡಿಸಿ ಎಂದು ಅಪರ ಜಿಲ್ಲಾಧಿಕಾರಿಗಳಿಗ ಸೂಚಿಸಿದರು.

ನಂತರ ಮಳೆಯಿಂದ ಮನೆ ಕಳೆದುಕೊಂಡಿದ್ದ ಬಿದರಹಳ್ಳಿ ಗ್ರಾಮದ 42 ಕುಟುಂಬಗಳಿಗೆ ಪಕ್ಕದ ಬಿದರಹಳ್ಳಿ ಹುಂಡಿ ಗ್ರಾಮದಲ್ಲಿ ನಿವೇಶನ ಹಂಚಿಕೆ ಮಾಡಿ ಮನೆಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಸಭೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಮ್, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ಹುಣಸೂರು ಉಪ ವಿಭಾಗಾಧಿಕಾರಿ ವೀಣಾ, ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪಿ.ವಿ ಸ್ನೇಹಾ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: