Uncategorized

29 ವರ್ಷಗಳ ಹೋರಾಟ ವ್ಯರ್ಥವಾಗಿಲ್ಲ : ಸಿಎನ್‍ಸಿ ಅಧ್ಯಕ್ಷ ನಾಚಪ್ಪ ಅಭಿಪ್ರಾಯ

ರಾಜ್ಯ( ಮಡಿಕೇರಿ) ಅ.28 : – ಕೊಡವ ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್ ರಚನೆಗೆ ಪೂರಕವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಖ್ಯಾತ ಅರ್ಥಶಾಸ್ತ್ರಜ್ಞ, ಕೇಂದ್ರದ ಮಾಜಿ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಕಳೆದ 29 ವರ್ಷಗಳ ಹೋರಾಟ ವ್ಯರ್ಥವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆ ಪ್ರತಿರೋಧಿಸಿ ನವದೆಹಲಿಯಲ್ಲಿ ಸತ್ಯಾಗ್ರಹ ಹಮ್ಮಿಕೊಂಡ ಹಿನ್ನೆಯಲ್ಲಿ ಡಾ. ಸ್ವಾಮಿ ಅವರು, ಅ.26ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕರ್ನಾಟಕದಡಿಯಲ್ಲೇ ಕೊಡವ ಅಟೋನಮಸ್ ಡೆವಲಪ್‍ಮೆಂಟ್ ಕೌನ್ಸಿಲ್ ರಚನೆಗೆ ಪೂರಕವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೋರಿರುವುದು ಅತ್ಯಂತ ಮಹತ್ವದ ವಿಚಾರವಾಗಿದೆ ಎಂದು ಹೇಳಿದರು.
ಪ್ರಖರ ಹಿಂದುಗಳು ಮತ್ತು ಅಪ್ರತಿಮ ರಾಷ್ಟ್ರೀಯವಾದಿಗಳೂ ಆದ ಕೊಡವ ಬುಡಕಟ್ಟು ಜನ ಈ ದೇಶದ ಭದ್ರತೆಗೆ ಸೇನಾ ಪಡೆಯ ಮೂಲಕ ವಿಶೇಷ ಕಾಣಿಕೆ ನೀಡಿದ್ದು, ಅವರ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಅವರ ಸಬಲೀಕರಣಕ್ಕೆ ಕೊಡವ ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್ ತುರ್ತಾಗಿ ಆಗಬೇಕೆಂದು ಕಳೆದ ಸಾಲಿನ ಆಗಸ್ಟ್‍ನಲ್ಲಿ ಶ್ರೀ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಅನಂತ್‍ಕುಮಾರ್ ಅವರೊಂದಿಗೆ ಚರ್ಚಿಸಲಾಗಿತ್ತು. ಈ ಸಂದರ್ಭ ಕರ್ನಾಟಕದ ಒಳಗಡೆ ಕೊಡವ ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್ ರಚನೆಯಾಗುವುದಾದಲ್ಲಿ ತಾನು ಅತ್ಯಂತ ಸಂತೋಷಪಡುವುದಾಗಿ ದಿವಂಗತ ಅನಂತ್‍ಕುಮಾರ್ ಅಂದು ಹೇಳಿದ್ದನ್ನು ಡಾ. ಸ್ವಾಮಿ ಅವರು ಪತ್ರದಲ್ಲಿ ನೆನಪಿಸಿದ್ದಾರಲ ಅನಂತ್‍ಕುಮಾರ ಅವರ ಅಕಾಲಿಕ ನಿಧನದಿಂದ ಈ ಸಂಬಂಧ ಬಹಳ ನಷ್ಟವಾಗಿದೆ ಎಂದು ಡಾ. ಸ್ವಾಮಿ ವಿಷಾದಿಸಿರುವುದನ್ನು ನಾಚಪ್ಪ ಬಹಿರಂಗಪಡಿಸಿದರು.
ಕೊಡಗಿನಲ್ಲಿ ಕೊಡವರ ನೆಲವನ್ನು ಕಪ್ಪು ಹಣದ ರಾಜಕೀಯ ವ್ಯಕ್ತಿಗಳು ಕಬಳಿಸುವ ಮೂಲಕ ಕೊಡವರನ್ನು ನಿರಂತರ ಶೋಷಣೆ ಮಾಡುತ್ತಾ ಬಂದ ಹಿನ್ನೆಯಲ್ಲಿ ಕೊಡವರ ಅಮೋಘ ಕಾಣಿಕೆಯನ್ನು ಪರಿಗಣಿಸಿ ಅವರಿಗೆ ರಾಜ್ಯಾಂಗದತ್ತ ಹಕ್ಕನ್ನು ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್ ಮೂಲಕ ಕಲ್ಪಿಸಬೇಕೆಂದು ಡಾ. ಸ್ವಾಮಿ ಒತ್ತಾಯಿಸಿದ್ದಾರೆ ಎಂದು ಹೇಳಿದರು.
ಕಳೆದ 29 ವರ್ಷಗಳ ಆಂದೋಲನದಲ್ಲಿ 25 ವರ್ಷಗಳ ಕಾಲ ನಿರಂತರವಾಗಿ ನವೆಂಬರ್ 1ರ ರಾಜ್ಯೋತ್ಸವ ದಿನದಂದು ಕೊಡವ ಲ್ಯಾಂಡ್ ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್ ರಚನೆಯ ಮೂಲಕ ಅಪೂರ್ಣಗೊಂಡ ಕರ್ನಾಟಕ ಪರಿಕಲ್ಪನೆಯನ್ನು ಸಾಕಾರಗೊಳಿಸಬೇಕೆಂದು ಸತ್ಯಾಗ್ರಹದ ಮೂಲಕ ಸಿಎನ್‍ಸಿ ಹಕ್ಕೊತ್ತಾಯ ಮುಂದಿಡುತ್ತಲೇ ಬಂದಿತ್ತು. ರಾಜ್ಯೋತ್ಸವ ಆಚರಣೆ ಮತ್ತು ಕೊಡವರ ಸತ್ಯಾಗ್ರಹದ ಬೆನ್ನಲೇ ಡಾ. ಸ್ವಾಮಿಯವರಿಂದ ಬಂದಿರುವ ಈ ಪತ್ರ ಬಹಳ ಮಹತ್ವ ಪಡೆದಿದೆ. ಏಕೆಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಬಲ ಎನ್‍ಡಿಎ- ಬಿಜೆಪಿ ಆಡಳಿತಾಂಗದ ಪ್ರಮುಖ ರಾಷ್ಟ್ರೀಯ ಧುರೀಣರೊಬ್ಬರು ಕೊಡವರ ನೈಜ ಧ್ವನಿಗೆ ಶಾಸನಾತ್ಮಕ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ಒತ್ತಾಯಪೂರ್ವಕವಾಗಿ ಪ್ರತಿಪಾದಿಸಿರುವುದನ್ನು ಕೇಂದ್ರವಾಗಲಿ, ರಾಜ್ಯ ಸರಕಾರವಾಗಲಿ ಲಘವಾಗಿ ಪರಿಗಣಿಸುವಂತಿಲ್ಲ ಎಂದು ನಾಚಪ್ಪ ವಿಶ್ಲೇಷಿಸಿದರು.
ಕೊಡವರ ಪರ ಡಾ. ಸ್ವಾಮಿಯವರ ಫಲಾಪೇಕ್ಷೆಯಿಲ್ಲದ ಕಾಳಜಿಗೆ ನಾವು ಅಭಾರಿಯಾಗಿರುವುದಾಗಿ ತಿಳಿಸಿದ ನಾಚಪ್ಪ ಅವರು, ಡಾ. ಸುಬ್ರಹ್ಮಣ್ಯ ಸ್ವಾಮಿಯವರು ಯಾವುದೇ ಒಂದು ವಿಚಾರವನ್ನು ಒಮ್ಮೆ ವಿವೇಚನಾಯುಕ್ತವಾಗಿ ಮನವರಿಕೆ ಮಾಡಿಕೊಂಡರೆ ಅದನ್ನು ಸಾಧಿಸಲು ಎಷ್ಟೇ ಅಡೆತಡೆ ಇದ್ದರೂ ಲೆಕ್ಕಿಸದೆ ಮುಂದಡಿ ಇಡುತ್ತಾರೆ. ಅದೆಷ್ಟೇ ವರ್ಷಗಳಾದರೂ ತಾನು ಕೈಗೆತ್ತಿಕೊಂಡ ವಿಚಾರಧಾರೆ ಸರಿ ಎಂದು ಕಂಡರೆ ಅತ್ಯಂತ ಬದ್ಧತೆಯಿಂದ ಅದನ್ನು ಕಾರ್ಯಗತಗೊಳಿಸಲು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವುದ ಅವರ ಜಾಯಮಾನ ಎಂಬುದೂ ಸತ್ಯ. ಈ ಹಿನ್ನೆಯಲ್ಲಿ ಕೊಡವ ಡೆವಲಪ್‍ಮೆಂಟ್ ಕೌನ್ಸಿಲ್ ಕಾರ್ಯ ಸಾಧನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದಲ್ಲಿ ವಿವಿಧ ಅಲ್ಪಸಂಖ್ಯಾತ ಬುಡಕಟ್ಟು ಕುಲಗಳಿಗೆ ಸ್ವಾಯತ್ತ ಪ್ರದೇಶಗಳನ್ನು ಮತ್ತು ಅಭಿವೃದ್ಧಿ ಪರಿಷತ್‍ಗಳನ್ನು ಕಾಲಕಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಚಿಸುತ್ತಾ ಬಂದಿದೆ. ಅಂತೆಯೇ ಕರ್ನಾಟಕದಲ್ಲಿ ಕ್ರಿಶ್ಚಿಯನ್ ಡೆವಲಪ್‍ಮೆಂಟ್ ಕೌನ್ಸಿಲ್, ಬಂಜಾರ ಡೆವಲಪ್‍ಮೆಂಟ್ ಕೌನ್ಸಿಲ್, ವಾಲ್ಮೀಕಿ ಡೆವಲಪ್‍ಮೆಂಟ್ ಕಾರ್ಪೋರೇಷನ್, ಬ್ರಾಹ್ಮಿನ್ ಡೆವಲಪ್‍ಮೆಂಟ್ ಕೌನ್ಸಿಲ್ ಇತ್ಯಾದಿಗಳನ್ನು ರಚಿಸಿರುವಾಗ ಕೊಡವ ಅಭಿವೃದ್ಧಿ ಪರಿಷತ್ ರಚನೆಗೊಂಡರೆ ಅದಕ್ಕೆ ಯಾರೂ ಪೂರ್ವಾಗ್ರಹ ಪೀಡಿತರಾಗಬೇಕಾಗಿಲ್ಲ. ಬದಲಾಗಿ ಸಂತೋಷಿಸಬೇಕು. ಅಷ್ಟಕ್ಕೂ ಸಿಎನ್‍ಸಿಯ ನಿರಂತರ ಹಕ್ಕೊತಾಯವನ್ನು ಪರಿಗಣಿಸಿದ ಸಂವಿಧಾನ ಪುನರ್ ವಿಮರ್ಶಾ ಆಯೋಗ 2002ರಲ್ಲಿ ಕೊಡವ ಅಟೋನೊಮಸ್ ಡೆವಲಪಮೆಂಟ್ ಕೌನ್ಸಿಲ್‍ಗೆ ಶಿಫಾರಸ್ಸು ಮಾಡಿರುವುದನ್ನೂ ಇಲ್ಲಿ ನೆನಪಿಸಬೇಕಿದೆ ಎಂದೂ ನಾಚಪ್ಪ ತಿಳಿಸಿದರು. ಮಾಡಿತ್ತು ಎಂಬುವುದನ್ನು ಇಲ್ಲಿ ನೆನಪಿಸಬೇಕಾಗಿದೆ.
ನ.1ರಂದು ದೆಹಲಿ ಚಲೋ: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ರಾಜ್ಯಾಂಗ ಖಾತರಿ, ದೇವಾಟ್‍ಪರಂಬು ನರಮೇಧದಲ್ಲಿ ಕೊಡವರನ್ನು ಹತ್ಯೆಗೈದಿರುವುದಕ್ಕಾಗಿ ಫ್ರೆಂಚ್ ಸರಕಾರ ಕ್ಷಮೆ ಕೇಳಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನ.1ರಂದು ಪ್ರತೀವರ್ಷದಂತೆ ದೆಹಲಿ ಚಲೋ ಸತ್ಯಾಗ್ರಹ ನಡೆಸಲಿದೆ ಎಂದು ನಾಚಪ್ಪ ಅವರು ಇದೇ ಸಂದರ್ಭ ತಿಳಿಸಿದರು.
ನ.1ರಂದು ಪೂರ್ವಾಹ್ನ 9ರಿಂದ 11.30 ಗಂಟೆಯವರೆಗೆ ದೆಹಲಿಯ ಫ್ರೆಂಚ್ ರಾಯಭಾರಿ ಕಚೇರಿ ಮುಂದೆ 2ನೇ ವರ್ಷದ ಹಾಗೂ ಪೂರ್ವಾಹ್ನ 11.30ರಿಂದ ಅಪರಾಹ್ನ 3.30 ಗಂಟೆಯವರೆಗೆ ಸಂಸತ್ ಮಾರ್ಗದಲ್ಲಿ ಸತ್ಯಾಗ್ರಹ ನಡೆಸುವ ಮೂಲಕ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಾಟುಮಣಿಯಂಡ ಉಮೇಶ್, ಕೂಪದಿರ ಸಾಬು, ಚಂಬಂಡ ಜನತ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: